ಶಿವಮೊಗ್ಗ

ಭದ್ರೆಯ ಅಬ್ಬರಕ್ಕೆ ಭದ್ರಾವತಿ ತತ್ತರ

Published On :

ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ  ಆ.2
ಗುರುವಾರ ರಾತ್ರಿ ಭದ್ರಾ ಅಣೆಕಟ್ಟಿನಿಂದ ಸುಮಾರು 60,000 ಕ್ಯೂಸೆಕ್ಸ್ ನೀರು ಹೊರಬಿಟ್ಟ ಪರಿಣಾಮ ಭದ್ರಾ ನದಿಯಲ್ಲಿನ ಪ್ರವಾಹ ಮತ್ತಷ್ಟು ಉಕ್ಕಿ ಹರಿದು ಪಟ್ಟಣದ ಅಂಬೇಡ್ಕರ್ ಕಾಲೊನಿ ನೀರು ನುಗ್ಗಿ ಹಲವಾರು ಮನೆಗಳಿಗೆ ಹಾನಿಯನ್ನುಂಟುಮಾಡಿತು.
ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಪ್ರವಾಹದಲ್ಲಿ ಮುಳುಗಿಹೋಗಿದ್ದು, ಇದನ್ನು ನೋಡಲು ಜನರು ಸಾಗರೋಪಾದಿಯಲ್ಲಿ ಬಸ್ ನಿಲ್ದಾಣದ ಬಳಿ ಮತ್ತು ಸಿದ್ದಾರೂಢನಗರದ ಬಳಿ ಜಮಾಯಿಸಿದ್ದು, ಅವರನ್ನು ಮತ್ತು ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು  ಹರಸಾಹಸ ಪಡುತ್ತಿದ್ದಾರೆ.
ಮನೆ ಜಲಾವೃತ: ಅಂಬೇಡ್ಕರ್ ಕಾಲೊನಿಯಲ್ಲಿ ನೀರು ನುಗ್ಗಿ, ಹಲವು ಮನೆಗಳು ಜಲಾವೃತವಾಗಿವೆ. ಹಾಲಪ್ಪ ವೃತ್ತದಲ್ಲಿ ಇಲ್ಲಿನ ನಿವಾಸಿಗಳಿಗೆ ಗಂಜಿಕೇಂದ್ರ ತೆರೆಯಲಾಗಿದ್ದು, ಪ್ರವಾರ ಸಂತ್ರಸ್ತರನ್ನು ಅಲ್ಲಿಗೆ ವರ್ಗಾಯಿಸಲಾಗುತ್ತಿದೆ. ಬೆಳಗಿನ ಉಪಾಹಾರಕ್ಕೆಂದು ಜನರು ಅಲ್ಲಿಗೆ ಹೋದರೆ ಅಲ್ಲಿ ಏನೂ ದೊರಕಲಿಲ್ಲ ಎಂದು ಪ್ರವಾಹ ಸಂತ್ರಸ್ತರು ಅಲ್ಲಿಗೆ ಭೇಟಿ ನೀಡಿದ ಸುದ್ದಿಗಾರರಲ್ಲಿ ತಮ್ಮ ಅಳಲು ತೋಡಿಕೊಂಡರು.
ಭದ್ರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಕವಲಗುಂದಿ, ಏಕೆಂಶಾ ಕಾಲೋನಿ, ಮೂಪಾ ಕಾಂಪೌಂಡ್ ಮೊದಲಾದ ತಗ್ಗು ಪ್ರದೇಶದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗಿ ಹಾನಿ ಪ್ರಮಾಣ ಹೆಚ್ಚಾಗಿದೆ. ಪಟ್ಟಣದ ಪಿ.ಡಬ್ಲ್ಯೂ.ಡಿ ಕಾಲೋನಿ ಮತ್ತು ಎಂ.ಎಂ. ಕಾಂಪೌಂಡ್ಗೆ ಹೋಗುವ ಜನ ಅಲ್ಲಿನ ರೇಲ್ವೇ ಫ್ಲೈಓವರ್ ಸೇತುವೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬೈಪಾಸ್ ರಸ್ತೆಯ ಮೂಲಕ ಓಡಾಡುವ ಅನಿವಾರ್ಯತೆ ಎದುರಾಗಿದೆ.
ನಿಲ್ದಾಣಕ್ಕೂ ಪ್ರವಾಹ: ಭದ್ರಾನದಿಯಲ್ಲಿ ಪ್ರವಾಹ ಉಕ್ಕಿದ ಕಾರಣ ನದಿಯ ನೀರು ಖಾಸಗಿ ಬಸ್ ನಿಲ್ದಾಣದಲ್ಲಿಯೂ ನುಗ್ಗಿ ಬೆಳಗ್ಗೆ ಖಾಸಗಿ ಬಸ್ಗಳು ಜನರನ್ನು ಹತ್ತಿಸಿಕೊಳ್ಳಲು ರಸ್ತೆಯಲ್ಲೇ ನಿಂತುಕೊಳ್ಳಬೇಕಾಯಿತು.
ಹೊಸ ಸೇತುವೆ ನದಿಯಲ್ಲಿ ಮುಳುಗಿ ಹೋಗಿರುವುದರಿಂದ ವಾಹನಗಳನ್ನು ಬಿ.ಎಚ್. ರಸ್ತೆಯ ಮೂಲಕವೇ ಸಂಚರಿಸಲು ಬಿಡಲಾಗುತ್ತಿದೆ.
ಹಳೆ ಸೇತುವೆ ಮೇಲೆ ಸಂಚಾರ ಇಕ್ಕಟ್ಟಾಗಿ ವಾಹನಗಳು ಮತ್ತು ಪಾದಚಾರಿಗಳು ಸಂಚರಿಸುವುದು ಬಹುಕಷ್ಟವಾಗಿದೆ. ಸಂಚಾರ ಪೋಲಿಸರು ಸೇತುವೆಯ ಮೇಲೆ ಸಂಚಾರ ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದಾರೆ.
ಹೆಚ್ಚಿದ ಮಳೆ: ಶುಕ್ರವಾರ ಮಧ್ಯಾಹ್ನದವರೆಗೂ ಕಡಮೆಯಿದ್ದ ಮಳೆ ಪುನಃ ಜಾಸ್ತಿಯಾಗಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಭಯಭೀತರಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಮತ್ತೂ ಹೆಚ್ಚಾದರೆ ನೀರು ಪಟ್ಟಣವನ್ನು ಆವರಿಸಿಕೊಂಡು ಅಂಬೇಡ್ಕರ್ ವೃತ್ತದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುವ ಭೀತಿ ಇದೆ.
ಭದ್ರಾವತಿಯಿಂದ ಪರವೂರಿಗೆ ಹೋಗುವ ಬಸ್ಗಳು ಮತ್ತು ಬೇರೆಡೆಯಿಂದ ಶಿವಮೊಗ್ಗದ ಕಡೆಗೆ ಹೋಗುವ ಬಸ್ಗಳು ಅಂಬೇಡ್ಕರ್ ವೃತ್ತದಿಂದಲೇ ಸಂಚರಿಸಬೇಕಾಗಿರುವುದರಿಂದ ಇಲ್ಲಿ ವಾಹನ ಸಂಚಾರ ಸ್ಥಗಿತವಾದರೆ ಬಸ್ಗಳು ಬಸ್ ನಿಲ್ದಾಣಕ್ಕೆ ಬಂದು ಹೋಗುವುದು ಕಷ್ಟವಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.