ಸಾಲ ಮನ್ನಾ ಭರವಸೆ ಈಡೇರಿಸಲು ಮನವಿ
ಕ.ಪ್ರ.ವಾರ್ತೆ ಶಿವಮೊಗ್ಗ ಆ.4 ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಅಡಕೆ ಬೆಳೆಗಾರರ ಸಾಲ ಮನ್ನಾವನ್ನು ಅನುಷ್ಠಾನ ಮಾಡಿಸಿ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಪ್ರಣಾಳಿಕೆ ಸಮಿತಿಯ ಪ್ರಮುಖ ದಿಗ್ವಿಜಯಸಿಂಗ್ ಅವರಿಗೆ ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ನ ಉಪಾಧ್ಯಕ್ಷ ಸಚಿನ್ ಮೀಗಾ ಮನವಿ ಮಾಡಿದ್ದಾರೆ.
ದಿಗ್ವಿಜಯ್ಸಿಂಗ್ರನ್ನು ಖುದ್ದು ಭೇಟಿ ಮಾಡಿರುವ ಸಚಿನ್ ಮೀಗಾ ಮನವಿ ಪತ್ರ ಅರ್ಪಿಸಿ, ಶೀಘ್ರ ಅಡಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ಸಾಲಮನ್ನಾ ಆಗಿಲ್ಲ: 2013ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದರೆ ಅಡಕೆ ಬೆಳೆಗಾರರ ಸಾಲಮನ್ನಾ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ ಸರ್ಕಾರದ ಮೊದಲನೇ ಬಜೆಟ್ನಲ್ಲಿ ಅಡಕೆ ಬೆಳೆಗಾರರ ಸಾಲವನ್ನು ಮನ್ನಾ ಮಾಡಿಲ್ಲ.
ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷ ಪರಮೇಶ್ವರ್ ಅವರಿಗೆ ಹಾಗೂ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಸಾಲ ಮನ್ನಾ ಅಂಶವನ್ನು ಕೂಡಲೇ ಅನುಷ್ಠಾನ ಮಾಡಿಸಿ ಎಂದು ಇದೇ ಸಂದರ್ಭದಲ್ಲಿ ದಿಗ್ವಿಜಯಸಿಂಗ್ ಅವರಿಗೆ ಒತ್ತಾಯಿಸಲಾಯಿತು.
ಸತತ ಮಳೆ: ಮಲೆನಾಡು ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ಅಡಕೆಗೆ ಕೊಳೆರೋಗ ತಗುಲಿ ಶೇ.80 ಫಸಲು ನಾಶವಾಗಿದೆ. ಇದರ ಪರಿಣಾಮ ಇನ್ನೂ 3 ವರ್ಷ ಕಾಲ ಅಡಕೆ ಮರ ಚೇತರಿಸಿಕೊಳ್ಳಲು ಅವಕಾಶ ಬೇಕಾಗುತ್ತದೆ. ಆದ್ದರಿಂದ ಇನ್ನೂ 3 ವರ್ಷ ಅಡಕೆ ಬೆಳೆಗಾರರಿಗೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಸಿಗುವುದು ಕಷ್ಟವಾಗಿದೆ.
ಈಗಾಗಲೇ ರಾಜ್ಯದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳು ಅಡಕೆ ಬೆಳೆಗಾರರ ಸಾಲವನ್ನು ವಸೂಲಿ ಮಾಡುವ ದೃಷ್ಟಿಯಿಂದ ನಿರಂತರವಾಗಿ ನೋಟಿಸ್ ಜಾರಿ ಮಾಡುವುದು ಹಾಗೂ ರೈತರ ಮೇಲೆ ಸಿವಿಲ್ ದಾವೆ ಹೂಡಲು ಮುಂದಾಗುತ್ತಿದ್ದಾರೆ.ಗ ಆದರೆ ಮಲೆನಾಡು ಹಾಗೂ ಕರಾವಳಿ ಭಾಗದ ಅಡಕೆ ಬೆಳೆಗಾರರು ಸತತ ಹಲವು ವರ್ಷದಿಂದ ಹಳದಿ ಎಲೆ, ಕೊಳೆ, ಬೇರುಹುಳು ರೋಗ, ಹಾಗೂ ಇತರೆ ರೋಗಗಳಿಂದ ಫಸಲನ್ನು ಕಳೆದುಕೊಂಡು ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ತೀರಿಸಲಾಗದೆ ಸಾಕಷ್ಟು ಸಾಕಷ್ಟು ಮಂದಿ ಗುಳೇ ಹೋಗಿದ್ದಾರೆ.
ಈಗಾಗಲೇ ರಾಜ್ಯದ ಹೈಕೋರ್ಟ್ ಕೂಡ ರೈತರ ಆತ್ಮಹತ್ಯೆ ಪ್ರಕ್ರಿಯೆ ಮನಗಂಡು ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ತಿಳಿಸಿದೆ.
ಆದರೂ ಹಣಕಾಸು ಸಚಿವಾಲಯ ಸಾಲ ಮನ್ನಾ ಮಾಡಲು ಮುಂದಾಗದೆ ಕೇವಲ ಅಡಕೆ ಬೆಳೆಗಾರರ ಸಾಲ ಮುಂದೆ ಹಾಕಿದ್ದೇವೆಂದು ಪ್ರಮಾಣಪತ್ರ ಸಲ್ಲಿಸಿದೆ.
ಈಗಾಗಲೇ ಸುಪ್ರೀಂಕೋರ್ಟ್ನಲ್ಲೂ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ಸಚಿನ್ ಮೀಗಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

