ಪ್ರಾಣಿ ದತ್ತು ಪಡೆಯದ ಮಲೆನಾಡಿಗರು
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.5
ದತ್ತು ಯೋಜನೆಯಂತೆ ತ್ಯಾವರೇಕೊಪ್ಪ ಹುಲಿ- ಸಿಂಹಧಾಮದ ಪ್ರಾಣಿಗಳನ್ನು ಪ್ರಾಣಿಪ್ರಿಯರು ದತ್ತು ಪಡೆದರೆ ಮೃಗಾಲಯ ಪ್ರಾಧಿಕಾರಕ್ಕೆ ವರ್ಷಕ್ಕೆ 15 ಲಕ್ಷ ಬರುತ್ತದೆ. ಆದರೆ ಕಳೆದ ವರ್ಷ ಬಂದಿದ್ದು 46,250 ಮಾತ್ರ.
ಈ ವರ್ಷವೂ ಸಹ ನೀರಸ ಪ್ರತಿಕ್ರಿಯೆ. ಆರ್ಥಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಬಂದಿರುವುದು 2,250 ಗಳಷ್ಟೆ.
ಅತ್ಯಂತ ಸುಸಂಸ್ಕೃತರು, ಸಹೃದಯಿಗಳೆಂದು ಹೇಳುವ ಮಲೆನಾಡಿಗರೇ ದತ್ತು ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ. ಈಗ್ಗೆ ಮೂರು ವರ್ಷಗಳ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರು ಹುಲಿಯನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದು 1 ಲಕ್ಷ ಕೊಟ್ಟಿದ್ದೇ ಈ ವರೆಗಿನ ದಾಖಲೆ. ಇದಾದ ನಂತರ ಅವರೂ ಮುಂದುವರಿಸಲಿಲ್ಲ, ಬೇರೆಯವರೂ ಬರಲಿಲ್ಲ.
ಇದನ್ನು ಹೊರತುಪಡಿಸಿದರೆ ಜಿಲ್ಲೆಯವರ ಪಾಲು ಬಲು ಕಡಿಮೆ. 2012-13ನೇ ಸಾಲಿನಲ್ಲಿ ಜಿಂಕೆ, ಕೃಷ್ಣಮೃಗ, ಮುಳ್ಳುಹಂದಿ, ನವಿಲು, ಒಂದು ವಾರದ ಮಟ್ಟಿಗೆ ಹುಲಿ ಇತ್ಯಾದಿ ಪ್ರಾಣಿಗಳನ್ನು ದತ್ತು ಪಡೆದವರಲ್ಲಿ ಹೊರಗಿನ ಜಿಲ್ಲೆಯವರ ಸಂಖ್ಯೆಯೇ ಅಧಿಕ. ಚಳ್ಳಕೆರೆ, ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶದ ಒಟ್ಟು 15 ಜನರು 46,250 ಹಣ ನೀಡಿ 15 ಪ್ರಾಣಿಗಳನ್ನು ವಿವಿಧ ಪ್ರಾಣಿಗಳನ್ನು ದತ್ತು ಪಡೆದಿದ್ದರು.
ಆದರೆ 2013-14ನೇ ಸಾಲಿನಲ್ಲಿ ಇದೂವರೆಗೆ ಒಬ್ಬರು ನರಿ, ಇನ್ನೊಬ್ಬರು ಕರಡಿ, ಮತ್ತೊಬ್ಬರು ಕೃಷ್ಣಮೃಗವನ್ನು ವಿವಿಧ ಅವಧಿಗೆ ದತ್ತು ಪಡೆದು 2,250 ಹಣವನ್ನು ಇಲಾಖೆಗೆ ನೀಡಿದ್ದಾರೆ.
ಈ ಸಿಂಹಧಾಮಕ್ಕೆ ಭೇಟಿ ನೀಡಿದವರ ಸಂಖ್ಯೆ ಕಡಿಮೆ ಏನಿಲ್ಲ. ಚಿತ್ರನಟರಾದ ದರ್ಶನ್, ಗಣೇಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಶ್ರೀನಾಥ್ ಸೇರಿದಂತೆ ಹಲವು ಖ್ಯಾತನಾಮರು ಬಂದಿದ್ದಾರೆ. ದತ್ತು ತೆಗೆದುಕೊಳ್ಳುವ ವಿಚಾರವನ್ನು ಇವರಲ್ಲಿ ಪ್ರಸ್ತಾಪಿಸಿದಾಗ ಮುಂದಿನ ವಾರ ಕುಟುಂಬ ಸಮೇತ ಬಂದು ಈ ಕಾರ್ಯ ಕೈಗೊಳ್ಳುವುದಾಗಿ ಹೇಳಿದವರೇ ಹೆಚ್ಚು. ಆದರೆ ಬರಲಿಲ್ಲ. ಎಲ್ಲರಿಗೂ ಮೈಸೂರು ಮೃಗಾಲದಯ ಮೇಲೆಯೇ ಹೆಚ್ಚು ಪ್ರೀತಿ.
ಬಲು ಖರ್ಚು: ವನ್ಯಜೀವಿಗಳ ನಿರ್ವಹಣೆ ಬಹು ಖರ್ಚಿನ ಕೆಲಸ. ಉದಾಹರಣೆಗೆ ಒಂದು ಹುಲಿಯನ್ನು ಒಂದು ವರ್ಷ ನಿರ್ವಹಿಸಲು 2.47 ಲಕ್ಷ ಬೇಕು. ಯಾರೂ ಇಷ್ಟು ಹಣವನ್ನು ನೀಡುವುದಿಲ್ಲ. ಅದಕ್ಕಾಗಿ 1 ಲಕ್ಷ ನಿಗದಿಪಡಿಸಲಾಗಿದೆ. ಬೇರೆ ಪ್ರಾಣಿ- ಪಕ್ಷಿಗಳಿಗೂ ಸಹ ಹೀಗೆಯೇ ಹಣ ನಿಗದಿ ಮಾಡಲಾಗಿದೆ.
ಅರಣ್ಯ ಇಲಾಖೆಯೇನು ಸುಮ್ಮನೆ ಪ್ರಾಣಿಗಳನ್ನು ದತ್ತು ನೀಡುವುದಿಲ್ಲ. ದತ್ತು ಪಡೆದ ಕುಟುಂಬಕ್ಕೆ ಒಂದು ದಿನ ಸಫಾರಿಯಲ್ಲಿ ಉಚಿತ ಪ್ರವೇಶವಿರುತ್ತದೆ. ಅಲ್ಲದೇ ಪ್ರಾಣಿಪ್ರಿಯರೂ ಕೂಡ ಸಾಮಾಜಿಕ ಜವಾಬ್ದಾರಿ ಮೆರೆದಂತಾಗುತ್ತದೆ.
ಪ್ರಸ್ತಾವನೆ ಬಂದಿವೆ: ಈ ವರ್ಷ ಹುಲಿಯನ್ನು ದತ್ತು ಪಡೆಯಲು ಎರಡು ಪ್ರಸ್ತಾವನೆಗಳು ಬಂದಿವೆ ಎಂದು ಅರಣ್ಯಿ ಇಲಾಖೆ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್ ಹೇಳುತ್ತಾರೆ.
ಜಂಗಲ್ ಲಾಡ್ಜಸ್ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ತಲಾ ಒಂದು ಹುಲಿಯನ್ನು ದತ್ತು ಪಡೆಯಲು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಅವರಿಗೆ ಪತ್ರ ಬರೆಯಲಾಗಿದೆ. ನಿಗಮದ ಆಡಳಿತ ಮಂಡಳಿ ಸಭೆ ಸೆಪ್ಟಂಬರ್ನಲ್ಲಿ ನಡೆಯಲಿದ್ದು, ಆಗ ನಿರೀಕ್ಷೆ ಮಾಡಬಹುದು ಎಂದು 'ಕನ್ನಡಪ್ರಭ'ಕ್ಕೆ ಹೇಳಿದರು.
ದತ್ತು ಯೋಜನೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ ಅವಕಾಶ ಪಡೆಯಬಹುದು. ಕೇವಲ 300 ನೀಡಿದರೆ ಹುಲಿ ಅಥವಾ ಸಿಂಹವನ್ನು ಒಂದು ದಿನದ ಮಟ್ಟಿಗೆ ದತ್ತು ಪಡೆಯಬಹುದು. ದತ್ತು ಪಡೆದವರ ಹೆಸರನ್ನು ಆ ಪ್ರಾಣಿಯ ಪಂಜರದ ಎದುರು ಹಾಕಲಾಗುವುದು. ಆದರೆ ನಾಗರಿಕರ ಸ್ಪಂದನೆ ಕಡಿಮೆ ಇದೆ ಎನ್ನುತ್ತಾರೆ ಅವರು.
ಈ ಬಗ್ಗೆ ಜಾಗೃತಿಯ ಕೊರತೆ ಇಲ್ಲ. ಎಲ್ಲರಿಗೂ ಗೊತ್ತಿದೆ. ಆದರೆ ಮುಂದೆ ಬರುತ್ತಿಲ್ಲ ಎಂಬುದು ಅವರ ಅಳಲು.
ಪ್ರಾಣಿಗಳ ದತ್ತು ಬೆಲೆ
ಹುಲಿ, ಸಿಂಹ: ವರ್ಷಕ್ಕೆ 1 ಲಕ್ಷ, ತಿಂಗಳಿಗೆ 9,000, 2 ವಾರಕ್ಕೆ 4,500, 1 ವಾರಕ್ಕೆ 2,300, 1 ದಿನಕ್ಕೆ 300.
ಕತ್ತೆ ಕಿರುಬ: ವರ್ಷಕ್ಕೆ 50,000, ತಿಂಗಳಿಗೆ 4,000, ವಾರಕ್ಕೆ 1,000.
ಚಿರತೆ: ವರ್ಷಕ್ಕೆ 35,000, ತಿಂಗಳಿಗೆ 3,000, ವಾರಕ್ಕೆ 750,
ನರಿ: ವರ್ಷಕ್ಕೆ 17,000, ತಿಂಗಳಿಗೆ 1,500, 15 ದಿನಕ್ಕೆ 750.
ಜಿಂಕೆ, ಸಾಂಬಾರ: ವರ್ಷಕ್ಕೆ 7,500, ತಿಂಗಳಿಗೆ 750.
ಮೊಸಳೆ, ಕೃಷ್ಣಮೃಗ, ಮುಳ್ಳುಹಂದಿ, ಯಾವುದೇ ಒಂದು ಹಕ್ಕಿ- ವರ್ಷಕ್ಕೆ 3,500, 3 ತಿಂಗಳಿಗೆ 1,000.
ಬಾತುಕೋಳಿ: ವರ್ಷಕ್ಕೆ 3,500, 3 ತಿಂಗಳಿಗೆ 750.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

