ಶಿವಮೊಗ್ಗ

ಇನ್ನೂ ಸಿಕ್ಕಿಲ್ಲ ವಾಹನ ಬಾಡಿಗೆ

Published On :

ವಿಶೇಷ ವರದಿ
ಕ.ಪ್ರ.ವಾರ್ತೆ  ಶಿವಮೊಗ್ಗ  ಆ.7

ಸರ್ಕಾರಿ ಕೆಲಸ ದೇವರ ಕೆಲಸ. ದೇವರ ವರ ಸಿಗಬೇಕೆಂದರೆ ತಪಸ್ಸು ಮಾಡಬೇಕು. ಒಲಿದರೆ ಫಲ ಸಿಗುತ್ತದೆ, ಕರ್ಮಕ್ಕೆ ತಕ್ಕಂತೆ- ಅದೇ ರೀತಿಯ ಪರಿಸ್ಥಿತಿ ಜಿಲ್ಲೆಯ ವಾಹನ ಮಾಲೀಕರದ್ದು.
ಚುನಾವಣಾ ಆಯೋಗ ಹೇಳಿತೆಂದು ಜಿಲ್ಲಾಡಳಿತ ಚುನಾವಣೆ ಕೆಲಸಕ್ಕಾಗಿ ಖಾಸಗಿ ವಾಹನಗಳನ್ನು ಪಡೆದು ಪೊಲೀಸ್ ಇಲಾಖೆ ವಶಕ್ಕೆ ನೀಡಿತು. ಬಳಕೆಯೂ ಆದವು. ಆದರೆ ನಾಲ್ಕು ತಿಂಗಳಾದರೂ ಬಾಡಿಗೆ ಹಣ ಮಾತ್ರ ಸಿಗಲಿಲ್ಲ.
ಬಾಡಿಗೆ ಇಲ್ಲದೆ ಕಂಗಾಲು: ಸಾಲಸೋಲ ಮಾಡಿ ವಾಹನ ಖರೀದಿಸಿ ಜೀವನ ನಡೆಸುತ್ತಿದ್ದ ವಾಹನ ಮಾಲೀಕರು ಅತ್ತ ಬಾಡಿಗೆ ಹಣವೂ ಬಾರದೆ, ಇತ್ತ ಮಳೆಗಾಲದಲ್ಲಿ ಸರಿಯಾಗಿ ಬಾಡಿಗೆಯೂ ಸಿಗದೆ ಕಂಗಾಲಾಗಿದ್ದಾರೆ. ಸರ್ಕಾರದ ಕೆಲಸ ಎಷ್ಟು ಮಂದಗತಿಯಲ್ಲಿ ಸಾಗುತ್ತವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದು.
ಕಳೆದು ಮೇ ತಿಂಗಳಲ್ಲಿ (ಏಪ್ರಿಲ್ 13ರಿಂದ ಮೇ. 7ರವರೆಗೆ) ನಡೆದ ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಮೀಸಲು ಪಡೆ ಅಧಿಕಾರಿಗಳನ್ನು ನಿಗದಿತ ಸ್ಥಳಕ್ಕೆ ಕೊಂಡೊಯ್ಯಲು ನಗರದ ಕೆಲ ಖಾಸಗಿ ಸಂಸ್ಥೆಗಳ ವಾಹನಗಳನ್ನು (ಇಂಡಿಕಾ, ಕ್ರೂಸರ್, ಇನ್ನೋವಾ ಇತ್ಯಾದಿ) ಜಿಲ್ಲಾಡಳಿತ ಮೂಲಕ ಜಿಲ್ಲಾ ರಕ್ಷಣಾ ಇಲಾಖೆ ಬಾಡಿಗೆ ಪಡೆದಿತ್ತು.
ಸುಮಾರು 260 ವಾಹನ: ಜಿಲ್ಲಾ ರಕ್ಷಣಾ ಇಲಾಖೆ ಕೋರಿಕೆಯ ಮೇರೆಗೆ ಜಿಲ್ಲಾಡಳಿತ ಆದೇಶದನ್ವಯ ಪ್ರಾದೇಶಿಕ ಸಾರಿಗೆ ಇಲಾಖೆ ನಗರದ ಸುಮಾರು 260 ವಾಹನಗಳನ್ನು, ಅವುಗಳ ದಾಖಲೆ, ವಾಹನ ಚಾಲಕನ ಪರವಾನಗಿ, ಆತನ ಹಿನ್ನೆಲೆ ಮತ್ತಿತರ ಅಗತ್ಯ ದಾಖಲೆಗಳಿಂದ ವಾಹನಗಳನ್ನು ಆಯ್ಕೆ ಮಾಡಿ ಜಿಲ್ಲಾಡಳಿತದ ಮೂಲಕ ಜಿಲ್ಲಾ ರಕ್ಷಣಾ ಇಲಾಖೆಗೆ ನೀಡಲಾಗಿದೆ. ,  ದಿನಕ್ಕೆ ಕನಿಷ್ಠ 200 ಕಿ.ಮೀ.ಗಳ ಆಧಾರದ ಮೇಲೆ ಕಿ.ಮೀಗೆ ರು. 6.50 ಹಾಗೂ ಎಲ್ಲಿಯೂ ತೆರಳದ ವಾಹನಕ್ಕೆ ದಿನಕ್ಕೆ ರು. 1 ಸಾವಿರ ನಿಗದಿ ಮಾಡಲಾಗಿತ್ತು.
ಆದರೆ ಚುನಾವಣೆ ಮುಗಿದು ಇಷ್ಟು ದಿನವಾದರೂ ಹಣ ಪಾವತಿ ಮಾಡಿಲ್ಲ. ಒಟ್ಟು 260 ವಾಹನಗಳಿಂದ ಸುಮಾರು ರು. 65 ಲಕ್ಷಕ್ಕೂ ಅಧಿಕ ಹಣ ಪಾವತಿ ಆಗಬೇಕಿದೆ. ಆದರೆ ಸರ್ಕಾರ ಈ ಹಣ ಬಿಡುಗಡೆ ಮಾಡಲು ಮೀನಮೇಶ ಎಣಿಸುತ್ತಿರುವುದು ವಾಹನ ಮಾಲೀಕರನ್ನು ಆತಂಕಕ್ಕೀಡು ಮಾಡಿದೆ.
ಜಿಲ್ಲಾಡಳಿತದತ್ತ ಕೈ: ಆರ್‌ಟಿಒ ಅಧಿಕಾರಿಗಳು ನೇರವಾಗಿ ಸ್ಥಳಕ್ಕೆ ಬಂದು ವಾಹನವನ್ನು ಆಯ್ಕೆ ಮಾಡಿಕೊಂಡಿಳ್ಳಲಾಗಿದೆ.
 ಬಾಡಿಗೆ ಹಣದ ಬಗ್ಗೆ  ಕೇಳಿದರೆ, ನಾವು ಕಾರುಗಳನ್ನು ದಾಖಲೆ ಸಹಿತ  ಆಯ್ಕೆ ಮಾಡುವುದಷ್ಟೇ ನಮ್ಮ ಕೆಲಸ. ಬಾಡಿಗೆ ಹಣಕ್ಕಾಗಿ ಜಿಲ್ಲಾಡಳಿತಕ್ಕೆ ಹೋಗಿ ಎನ್ನುತ್ತಾರೆ.
ಜಿಲ್ಲಾಡಳಿತ ಜಿಲ್ಲಾ ರಕ್ಷಣಾ ಇಲಾಖೆಗೆ ಹೋಗುವಂತೆ ತಿಳಿಸಿದೆ. ಇದೀಗ ಅವರ ಬಳಿ ಹೋದರೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಹಣ ಬಂದ ನಂತರ ಪಾವತಿ ಮಾಡುತ್ತೆವೆ ಎಂದು ತಿಳಿಸಿದ್ದಾರೆ. ಆದರೆ, ಚುನಾವಣೆ ಮುಗಿದು ಹೊಸ ಸರ್ಕಾರ ರಚನೆ ಆದರೂ ಹಣ ಪಾವತಿ ಮಾಡದಿರಲೂ ಕಾರಣವೇನೆಂಬುದೇ ತಿಳಿಯದು  ಎಂದು ವಾಹನ ಮಾಲೀಕರು ತಿಳಿಸಿದ್ದಾರೆ.
ಜೀವನ ನಿರ್ವಹಣೆ ದುಸ್ತರ: ಸರ್ಕಾರ ನಿಗದಿ ಮಾಡಿದ ಸಮಯದಲ್ಲಿಯೇ ಬಾಡಿಗೆ ಹಣದ ಬಿಲ್ಲನ್ನು, ಚುನಾವಣೆ ಮುಗಿದು ಒಂದು ತಿಂಗಳೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಇದುವರೆಗೆ ಬಾಡಿಗೆ ಹಣ ಪಾವತಿ ಮಾಡಿಲ್ಲ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ.
ವಾಹನಗಳ ಲೋನ್ ಕಟ್ಟಲೂ ಹಣ ಇಲ್ಲದಾಗಿದೆ. ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣಕಾಸು ಇಲಾಖೆಯಿಂದ ಅನುಮೋದನೆ ಆದ ನಂತರ ಹಣ ಪಾವತಿ ಮಾಡುತ್ತೇವೆ ಎಂದು ತಿಳಿಸುತ್ತಾರೆ. ಆದರೆ ಅಲ್ಲಿಯವರೆಗೆ ನಮ್ಮ ಸ್ಥಿತಿ ಕೇಳತೀರದು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹೆಸರು ಹೇಳಲು ಇಚ್ಚಿಸದ ವಾಹನ ಮಾಲೀಕರು.
ಪರಿಸ್ಥಿತಿ ಹೀಗಿರುವಾಗ ಮುಂದಿನ ಲೋಕಸಭೆ ಚುನಾವಣೆಗೆ ನಿಮ್ಮ ವಾಹನವನ್ನೆ ಕಾಯ್ದಿದಿರಿಸುತ್ತೇವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು ಎಂದು ವಾಹನ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.