ಶಿವಮೊಗ್ಗ

ತಾಪಂ ಸದಸ್ಯರಿಂದ ತಹಸೀಲ್ದಾರರ ತರಾಟೆ

Published On :

ಕ.ಪ್ರ.ವಾರ್ತೆ, ಸಾಗರ, ಆ.7 ಇಲ್ಲಿನ ತಾಪಂನಲ್ಲಿ ಸೋಮವಾರ ನಡೆದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗ್ರಾಮಸಭೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯದಿರುವ ಕುರಿತು ಸದಸ್ಯರು ತಹಸೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಜಿಪಂ ಸದಸ್ಯೆ ಸುಮಂಗಲ ರಾಮಕೃಷ್ಣ ಮಾತನಾಡಿ, ಜನಪ್ರತಿನಿಧಿಗಳನ್ನು ಕತ್ತಲಿನಲ್ಲಿರಿಸಿ ನಡೆಸುತ್ತಿರುವ ಇಂತಹ ಸಭೆಗಳ ಅಗತ್ಯವಿದೆಯೇ ಎಂದು ತಹಸೀಲ್ದಾರರು ಉತ್ತರ ನೀಡಬೇಕು. ಜನರು ಸಾಕಷ್ಟು ಸಮಸ್ಯೆಯನ್ನು ಜನಪ್ರತಿನಿಧಿಗಳ ಬಳಿ ಹೇಳಿಕೊಂಡಿರುತ್ತಾರೆ.
ಸಭೆಯ ಮಾಹಿತಿ ಇಲ್ಲ: ಆದರೆ ಸಭೆ ಇದೆ ಎನ್ನುವ ಮಾಹಿತಿಯನ್ನು ತಹಸೀಲ್ದಾರ್ ಕಚೇರಿಯಿಂದ ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರಿಗೆ ನೀಡುತ್ತಿಲ್ಲ. ಹಿಂದೆ ಗ್ರಾಮಸಭೆ ಮಾಹಿತಿ ನೀಡುವ ಪರಿಪಾಠ ಇತ್ತು. ತಹಸೀಲ್ದಾರ್ ರಾಜಣ್ಣ ಅವರಾದ ಮೇಲೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ತಾಪಂ ಸದಸ್ಯೆ ಜ್ಯೋತಿ ಮುರಳೀಧರ್ ಮಾತನಾಡಿ, ತಹಸೀಲ್ದಾರ್ ರಾಜಣ್ಣ ಅವರ ಭ್ರಷ್ಟಾಚಾರ ಹೆಚ್ಚುತ್ತಿದೆ. ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಕರೆಯಲಾಗಿದ್ದರೂ, ಸರ್ಕಾರದ ನಿಯಮಾವಳಿ ಪ್ರಕಾರ ಹುದ್ದೆ ಭರ್ತಿಗೆ  ಕ್ರಮ ಕೈಗೊಂಡಿಲ್ಲ. ತಮಗೆ ಬೇಕಾದವರಿಂದ ರು. 50,000 ದಿಂದ ರು. 1 ಲಕ್ಷದವರೆಗೂ ಲಂಚ ಪಡೆದು ಹುದ್ದೆಯ ಸಂದರ್ಶನಕ್ಕೆ ಕರೆಯಲಾಗಿದೆ. ಇಂತಹ ಸಂದರ್ಶನ ನಿಲ್ಲಿಸಿ, ಅರ್ಹರಿಗೆ ಹುದ್ದೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ನೆರೆಯಿಂದ ತಾಲೂಕಿನಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದು, ಈತನಕ ಎಷ್ಟು ನಷ್ಟವಾಗಿದೆ ಎನ್ನುವ ಮಾಹಿತಿಯನ್ನು ತಹಶೀಲ್ದಾರ್ ಕಚೇರಿಯಿಂದ ನೀಡಿಲ್ಲ ಎಂದು ಆರೋಪಿಸಿದರು.
ಕಡ್ಡಾಯ ಪಾಲನೆ: ಗ್ರಾಮ ಸಹಾಯಕರ ಹುದ್ದೆ ನೇಮಕಾತಿ ಸಂದರ್ಭದಲ್ಲಿ ಸರ್ಕಾರಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಚೆನ್ನಗೊಂಡ, ಎಸ್.ಎಸ್.ಭೋಗ್ ಹಾಗೂ ಕುದುರೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮಸಹಾಯಕರ ಹುದ್ದೆ ಬಗ್ಗೆ ಜನರಿಗೆ ಮಾಹಿತಿ ಇಲ್ಲದೆ ಇರುವುದರಿಂದ ಹೊಸದಾಗಿ ಅರ್ಜಿ  ಕರೆಯಬೇಕು ಹಾಗೂ ಗ್ರಾಮ ಸಭೆಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಅಧ್ಯಕ್ಷ ಮಹಾಬಲೇಶ್ವರ್ ಕುಗ್ವೆ ತಹಸೀಲ್ದಾರರಿಗೆ ಸೂಚಿಸಿದರು.
ಗ್ರಾಮಸಭೆಗಳಿಗೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರು ಹಾಜರಾಗುತ್ತಿರುವ ಬಗ್ಗೆ ಸದಸ್ಯ ಹರೀಶ್ ಗಂಟೆ, ಜ್ಯೋತಿ ಮುರಳಿಧರ್, ಶ್ಯಾಮಲ ದೇವರಾಜ್, ಪ್ರಕಾಶ್ ಲ್ಯಾವಿಗೆರೆ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿ, ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಜಿಪಂ ಸದಸ್ಯೆ ಲಲಿತಾ ನಾರಾಯಣ, ತಾಪಂ ಉಪಾಧ್ಯಕ್ಷೆ ಗೌರಮ್ಮ, ಕಾರ್ಯನಿರ್ವಹಣಾ ಅಧಿಕಾರಿ ಡಾ. ಸದಾಶಿವ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.