ಸಿಂಥೆಟಿಕ್ ಟ್ರ್ಯಾಕ್ ರಕ್ಷಣೆಗೆ ಕಾರ್ಯಕ್ರಮ ಸ್ಥಳಾಂತರ
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.8
ಇದು ನಿಮ್ಮ ಊರಿನ ಆಸ್ತಿ. ಸಿಂಥೆಟಿಕ್ ಟ್ರ್ಯಾಕ್ ಆ.3ರಂದು ಉದ್ಘಾಟನೆಯಾಗಿದೆ. ಆ.15ರಂದೇ ಹಾಳಾಗುವುದು ಬೇಡ ಎಂಬ ಕಾರಣದಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ನೆಹರೂ ಕ್ರೀಡಾಂಗಣದಲ್ಲಿಯೇ ನಡೆಸುವ ಸಾಧ್ಯತೆಯ ಬಗ್ಗೆ ಪರಿಶೀಲಿಸಿದರು.
ಗಾರ್ಡ್ ಆಪ್ ಹಾನರ್ಸ್ ಸ್ವೀಕರಿಸಲು ವಾಹನವೊಂದು ಓಡಾಡಬೇಕಾಗುತ್ತದೆ. ಹೀಗೆ ಮಾಡಿದರೆ ಸಿಂಥೆಟಿಕ್ ಟ್ರ್ಯಾಕ್ ಬಳಕೆ ಬಗ್ಗೆ ಗ್ಯಾರೆಂಟಿಕೊಡಲು ಸಾಧ್ಯವಿಲ್ಲ ಎಂದು ಇದನ್ನು ನಿರ್ವಹಿಸುತ್ತಿರುವ ತಜ್ಞರು ಹೇಳಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಕಾರ್ಯಕ್ರಮ ಸ್ಥಳಾಂತರಿಸಲಾಯಿತು. ಇದು ನನ್ನದೇ ನಿರ್ಧಾರ ಎಂದರು.
ಅನಿವಾರ್ಯತೆ: ಈ ಹಿಂದೆ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಡಾವಳಿಗಳನ್ನು ನಾನು ಪರಿಶೀಲಿಸುತ್ತೇನೆ. ಅಂದು ಯಾವ ನಿರ್ಣಯ ತೆಗೆದುಕೊಂಡರು ಎಂದು ನನಗೆ ಗೊತ್ತಿಲ್ಲ. ಅಂದು ಕಾರ್ಯಕ್ರಮ ನಡೆಸುವ ನಿರ್ಣಯ ತೆಗೆದುಕೊಂಡಿರಬಹುದು. ಆದರೆ ಇವತ್ತು ಬೇರೆ ನಿರ್ಣಯ ತೆಗೆದುಕೊಳ್ಳುವ ಅನಿವಾರ್ಯತೆ ಬಂದರೆ ಏನು ಮಾಡುವುದು ಎಂದು ಕೇಳಿದರು.
ಸ್ವಾತಂತ್ರ್ಯೋತ್ಸವ ನಡೆಸಲು ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣ ಸೇರಿದಂತೆ ಹಲವು ಸ್ಥಳಗಳ ಬಗ್ಗೆ ಚರ್ಚಿಸಲಾಯಿತು. ಕೊನೆಗೆ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು ಎಂದರು.
ಮುಂದಿನ ದಿನಗಳಲ್ಲಿ ಜೈಲು ಸ್ಥಳಾಂತರವಾದ ನಂತರ ಅಲ್ಲಿ ಸಿಗುವ ಜಾಗವನ್ನು ಸಾರ್ವಜನಿಕ ಬಳಕೆಗೆ ಉಳಿಸಿಕೊಳ್ಳಬಹುದು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಭೆ ಸೇರಿ ಈ ಬಗ್ಗೆ ನಿರ್ಣಯ ಕೈಗೊಳ್ಳಬಹುದು ಎಂದರು.
ಸಾರ್ವಜನಿಕ ಸಭೆ: ನೆಹರೂ ಕ್ರೀಡಾಂಗಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಆಗಸ್ಟ್ 20ರ ವೇಳೆಗೆ ಸಂಘಸಂಸ್ಥೆಗಳ ಸಭೆಯನ್ನು ಕರೆಯಲಾಗುವುದು. ಎಲ್ಲರ ಅಭಿಪ್ರಾಯ ಕೇಳಲಾಗುವುದು.
ಅಲ್ಲಿ ಕೈಗೊಳ್ಳುವ ನಿರ್ಧಾರವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ದಸರಾ ಕಾರ್ಯಕ್ರಮದ ವರೆಗೆ ಕಾಯುವುದಿಲ್ಲ. ಅಷ್ಟರೊಳಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

