ನಬಾರ್ಡ್ ಸುತ್ತೋಲೆ ಹಿಂಪಡೆಯಿರಿ
ಶಿವಮೊಗ್ಗ: ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಬಗ್ಗೆ ನಬಾರ್ಡ್ನಿಂದ ಹೊರಡಿಸಲ್ಪಟ್ಟ ಸುತ್ತೋಲೆಯಿಂದ ಕರ್ನಾಟಕ ಸಹಕಾರಿ ವಲಯದಲ್ಲಿ ತಲ್ಲಣ ಉಂಟಾಗಿದ್ದು, ತಕ್ಷಣವೇ ಸುತ್ತೋಲೆ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಸಹಕಾರಿ ಚಳವಳಿಯೇ ನಡೆದೀತು ಎಂದು ಅಪೆಕ್ಸ್ ಬ್ಯಾಂಕ್ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಸಹಕಾರಿ ಬ್ಯಾಂಕಿಂಗ್ ರಚನೆಯಲ್ಲಿ ರೈತ ಸಮುದಾಯಕ್ಕೆ ಸಾಲ ನೀಡುವ ಸಂಸ್ಥೆಗಳಾಗಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಪಾತ್ರವನ್ನು ತೆಗೆದುಹಾಕುವ ಕುರಿತು ನಬಾರ್ಡ್ ಸುತ್ತೋಲೆ ಹೊರಡಿಸಿದ್ದು, ಇದು ಸಹಕಾರಿ ಕ್ಷೇತ್ರದ ಭದ್ರ ಬುನಾದಿಯನ್ನು ಅಭದ್ರಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.
ರೈತರು ಸಾಲದಿಂದ ವಂಚಿತ: ನಬಾರ್ಡ್ ಕ್ರಮದಿಂದಾಗಿ ಭಾರತದಲ್ಲಿ ರೈತರಿಗೆ ಋತುಮಾನ ಕೃಷಿ ನಿರ್ವಹಣೆಗಾಗಿ ಅಲ್ಪಾವಧಿ ಸಾಲಗಳನ್ನು ನೀಡುತ್ತಿರುವ 93 ಸಾವಿರ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಅಸ್ತಿತ್ವಕ್ಕೂ ಬೆದರಿಕೆಯಾಗಿದೆ ಎಂದು ಹೇಳಿದ ಅವರು, ಕಳೆದ ನೂರು ವರ್ಷಗಳಿಗೂ ಮೇಲ್ಪಟ್ಟ ಅವಧಿಯಿಂದ ನಾವು ಪೋಷಿಸಿ ಬೆಳೆಸಿಕೊಂಡು ಬಂದಿರುವ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಅಸ್ತಿತ್ವವನ್ನು ಕೊನೆಗಾಣಿಸುವ ಗುರಿಯನ್ನು ಈ ಸುತ್ತೋಲೆ ಹೊಂದಿದೆ. ಇಂತಹ ಕ್ರಮವು ಅಧಿಕಾರಿಗಳ ಆಡಳಿತವನ್ನು ಮರಳಿ ತರುತ್ತದೆ ಮತ್ತು ರೈತರು ಸಕಾಲಿಕವಾಗಿ ಸಾಲ ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ವಿವರಿಸಿದರು.
ರೈತರು, ಗ್ರಾಮೀಣ ಕುಶಲ ಕರ್ಮಿಗಳು ಮುಂತಾದವರ ಮಾಲೀಕತ್ವದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ತಳಮಟ್ಟದಲ್ಲಿ ಅಲ್ಪಾವಧಿ ಸಹಕಾರಿ ಪತ್ತಿನ ರಚನೆಯಲ್ಲಿರುವ ಗ್ರಾಮೀಣ ಮಟ್ಟದಲ್ಲಿರುವ ಕೆಳ ಹಂತದ ಸಂಸ್ಥೆಗಳಾಗಿವೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಮುಚ್ಚಿದ ಪಕ್ಷದಲ್ಲಿ ರೈತರು ಶೋಷಣೆಗೆ ಒಳಗಾಗುತ್ತಾರೆ. ಕಾರಣ, ರೈತರಿಗೆ ಖಾಸಗಿ ಲೇವಾದೇವಿದಾರರಿಂದ ಸಾಲವನ್ನು ಪಡೆಯದೆ ಅನ್ಯ ಮಾರ್ಗವಿರುವುದಿಲ್ಲ. ಇಂತಹ ಕ್ರಮವು ರಾಷ್ಟ್ರದ ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡುತ್ತದೆ ಎಂದರು.
ನಬಾರ್ಡ್ನ ಸುತ್ತೋಲೆಯಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಇನ್ನು ಮುಂದೆ ತಮ್ಮ ಖಾತೆಗಳಿಗೆ ಠೇವಣಾತಿಗಳನ್ನು ಸ್ವೀಕರಿಸುವಂತಿಲ್ಲ ಮತ್ತು ತನ್ನ ಪರವಾಗಿ ಯಾವುದೇ ರೀತಿಯ ಸಾಲ ನೀಡಿಕೆ ವಹಿವಾಟವನ್ನು ನಡೆಸುವಂತಿಲ್ಲ ಎಂಬುದಾಗಿ ತಿಳಿಸಿರುತ್ತದೆ. ಆದರೆ, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಪೂರ್ವನಿರ್ಧಾರಿತ ಕಮೀಷನ್ ಆಧಾರದ ಮೇಲೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು, ರಾಜ್ಯ ಸಹಕಾರ ಬ್ಯಾಂಕುಗಳ ಪರವಾಗಿ ಸಾಲ ನೀಡಿಕೆ ವಹಿವಾಟು ಮತ್ತು ಠೇವಣಾತಿ ಸಂಗ್ರಹಣೆ ಅಂದರೆ ಕ್ರಮಿಕ ಪತ್ತಿನ ತಖ್ತೆಯ ಸಂಗ್ರಹ ಮತ್ತು ಒಟ್ಟು ಗೂಡಿಸುವುವಿಕೆ, ಕೆಸಿಸಿ ಡೆಬಿಟ್ ಕಾರ್ಡ್ಗಳ ನೀಡಿಕೆ, ಸಾಲಗಳ ವಸೂಲಾತಿ ಮತ್ತು ಠೇವಣಾತಿಗಳಿಗೆ ಪ್ರಚಾರ ಸೇವೆಗಳನ್ನು ಮಾಡುತ್ತವೆ ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದರೆ, ಸುತ್ತೋಲೆಯನ್ನು ಅನುಷ್ಠಾನಗೊಳಿಸಿದಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಕಮಿಷನ್ ಆಧಾರದ ವ್ಯವಹಾರ ಮಧ್ಯವರ್ತಿಗಳ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಮಂಜುನಾಥ ಗೌಡ ಅಭಿಪ್ರಾಯಪಟ್ಟರು.
ಈ ಬೆಳವಣಿಗೆಯ ಹಿಂದೆ ಕಾರ್ಪೋರೇಟ್ ವಲಯದ ಲಾಬಿ ಕೆಲಸ ಮಾಡುತ್ತಿರಲೂಬಹುದು ಎಂದು ಶಂಕೆ ವ್ಯಕ್ತಪಡಿಸಿದ ಅವರು, ಈ ಕೂಡಲೇ ಸಹಕಾರಿ ಕ್ಷೇತ್ರದವರನ್ನೊಳಗೊಂಡ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಪತ್ರವನ್ನೂ ಬರೆಯಲಾಗಿದೆ. ಹಾಗೆಯೇ ಆಗಸ್ಟ್ 16ರಂದು ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸಭೆ ಕರೆದಿದ್ದು, ಅಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

