ಶಿವಮೊಗ್ಗ

ವಾಲಿಬಾಲ್ ಪಂದ್ಯಾವಳಿ 'ಚುಂಚಾದ್ರಿ ಕಪ್‌'ಗೆ ಚಾಲನೆ

Published On :

ಶಿವಮೊಗ್ಗ:  ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಕ್ರೀಡಾ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೌಢಶಾಲಾ ಬಾಲಕ- ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಚುಂಚಾದ್ರಿ ಕಪ್ ಶುಕ್ರವಾರ ಇಳಿ ಹೊತ್ತಿನಲ್ಲಿ ವಿದ್ಯುಕ್ತವಾಗಿ ಆರಂಭಗೊಂಡಿತು.
 47 ಬಾಲಕರ ತಂಡ, 15 ಬಾಲಕಿಯರ ತಂಡ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಶನಿವಾರದಿಂದ ಪಂದ್ಯಗಳು ಆರಂಭವಾಗಲಿವೆ.
ಒಲಂಪಿಕ್‌ನಲ್ಲಿ ಗೆಲ್ಲಬೇಕು: ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿಯವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜನಸಂಖ್ಯೆ ವಿಚಾರದಲ್ಲಿ ನಮ್ಮ ದೇಶ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ಒಲಂಪಿಕ್ ಫಲಿತಾಂಶ ಗಮನಿಸಿದರೆ ಬೇಸರವಾಗುತ್ತದೆ. ಒಲಂಪಿಕ್‌ನಲ್ಲಿ ಭಾಗವಹಿಸುವುದರ ಜೊತೆಗೆ ಕ್ರೀಡಾಪಟುಗಳು ಬಹುಮಾನ ತರಲು ಪೂರ್ವಭಾವಿ ಶ್ರಮಹಾಕಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಒಲಂಪಿಕ್ ಫಲಿತಾಂಶ ನೋಡಿ, ಆ ದೇಶದ ಕ್ರೀಡಾ ಪ್ರಗತಿ ಪರಿಗಣಿಸಲಾಗುತ್ತದೆ ಎಂಬುದನ್ನು ಎಲ್ಲರು ಅರಿತುಕೊಳ್ಳಬೇಕು ಎಂದರು.
 ಕ್ರೀಡೆಯಲ್ಲಿ ಭಾಗವಹಿಸುವ ವ್ಯಕ್ತಿ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಸನ್ನದ್ಧನಾಗಿರುತ್ತಾನೆ. ಆಟ ಎಂದರೆ ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಆಟ ಎಂದರೆ ಒಂದು ರೀತಿಯ ಯೋಗವಿದ್ದಂತೆ. ಕ್ರೀಡಾಪಟುಗಳು ಉತ್ತಮ ದೇಹದೊಂದಿಗೆ ಶುದ್ಧ ಮನಸ್ಸು ಹಾಗೂ ಆರೋಗ್ಯ ಹೊಂದಬೇಕು. ಆಗ ಕ್ರೀಡೆಯಲ್ಲಿ ಯಶಸ್ಸು ಸಾಧ್ಯವೆಂದರು.
ರಾಜ್ಯ ಮಟ್ಟಕ್ಕೆ ವಿಸ್ತರಣೆ: ಶಾಸಕ ಪ್ರಸನ್ನಕುಮಾರ್ ಮಾತನಾಡಿ, ಕಳೆದ 15 ವರ್ಷದಿಂದ ನಡೆದುಕೊಂಡು ಬರುತ್ತಿರುವ ಕ್ರೀಡಾಕೂಟ ಜಿಲ್ಲಾಮಟ್ಟಕ್ಕೆ ಸೀಮಿತವಾಗದೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯಬೇಕು. ಶಿವಮೊಗ್ಗದ ಕ್ರೀಡಾಪಟುಗಳಿಗೆ ಉತ್ತೇಜನ ಸಿಗಲಿದೆ ಎಂದರು.
 ಶಾಸಕ ಅಪ್ಪಾಜಿಗೌಡ ಮಾತನಾಡಿದರು. ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ವಾಲಿಬಾಲ್ ಸಂಸ್ಥೆ ಮತ್ತು ಒಲಂಪಿಕ್ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ಶಶಿ, ಭಾಸ್ಕರ್ ಜಿ.ಕಾಮತ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.