ರೈತನ ಕೈತಪ್ಪುತ್ತಿರುವ ಭೂಮಿ: ದತ್ತ
ಕ.ಪ್ರ.ವಾರ್ತೆ ಶಿವಮೊಗ್ಗ ಆ.13 ರಾಜ್ಯ ಸರ್ಕಾರ ಆರಂಭಿಸಿರುವ ರು. 1 ಕ್ಕೆ 1 ಕಿಲೋ ಅಕ್ಕಿ ನೀಡುವ ಕಾರ್ಯಕ್ರಮ ಸ್ವಾಗತಾರ್ಹ. ಆದರೆ ಇನ್ನೊಂದೆಡೆ ರೈತನ ಭೂಮಿ ಕಿತ್ತುಕೊಳ್ಳುವ ಹುನ್ನಾರವೂ ನಡೆಯುತ್ತಿದೆ. ಇದು ಆಘಾತಕಾರಿ ಎಂದು ಕಡೂರು ಶಾಸಕ, ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸಂಜೆ ನಗರದ ವಕೀಲರ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ಜಾಗತೀಕರಣ ಮತ್ತು ಸ್ವಾತಂತ್ರ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಭೂಮಿ-ಉದ್ಯೋಗ-ಆತಂಕ ವಿಷಯದ ಕುರಿತು ಮಾತನಾಡಿದರು.
ನಾಶದ ಹಾದಿ: ಜಾಗತೀಕರಣದಿಂದ ರೈತನ ಹೋರಾಟ, ಸೊಗಡು, ಸಂಸ್ಕೃತಿ, ದೇಸೀ ಪರಂಪರೆ ಎಲ್ಲವೂ ನಾಶದ ಹಾದಿಯಲ್ಲಿದೆ.
ಜಾಗತೀಕರಣದ ಸಂದರ್ಭದಲ್ಲಿ ಭೂಮಿ ಎಂಬ ವಸ್ತು ಎಲ್ಲರ ಬಾಯಲ್ಲಿ ನೀರೂರುವಂತೆ ಮಾಡುತ್ತಿದೆ. ಇದಕ್ಕೆ ರೈತನೇ ಮೊದಲ ಬಲಿಪಶು ಎಂದರು.
ಹಿಂದಿನ ಸರ್ಕಾರಗಳು ಇದ್ದಾಗ ಲಕ್ಷಗಟ್ಟಲೆ ಹೆಕ್ಟೇರ್ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆಂದು ಬಂಡವಾಳಶಾಹಿಗಳು ವಶಕ್ಕೆ ಪಡೆದಿದ್ದಾರೆ. ಈ ಬ್ರೀಫ್‌ಕೇಸ್ ಗಿರಾಕಿ ರಾಜಕಾರಣಿಗಳನ್ನು ಮರುಳು ಮಾಡಿ ಬುಟ್ಟಿಗೆ ಹಾಕಿಕೊಂಡು ರೈತನ ಭೂಮಿಯನ್ನೇ ಕಸಿದುಕೊಳ್ಳುತ್ತಿದ್ದಾರೆ.
ವಾಸ್ತವ ಬೇರೆ: ಆದರೆ ವಾಸ್ತವ ಕಥೆಯೇ ಬೇರೆ ಇದೆ ಎಂದ ಅವರು, ಸಾಕಷ್ಟು ಬಂಡವಾಳ ಹೂಡುತ್ತಾರೆ ಎಂದು ನಿರೀಕ್ಷಿಸಿದರೆ ಶೇ.20ರಷ್ಟು ಮಾತ್ರ ಬಂಡವಾಳ ಹೂಡಿಕೆಯಾಗಿದೆ. ಉದ್ಯೋಗ ಸಿಕ್ಕಿರುವುದು ಶೇ.10ರಷ್ಟು ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ಸರ್ಕಾರ ಮರುಳು ಮಾಡಿ ಭೂಮಿ ಪಡೆದುಕೊಂಡವರು ರಿಯಲ್ ಎಸ್ಟೇಟ್ ದಂಧೆ ಮಾಡಿ ನಂತರ ಮನೆಗೆ ತೆರಳಿ ಆರಾಮವಾಗಿದ್ದಾರೆ ಎಂದು ಟೀಕಿಸಿದರು.
ಬಸವಣ್ಣನವರ ವಚನ ಉಲ್ಲೇಖಿಸಿದ ಅವರು, 12ನೇ ಶತಮಾನದಲ್ಲೇ ಬಸವಣ್ಣ ಜಾಗತೀಕರಣದ ಪರಿಣಾಮ ಊಹಿಸಿದ್ದರು. ಆಗಲೇ ಆತ ಬೆಳವ ಭೂಮಿಯಲ್ಲಿ ಒಂದು ಪ್ರಳಯದ ಕಸ ಹುಟ್ಟಿ ಎಂದು ವಚನದಲ್ಲಿ ಹೇಳಿದ್ದಾರೆ. ರೈತರ ಭೂಮಿಗೆ ಜಾಗತೀಕರಣ ಪ್ರಳಯದ ಕಸವಾಗಿದೆ. ದೇಶದ ಆರ್ಥಿಕ ವ್ಯವಸ್ಥೆಗೆ ಪರಿಹಾರವಾಗುವ ಬದಲು ರಣವೈದ್ಯನಾಗಿ ಕಾಡುತ್ತಿದೆ ಎಂದು ಎಚ್ಚರಿಸಿದರು.
ಏನು ಸಾಧನೆ: 1992ರಲ್ಲಿ ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದಿಂದ ಭಾರತವನ್ನು ಪ್ರವೇಶಿಸಿದಾಗ ದೇಶ ಉದ್ಧಾರವಾಗಿಬಿಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ವಿಪರ್ಯಾಸ ಎಂದರೆ ಈ ನಂತರ ಬಂದ ರಂಗರಾಜನ್, ತೆಂಡೂಲ್ಕರ್ ವರದಿಗಳು ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದೂ ಹೇಳಿವೆ. ಹಾಗಾದರೆ ಆರ್ಥಿಕ ಉದಾರೀಕರಣದ ಪರಿಣಾಮವಾದರೂ ಏನು ಹೊಸ ಆರ್ಥಿಕ ವ್ಯವಸ್ಥೆಯಿಂದ ಯಾವ ಪುರುಷಾರ್ಥ ಸಾಧನೆಯಾಗಿದೆ ಎಂದು ಪ್ರಶ್ನಿಸಿದರು.
ಭಾಷೆ ಮುಖ್ಯ: ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಜಾಗತೀಕರಣದ ಹೊಡೆತ ತಾಳಿಕೊಳ್ಳಲು ಭಾಷೆ ಬಹಳ ಮುಖ್ಯ. ಜಾಗತೀಕರಣದಿಂದಾಗಿ 2,500 ವರ್ಷಗಳ ಇತಿಹಾಸವಿರುವ ಭಾಷೆ ಅಳಿವಿನಂಚಿಗೆ ಬಂದು ನಿಲ್ಲುತ್ತಿದೆ ಎಂದರು.
ವಿಶ್ವದ ಎಲ್ಲಾ ಪ್ರಾದೇಶಿಕ ಭಾಷೆಗಳು ಈ ನಿಟ್ಟಿನಲ್ಲಿ ಹೋರಾಡುವ ಸ್ಥಿತಿ ಇದೆ. ದಿನಕ್ಕೆ ವಿಶ್ವದಲ್ಲಿ 15 ಭಾಷೆಗಳು ಸಾಯುತ್ತಿದೆ. ಭಾರತದಲ್ಲಿ ಇಂಗ್ಲೀಷನ್ನು ಒಂದು ವ್ಯಾಕರಣ ಭಾಷೆಯಾಗಿ ಕಲಿಸಬೇಕು. ಸಣ್ಣ ಭಾಷೆಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ, ಜಲನೀತಿ ಹಾಗೂ ಉದ್ಯೋಗ ನೀತಿ ದೇಶದಲ್ಲಿ ಜಾರಿಯಾಗಬೇಕು. ಅದರಿಂದ ಮಾತ್ರವೇ ಜಾಗತೀಕರಣ ಹಾಗೂ ಖಾಸಗೀಕರಣದ ಅಪಾಯವನ್ನು ತಡೆಯಲು ಸಾಧ್ಯ ಎಂದು ಪ್ರತಿಪಾದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ನ್ಯಾ. ಕೆ. ದಿವಾಕರ್, ವಿಪ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ವಕೀಲರ ಸಂಘದ ಅಧ್ಯಕ್ಷ ಅಶೋಕ ಭಟ್, ಜೀವವಿಮಾ ನಿಗಮದ ಕೃಷ್ಣಪ್ಪ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

