ಸಂಘಟಕರ ಕೊರತೆ: ಯಕ್ಷಗಾನ ಬೆಳವಣಿಗೆ ಕುಂಠಿತ
ಕ.ಪ್ರ.ವಾರ್ತೆ, ಸಾಗರ, ಆ.16
ಸಂಘಟಕರ ಕೊರತೆಯಿಂದಾಗಿ ಯಕ್ಷಗಾನ ರಂಗಭೂಮಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ನಗರಸಭೆ ಸದಸ್ಯ ತೀ.ನ. ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಯಕ್ಷಾಭಿಮಾನಿ ಬಳಗ ಹಮ್ಮಿಕೊಂಡಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಅವರನ್ನು ಸನ್ಮಾನಿಸಿ ಮಾತನಾಡಿ, ಯಕ್ಷಗಾನ ಕಲೆ ಉಳಿಯಬೇಕಾದರೆ ಅದನ್ನು ಪ್ರೋತ್ಸಾಹಿಸುವವರ ಸಂಖ್ಯೆ ಹೆಚ್ಚಬೇಕು ಎಂದು ಅಭಿಪ್ರಾಯಪಟ್ಟರು.
ವಯಸ್ಸು ಇರುವಷ್ಟು ಕಾಲ ರಂಗದ ಮೇಲೆ ತನ್ನ ಅಭಿನಯದ ಮೂಲಕ ಜನಮನ ಸೂರೆಗೊಳ್ಳುವ ಕಲಾವಿದರು, ವಯಸ್ಸಾದ ನಂತರ ನೇಪಥ್ಯಕ್ಕೆ ಸರಿಯುವ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹವರ ನೆರವಿಗೆ ಯಕ್ಷಗಾನ ಅಭಿಮಾನಿಗಳು, ಸಂಘಟನೆಗಳು ಹಾಗೂ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಕೇವಲ ಪ್ರದರ್ಶನವಷ್ಟೇ ಕಲೆಯನ್ನು ಬೆಳೆಸುವುದಿಲ್ಲ. ಪ್ರದರ್ಶನದ ಜೊತೆಜೊತೆಗೆ ಹೊಸ ಪೀಳಿಗೆಗೆ ಈ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು. ಅವರಿಗೆ ಯಕ್ಷಗಾನದ ಸರಿಯಾದ ತರಬೇತಿ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆ ಗೊತ್ತಿಲ್ಲದ ಹುಬ್ಬಳ್ಳಿಯಂತಹ ಬಯಲುಸೀಮೆ ಪ್ರದೇಶದಲ್ಲಿ ನಾನು ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸಿ ಯಶಸ್ವಿಯಾಗಿದ್ದೇನೆ. ಈ ರೀತಿಯ ಪ್ರಯತ್ನಗಳು ಸಾಮೂಹಿಕವಾಗಿ ನಡೆಯಬೇಕು ಎಂದು ಆಶಿಸಿದರು.
ಯಕ್ಷಾಭಿಮಾನಿ ಬಳಗದ ಸುಧಾಕರ ರಾವ್ ಹಾಗ್ಗೋಡು, ಮಹೇಶ್, ಚಂದ್ರಮೋಹನ್ ಭಟ್, ಗುರುನಂದನ, ರಾಘು, ಪ್ರಶಾಂತ್, ಮಹಾಬಲೇಶ್ವರ ಹೆಗ್ಗೋಡು, ಬಾಲಚಂದ್ರ ಭಟ್ ಸಗಂದೂರು ಹಾಜರಿದ್ದರು. ನಂತರ ಅತಿಥಿ ಕಲಾವಿದರಿಂದ ಕವಿರತ್ನ ಕಾಳಿದಾಸ ಹಾಗೂ ಕೀಚಕ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

