ಬತ್ತಕ್ಕೆ ಬಂತು ಬೇರುಗಂಟು ರೋಗ
ಕ.ಪ್ರ.ವಾರ್ತೆ ಶಿವಮೊಗ್ಗ ಆ.19
ರಾಜ್ಯಾದ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ಬತ್ತಕ್ಕೆ ಬೇರುಗಂಟು ಹಾಗೂ ಸ್ಕ್ಲಿರೋಸಿಯಂ ಕೊಳೆರೋಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ತಜ್ಞರು ಸಲಹೆ ನೀಡಿದ್ದಾರೆ.
ಬೇರುಗಂಟು ರೋಗ ಉಂಟುಮಾಡುವ ಜಂತುಹುಳು ಮುಖ್ಯವಾಗಿ ಗಂಡು. ಬತ್ತ ಹಾಗೂ ಗದ್ದೆಯಲ್ಲಿ ಬೆಳೆಯುವ ಇತರೆ ಕಳೆಗಳಲ್ಲಿ ಆಶ್ರಯವನ್ನು ಪಡೆಯುತ್ತದೆ. ಈ ಬೇರುಗಂಟು ರೋಗ ಅಪಾರ ಹಾನಿಗೆ ಕಾರಣವಾಗಿದೆ. ಕೆಲವು ಪ್ರದೇಶಗಳಲ್ಲಿ ಸ್ಕ್ಲಿರೋಸಿಯಂ ಶಿಲೀಂಧ್ರದಿಂದ ಉಂಟಾಗುವ ಕೊಳೆರೋಗ ಕೂಡಾ ಜಂತುಹುಳುವಿನ ಜೊತೆ ಸೇರಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡುತ್ತಿದೆ.
ಎಲೆ ಹಳದಿ: ಸಸಿಮಡಿಯಲ್ಲಿ ಎಲೆ ಹಳದಿಯಾಗುವುದು, ಸಸಿಗಳ ಕುಂಠಿತ ಬೆಳವಣಿಗೆ, ಸಮರ್ಪಕ ಬೆಳವಣಿಗೆ ಬೇರುಗಳ ಮೇಲೆ ಚಿಕ್ಕ ಗಂಟು ಹಾಗೂ ಕೊನೆಯಲ್ಲಿ ಸಸಿಗಳ ಸಾಯುವಿಕೆ ಕಂಡುಬರುತ್ತದೆ. ನಾಟಿ ನಂತರ ಗದ್ದೆಯಲ್ಲಿ ಎಲೆಗಳು ತೀವ್ರವಾಗಿ ಹಳದಿಯಾಗುವವು.
ಅಲ್ಲಲ್ಲಿ ಗಿಡಗಳ ಕುಂಠಿತ ಬೆಳವಣಿಗೆ, ತಡವಾಗಿ ಹೂ ಬಿಡುವುದು ಮತ್ತು ತೊಂಡೆಗಳ ಸಂಖ್ಯೆ ಕಡಿಮೆಯಾಗುವುದು, ಬೇರುಗಳ ಕುಂಠಿತ ಮತ್ತು ಅಸಮರ್ಪಕ ಬೆಳವಣಿಗೆ, ಬೇರುಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಗಂಟುಗಳು ಕಂಡು ಬರುವುದು. ಎಲೆ ಗಾತ್ರ ಕಡಿಮೆಯಾಗುವುದು, ತಡವಾಗಿ ತೆನೆ ಬಿಡುವುದು. ರೋಗದ ತೀವ್ರತೆ ಹೆಚ್ಚಾದಲ್ಲಿ ತೆನೆಗಳು ಬೆಳೆಯುವುದಿಲ್ಲ.
ನಿರ್ವಹಣೆ ಕ್ರಮ: ಬಿತ್ತನೆ ಪೂರ್ವ ಸಸಿಮಡಿಯಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು ಇಂತಿವೆ
ಬಿತ್ತನೆಗೆ ಮುನ್ನ 2 ಮಿ.ಲೀ. ಕಾರ್ಬೊಸಲ್ಫಾನ್ ದ್ರಾವಣವನ್ನು 10 ಲೀಟರ್ ನೀರಿನಲ್ಲಿ 5 ನಿಮಿಷ ಉಪಚರಿಸಿ 12 ಗಂಟೆ ಕಾಲ ನೆರಳಲ್ಲಿ ಒಣಗಿಸಬೇಕು. ಬಿತ್ತನೆಗೆ 4 ರಿಂದ 6 ವಾರಗಳ ಮುನ್ನ ಮಣ್ಣನ್ನು ಆಳವಾಗಿ ಉಳುಮೆ ಮಾಡುವುದು ಹಾಗೂ ಪ್ರತಿ ಚ.ಮೀ.ಗೆ 100 ಗ್ರಾಂ ಕಳೆತ ಕೋಳಿ ಗೊಬ್ಬರ ಹಾಕಿ ಪಾರದರ್ಶಕ ಪಾಲಿಥಿನ್ ಹಾಳೆ (100 ಗೇಜ್ ದಪ್ಪ)ಯಿಂದ ಸಸಿಮಡಿಯನ್ನು 2 ವಾರಗಳ ಕಾಲ ಮುಚ್ಚಿ ಸೌರ ಶಾಖೀಕರಣಗೊಳಿಸಬೇಕು.
ಪ್ರತಿ 3 ಗುಂಟೆ ಪ್ರದೇಶಕ್ಕೆ 3 ಗಾಡಿ ಕೊಟ್ಟಿಗೆ ಗೊಬ್ಬರ ಹಾಕಬೇಕು. ಬಿತ್ತನೆ ಸಮಯದಲ್ಲಿ ಪ್ರತಿ ಎಕರೆ ಬತ್ತದ ಬಿತ್ತನೆಗೆ ಬೇಕಾಗುವ ಸಸಿಮಡಿಗಳಿಗೆ ಪ್ರತಿ ಚದರ ಮೀಟರ್ 3.5 ಗ್ರಾಂ ಕಾರ್ಬೊಫ್ಯೂರಾನ್ 3ಜಿ ಹರಳುಗಳನ್ನು ಬೆರೆಸಬೇಕು. ಬೇವಿನ ಹಿಂಡಿ 400 ಗ್ರಾಂ ಪ್ರತಿ ಚ.ಮೀ. ಉಪಯೋಗಿಸಬೇಕು. ಜೈವಿಕ ನಿಯಂತ್ರಣಗಳಾದ ಸುಡೋಮೋನಾಸ್ ಫ್ಲೋರೆಸೆನ್ಸ್ ಅಥವಾ ಟ್ರೈಕೋಡರ್ಮಾ ವಿರಿಡೆ ಪ್ರತಿ ಚ.ಮೀ.ಗೆ 20 ಗ್ರಾಂ. ಹಾಕಬೇಕು.
ನಾಟಿ ಮುನ್ನ ಉಲುಮೆ: ನಾಟಿ ಮಾಡುವ ಮುನ್ನ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು ಹಾಗೂ ರೋಗವಿಲ್ಲದ ಸಸಿಗಳನ್ನು ಬಿತ್ತನೆಗೆ ಬಳಸಬೇಕು.
ನಾಟಿ ಮಾಡುವ ಮುನ್ನ ಒಂದು ಹೆಕ್ಟೇರ್ಗೆ 33.3 ರಿಂದ 49.9 ಕೆ.ಜಿ. ಕಾರ್ಬೋಫ್ಯೂರಾನ್ 3ಜಿ ಹರಳು ಅಥವಾ ಪ್ರತಿ ಚದರ ಮೀಟರ್ಗೆ ಶೇ.4 ರ ಕಾರ್ಟಾಪ್ ಹೈಡ್ರೋಕ್ಲೋರೈಡನ್ನು ಮಣ್ಣಿನಲ್ಲಿ ಬೆರೆಸಬೇಕು. ಒಂದು ಹೆಕ್ಟೇರಿಗೆ 250-400 ಕೆ.ಜಿ. ಬೇವಿನ ಹಿಂಡಿಯನ್ನು ನಾಟಿ ಮಾಡುವ ಮುನ್ನ ಮಣ್ಣಿನಲ್ಲಿ ಬೆರೆಸಬೇಕು.
ಇದರ ಜತೆಗೆ ರೋಗ ಪೀಡಿತ ಗದ್ದೆಗಳಿಂದ ನೀರು ಹರಿಯದಂತೆ ತಡೆಯುಬೇಕು. ಕಳೆಗಿಡಗಳನ್ನು ಕಿತ್ತು ನಾಶ ಮಾಡಬೇಕು.
ಕೊಳೆರೋಗದ ನಿಯಂತ್ರಣ: ಜೈವಿಕ ನಿಯಂತ್ರಣಗಳಾದ ಸುಡೋಮೋನಾಸ್ ಫ್ಲೋರೆಸೆನ್ಸ್ 20 ಗ್ರಾಂ ಚ.ಮೀ. ಅಥವಾ ಟ್ರೈಕೋಡರ್ಮಾ ವಿರಿಡೆ 20 ಗ್ರಾಂ ಪ್ರತಿ ಚ.ಮೀ. ಹಾಕಬೇಕು. ಸಸಿಮಡಿಯನ್ನು ಕ್ಯಾಪ್ಟಾನ್-ಶೇ.0.2 ದ್ರಾವಣದಿಂದ ನೆನೆಸಬೇಕು. ರೋಗದ ತೀವ್ರತೆ ಹೆಚ್ಚಾಗಿದ್ದಲ್ಲಿ ಕಾರ್ಬೆಂಡೇಜಿಮ್ ಶೇ.0.1ರ ದ್ರಾವಣವನ್ನು ಸಿಂಪಡಿಸಬೇಕು. ಮಾಹಿತಿಗಾಗಿ ಕೃಷಿ ಮತ್ತು ತೋಟಗಾರಿಕೆ ವಿವಿಯ ಜಂತುಹುಳು ಶಾಸ್ತ್ರಜ್ಞ ರವೀಂದ್ರ ಇವರನ್ನು (ಮೊ. 99003 00245) ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

