ಶಿವಮೊಗ್ಗ

ಕೃಷಿ ವಿವಿಗಳತ್ತ ಕಣ್ಣು ಹಾಯಿಸದ ಪರೀಕ್ಷಾ ಪ್ರಾಧಿಕಾರ

Published On :

-ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳನ್ನು ಪಡೆದು ನಂತರ ಪ್ರವೇಶ ಪಡೆಯದೇ ಉಳಿದಿರುವ ಸೀಟುಗಳ ಭರ್ತಿ ಮಾಡಲು ಯಾವ ರೀತಿಯಲ್ಲಾದರೂ ಅವಕಾಶವಿದೆ. ಖಾಸಗಿ ಕಾಲೇಜುಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಸಾಧ್ಯತೆ ಹೆಚ್ಚು. ಆದರೆ ಸಂಪೂರ್ಣ ಸರ್ಕಾರದ ನಿರ್ವಹಣೆಯಲ್ಲಿಯೇ ಇರುವ ಕೃಷಿ ಹಾಗೂ ತೋಟಗಾರಿಕೆ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸೀಟುಗಳ ಕತೆ ಏನು?
ಈ ಪ್ರಶ್ನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಳಿ ಯಾವುದೇ ಉತ್ತರವಿಲ್ಲ. ಆದರೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿಇಟಿ ಮೂಲಕ ಪ್ರವೇಶ ಪಡೆದು ಅಡ್ಮಿಷನ್ ಆಗದೇ ಉಳಿದಿರುವ ಸೀಟುಗಳನ್ನು ಭರ್ತಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಆ.23 ಹಾಗೂ 24ರಂದು ಈ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಪ್ರಾಧಿಕಾರವು ಕರೆದಿದೆ. ಆದರೆ ಕೃಷಿ ಸಂಬಂಧಿ ಕಾಲೇಜುಗಳನ್ನು ಮಾತನಾಡಿಸುವುದಕ್ಕೂ ಹೋಗಿಲ್ಲ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ಕ್ರಮದಿಂದ ಗೊಂದಲಕ್ಕೀಡಾಗಿರುವ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳು ಪ್ರಾಧಿಕಾರಕ್ಕೆ ಪತ್ರ ಬರೆದು ನಿರ್ದೇಶನ ಕೋರಿವೆ.
ವ್ಯವಸ್ಥೆ ಹೀಗಿದೆ: ರಾಜ್ಯದ ಐದು ಕೃಷಿ ಹಾಗೂ ತೋಟಗಾರಿಕೆ ವಿವಿ ವ್ಯಾಪ್ತಿಯಲ್ಲಿ ಒಟ್ಟು 15 ಕಾಲೇಜುಗಳಿವೆ. ಲಭ್ಯವಿರುವ ಒಟ್ಟು ಸೀಟುಗಳು 2,250. ಇದರಲ್ಲಿ ಶೇ.25ರಷ್ಟು ಸೀಟುಗಳನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೀಸಲು. ಉಳಿದ ಸೀಟುಗಳು ಪ್ರಸಕ್ತ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಲಭ್ಯ. ಆನ್‌ಲೈನ್ ಕೌನ್ಸೆಲಿಂಗ್ ವೇಳೆ ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ ಇತ್ಯಾದಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಣವನ್ನೂ ಸಹ ಪ್ರಾಧಿಕಾರಕ್ಕೆ ಪಾವತಿಸಿದ್ದಾರೆ. ಈ ರೀತಿ ಸೀಟು ಪಡೆದ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪ್ರವೇಶ ಪಡೆದಿಲ್ಲ. ಹಾಗಾಗಿ ಎಲ್ಲಾ ಕಾಲೇಜುಗಳಲ್ಲೂ ಸರಾಸರಿ 7-8 ಸೀಟುಗಳು ಖಾಲಿ ಉಳಿದಿವೆ!
ಬೆಂಗಳೂರು ಕೃಷಿ ವಿವಿ ಖಾಲಿ ಉಳಿದಿರುವ ಸೀಟುಗಳ ಸಂಖ್ಯೆಯೇ ಹೆಚ್ಚು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿ ವ್ಯಾಪ್ತಿಯಲ್ಲಿರುವ ನಾಲ್ಕು ಕಾಲೇಜುಗಳಲ್ಲಿ 9 ಸೀಟುಗಳು ಖಾಲಿ ಉಳಿದಿವೆ.
ಇದಲ್ಲದೇ ಐಸಿಎಆರ್ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗುವ ಎಲ್ಲಾ ವಿದ್ಯಾರ್ಥಿಗಳೂ ಪ್ರವೇಶ ಪಡೆಯದ ಕಾರಣ ಈ ಸೀಟುಗಳು ಸಹ ಖಾಲಿ ಇವೆ.
ಏನಾಗಬೇಕು? ಇದೇ ಆಗಸ್ಟ್ ಮೊದಲ ವಾರದಿಂದ ಎಲ್ಲಾ ಕೃಷಿ ಹಾಗೂ ತೋಟಗಾರಿಕೆ ವಿವಿಗಳಲ್ಲಿ ಮೊದಲ ವರ್ಷದ ಪದವಿ ತರಗತಿಗಳು ಆರಂಭವಾಗಿವೆ. ಖಾಲಿ ಇರುವ ಸೀಟುಗಳನ್ನು ಹಾಗೆಯೇ ಬಿಟ್ಟರೆ ಆಯ್ಕೆ ಬಯಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೃಷಿ ಸಂಬಂಧಿ ಕೋರ್ಸ್‌ಗಳಿಗಾಗಿ ಕೂಡಲೇ ಇನ್ನೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಬೇಕಾಗಿದೆ.
ಕಾಲೇಜುಗಳು ಆರಂಭವಾಗಿ ಒಂದು ತಿಂಗಳಾದರೆ ಯಾವ ಕೃಷಿ ವಿಶ್ವವಿದ್ಯಾಲಯಗಳೂ ಸಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ. ಏಕೆಂದರೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದ್ದರೆ ಮುಂದಿನ ದಿನಗಳಲ್ಲಿ ಅವರಿಗೇ ತೊಂದರೆ ಆಗುತ್ತದೆ. ಹಾಗಾಗಿ ಇರುವ ಒಂದು ವಾರದ ಅವಧಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
ವಿವಿಗಳ ಕೋರಿಕೆ: ಸೀಟುಗಳು ಖಾಲಿ ಉಳಿಯುವ ಹಿನ್ನೆಲೆಯಲ್ಲಿ ಎಲ್ಲಾ ಕೃಷಿ ಮತ್ತು ತೋಟಗಾರಿಕೆ ವಿವಿಗಳ ಪರವಾಗಿ ಬೆಂಗಳೂರು ಕೃಷಿ ವಿವಿ ಕುಲಸಚಿವ ಡಾ. ನಂಜಪ್ಪ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಜಿ.ಆರ್. ರಾಮಸ್ವಾಮಿ ಅವರು 'ಕನ್ನಡಪ್ರಭ'ಕ್ಕೆ ಈ ವಿಷಯ ತಿಳಿಸಿದ್ದು, ಐಸಿಎಆರ್ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಬಾರದೇ ಖಾಲಿ ಉಳಿದ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕಾಗಿ ನೇರ ಸಂದರ್ಶನ ಕರೆಯುವ ಬಗ್ಗೆ ಚಿಂತನೆ ನಡೆಯುತ್ತಿದೆ. ಎಲ್ಲಾ ವಿವಿಗಳು ಬೇರೆಬೇರೆ ದಿನ ಸಂದರ್ಶನ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ' ಎಂದು ತಿಳಿಸಿದರು. ಆದರೆ ಸಿಇಟಿ ಮೂಲಕ ಭರ್ತಿ ಮಾಡಬೇಕಾದ ಸೀಟುಗಳ ಬಗ್ಗೆ ಪ್ರಾಧಿಕಾರದ ಉತ್ತರ ನಿರೀಕ್ಷಿಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.