ಸಮಾಜ ಹಿತ ಸೇವೆಯಿಂದ ಗೌರವ ಪ್ರಾಪ್ತಿ
ಶಿಕಾರಿಪುರ, ಆ.21 ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸಿದಾಗ ಮಾತ್ರ ಪ್ರತಿಯೊಬ್ಬ ವ್ಯಕ್ತಿಗೂ ಸಹಜ ಗೌರವ ಪ್ರಾಪ್ತವಾಗಲಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀ ಹೇಳಿದರು.
ಬುಧವಾರ ಪಟ್ಟಣದ ಹೊಸ ಮೇದಾರಕೇರಿಯಲ್ಲಿ ನಿರ್ಮಾಣವಾಗಿರುವ ಕನಕ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಸಹಕಾರಿ ಕ್ಷೇತ್ರದಲ್ಲಿ ಸಿದ್ದನಗೌಡ ರಾಮನಗೌಡ ಪಾಟೀಲ್ ಅವರು ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘ ಆರಂಭಿಸುವ ಮೂಲಕ ಸಹಕಾರಿ ಸಂಘವನ್ನು ದೇಶಾದ್ಯಂತ ಪರಿಚಯಿಸಿ ಕ್ರಾಂತಿಕಾರಕ ಕಾರ್ಯದ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿ ಯಾಗಿದ್ದಾರೆ ಎಂದ ಅವರು ಸಂಘ ಸಂಸ್ಥೆಯ ಆರಂಭ ಬಹು ಕಷ್ಟಕರವಾಗಿದ್ದು ನಿಂದನೆ, ತೆಗಳಿಕೆ, ಅಪಮಾನದಂತಹ ಸಂಗತಿ ಸಹಜವಾಗಿದೆ ಎಂದರು.
ಸಮಾಜಮುಖಿ ಕಾರ್ಯ: ನಿಂದಕರಿದ್ದಲ್ಲಿ ಮಾತ್ರ ಉತ್ತಮ ಕೆಲಸ ಕಾರ್ಯ ಸಾಧ್ಯವಿದ್ದು, ಪ್ರತಿಯೊಬ್ಬ ವ್ಯಕ್ತಿ ಜನಿಸುವಾಗ ಉಸಿರು ಮಾತ್ರ ಹೊಂದಿದ್ದು, ಸಮಾಜಮುಖಿ ಕಾರ್ಯದಿಂದ ಹೆಸರು ಪ್ರಾಪ್ತವಾಗಲಿದೆ. ಉತ್ತಮ ಕಾರ್ಯದಿಂದಾಗಿ ಉಸಿರು ಸ್ಥಗಿತಗೊಂಡ ನಂತರದಲ್ಲಿಯೂ ಹೆಸರು ಮಾತ್ರ ಶಾಶ್ವತವಾಗಲಿದೆ ಎಂದರು.
ಸಮಾಜದ ಹಿತಕ್ಕಾಗಿ ಶರೀರವನ್ನು ಮೀಸಲಿರಿಸಿದಾಗ ಮಾತ್ರ ವ್ಯಕ್ತಿಗೆ ಸಹಜ ಗೌರವ ಪ್ರಾಪ್ತವಾಗಲಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ತೆಗಳಿಕೆ, ಹೊಗಳಿಕೆಗೆ ಮನ್ನಣೆ ನೀಡದೆ ಆತ್ಮಸಾಕ್ಷಿಯಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದರು.
ನಿರ್ದೇಶಕ ನಗರದ ಅಶೋಕಪ್ಪ ಮಾತನಾಡಿ, ಕೇವಲ ಕಟ್ಟಡ ನಿರ್ಮಾಣದಿಂದ ಮಾತ್ರ ಜವಾಬ್ದಾರಿ ಪೂರ್ಣಗೊಂಡ ಭಾವನೆ ಹೊಂದದೆ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದ್ದು, ಸರಿಸಮಾನವಾಗಿ ಸ್ಪರ್ಧೆಗೆ ಸೊಸೈಟಿಯನ್ನು ಬ್ಯಾಂಕ್ ರೀತಿಯಲ್ಲಿ ಪರಿವರ್ತಿಸಿ ಗಣಕೀಕರಣಗೊಳಿಸಲು ಸದಸ್ಯರು ಪೂರಕವಾಗಿ ಸಹಕರಿಸುವಂತೆ ಮನವಿ ಮಾಡಿದರು.
ಅದ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ಪಿ. ದೊಡ್ಡಪ್ಪ ಮಾತನಾಡಿ, ಕೇವಲ 720 ಸದಸ್ಯರ ಶೇರು ಬಂಡವಾಳದ ಮೂಲಕ ಆರಂಭವಾದ ಸೊಸೈಟಿ ಇದೀಗ ಕೋಟಿಗೂ ಮೀರಿ ಆಸ್ತಿ ಹೊಂದಿದೆ. ಸದಸ್ಯರ ಸ್ವಂತ ಕಟ್ಟಡದ ಆಸೆ ಶ್ರೀಗಳ ಆಶೀರ್ವಾದಿಂದ ಕೇವಲ 8 ತಿಂಗಳಲ್ಲಿ ಪೂರ್ಣಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕಟ್ಟಡ ದಾನಿಗಳ ಸಹಿತ ಪಿಗ್ಮಿ ಸಂಗ್ರಹಕಾರರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಲಕ್ಷ್ಮಿಕಾಂತಪ್ಪ ಮಾತನಾಡಿದರು. ವೇದಿಕೆಯಲ್ಲಿ ಸೊಸೈಟಿ ಉಪಾಧ್ಯಕ್ಷ್ಯೆ ಸುಧಾ, ಹಳ್ಳೂರು ಪರಮೇಶ್ವರಪ್ಪ, ಚನ್ನಳ್ಳಿ ಮಹಾಲಿಂಗಪ್ಪ, ಎ.ಆರ್. ಮೂರ್ತಿ, ಗುಡ್ಡಳ್ಳಿ ಪರಮೇಶ್ವರಪ್ಪ, ಹರಳೆಣ್ಣೆ ಗಿಡ್ಡಪ್ಪ, ಚಿಟ್ಟೂರು ಮಲ್ಲಿಕಾರ್ಜುನ್, ವಿಜಯಲಕ್ಷ್ಮಿ ಕಂಚುಗಾರ್, ನಾಗರಾಜಪ್ಪ ಕಂಚುಗಾರ್, ಹಾಲಪ್ಪ, ಗೋಣಿ ಬಸಪ್ಪ, ಬಿ.ಸಿ ವೇಣುಗೋಪಾಲ್, ಸೇನೆಯ ಡಿವೈಎಸ್ಪಿ ಪ್ರದೀಪ್, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಿಯಾಂಕ ಪ್ರಾರ್ಥಿಸಿದರು. ಶಿವಲಿಂಗಪ್ಪ ಸ್ವಾಗತಿಸಿದರು. ಮಹೇಶ್ ನಿರೂಪಿಸಿದರು. ಅರುಣಕುಮಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

