ಸ್ಪಷ್ಟ ಕೃಷಿ ನೀತಿ ಜಾರಿಗೆ ಯತ್ನ
ಶಿವಮೊಗ್ಗ: ಸಮಗ್ರ ಕೃಷಿ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ರೈತ ಸಂಘ ಹತ್ತು ಜನರ ತಜ್ಞರ ತಂಡ ರಚಿಸಿದ್ದು, ರಾಷ್ಟ್ರವ್ಯಾಪಿ ಸ್ಪಷ್ಟ ಕೃಷಿ ನೀತಿ ಜಾರಿಗೆ ತರಲು ಸಂಘ ಮುಂದಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಶನಿವಾರ ನಗರದ ನಿವೃತ್ತ ನೌಕರರ ಸಂಘದ ಸಭಾಭವನದಲ್ಲಿ ದಿ.ಎನ್.ಡಿ. ಸುಂದರೇಶ್ ಅವರ 75ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.
ರೈತ ಸಂಘ ಜಾರಿಗೆ ತರಲು ಹೊರಟಿರುವ ಕೃಷಿ ನೀತಿಗೆ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸದಿರುವುದು ವಿಷಾದನೀಯ. ಚುನಾವಣಾ ಸಂದರ್ಭದಲ್ಲಿ ಚುನಾವಣಾ ತಂತ್ರ ಮಾಡುವುದನ್ನು ರಾಜಕೀಯ ಪಕ್ಷಗಳು ಕೈ ಬಿಡಬೇಕು. ಇದು ಸಂವಿಧಾನಕ್ಕೆ- ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗಿದೆ. ರೈತರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ರೈತರಿಗೆ ತರಬೇತಿ ನೀಡಬೇಕು ಎಂದರು.
ರೈತ ಸಮುದಾಯ ರಾಜಕಾರಣದೆಡೆಗೆ ಗಮನ ಹರಿಸದೆ ಉತ್ಪಾದನೆ, ಸಾಲ, ದೇಶದ ಸಂಪತ್ತಿನ ಕಡೆಗೆ ಯೋಚಿಸಬೇಕು ಎಂದ ಅವರು, ರಾಜ್ಯಸರ್ಕಾರ ಒಂದು ರೂಪಾಯಿಗೆ 1 ಕೆ.ಜಿ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದಿದೆ. ಇದಕ್ಕೆ ಸಂಘದ ವಿರೋಧವಿಲ್ಲ. ಆದರೆ, ಇದಕ್ಕೆ ಬೇಕಾದ ಅಕ್ಕಿಯನ್ನು ಹೊರರಾಜ್ಯದಿಂದ ತರುತ್ತಿರುವುದನ್ನು ಸಂಘ ವಿರೋಧಿಸುತ್ತದೆ. ರಾಜ್ಯದ ರೈತರಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿದರೆ, ಇಲ್ಲಿನ ರೈತರೇ ಆಹಾರ ಧ್ಯಾನವನ್ನು ಒದಗಿಸುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಚಿಸಬೇಕಿದೆ ಎಂದು ತಿಳಿಸಿದರು.
ರಾಜ್ಯದ ಅಕ್ಕಿ ಗಿರಣಿಗಳಿಂದ ಸರ್ಕಾರ ಲೇವಿ ಅಕ್ಕಿಯನ್ನು ನಿಗದಿಪಡಿಸಿದೆ. ಆದರೆ ಶೇ.60ರಷ್ಟು ರೈಸ್ಮಿಲ್ಗಳು ಸರ್ಕಾರಕ್ಕೆ ನೀಡಬೇಕಾದ ಲೇವಿ ಅಕ್ಕಿಯನ್ನು ನೀಡಿಲ್ಲ ಎಂದು ಆರೋಪಿಸಿದ ಅವರು, ಲೇವಿ ಅಕ್ಕಿ ಕೊಳ್ಳುವಿಕೆಯಲ್ಲಿ ಹುನ್ನಾರ ಅಡಗಿದ್ದು, ರೈಸ್ಮಿಲ್ಗಳಿಂದ ಕಡ್ಡಾಯವಾಗಿ ಲೇವಿ ಅಕ್ಕಿಯನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಈ ಬಾರಿ ಅಧಿಕ ಮಳೆಯಿಂದಾಗಿ ರೈತ ಅತಿವೃಷ್ಠಿಗೆ ಸಿಲುಕಿದ್ದಾನೆ. ಸರ್ಕಾರಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಮರೋಪಾದಿಯಲ್ಲಿ ಪರಿಹಾರ ನೀಡದೆ ಹೋದರೆ, ಅನಿವಾರ್ಯವಾಗಿ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.
ರೈತ ಮುಖಂಡ ಕಡಿದಾಳ್ ಶಾಮಣ್ಣ, ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ರೈತ ಬೆಳೆದ ಬೆಳೆಗೆ ಸರ್ಕಾರ ಬೆಲೆ ನಿಗದಿಮಾಡಬೇಕು. ದೇಶಕ್ಕೆ ಆಹಾರ ಭದ್ರತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ನೀಡುತ್ತಿರುವುದು ಒಳ್ಳೆಯ ಅಲೋಚನೆ. ಆದರೆ, ಹಿಂಬಾಗಿಲಿನಿಂದ ಲೇವಿ ಸಂಗ್ರಹಿಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿ.ವಿ. ಪ್ರಾಧ್ಯಾಪಕ ಪ್ರೊ. ಎ.ಎಸ್. ಕುಮಾರಸ್ವಾಮಿ, ರೈತ ಮುಖಂಡ ಬೆನಕಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

