ಶಿವಮೊಗ್ಗ

ಸಾಧು, ಸಂತರ ಬಂಧನ ಖಂಡಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.25 ಅಯೋಧ್ಯೆಯಲ್ಲಿ ಕೋಸಿ ಪರಿಕ್ರಮ ಯಾತ್ರೆಯನ್ನು ಹತ್ತಿಕ್ಕಲು ಹೊರಟ ಉತ್ತರಪ್ರದೇಶ ಸರ್ಕಾರದ ವಿರುದ್ಧ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ಮಧ್ಯಾಹ್ನ 1 ಗಂಟೆಗೆ ಸೇರಿದ ಕಾರ್ಯಕರ್ತರು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಸಾಂಕೇತಿಕವಾಗಿ 15 ನಿಮಿಷ ರಸ್ತೆ ತಡೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬಂಧನ ಸರಿಯಲ್ಲ: ಪರಿಕ್ರಮ ಯಾತ್ರೆ ನಿಗದಿಯಾಗಿದ್ದು ಒಂದು ವರ್ಷದ ಹಿಂದೆ. 4-5 ತಿಂಗಳ ತಿಂದೆಯೇ ದಿನಾಂಕ ನಿಶ್ಚಯವಾಗಿತ್ತು. ಸಾವಿರಾರು ಸಂತರು, ವಿಹಿಂಪ ನಾಯಕರು ಕಾರ್ಯಕರ್ತರು ಅಲ್ಲಿ ಸೇರುತ್ತಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಹೊರಟ ವಿಶ್ವಹಿಂದು ಪರಿಷತ್ ಅಂತರಾಷ್ಟ್ರೀಯ ನಾಯಕ ಪ್ರವೀಣ್ ತೋಗಾಡಿಯಾ ಹಾಗೂ 300ಕ್ಕೂ ಅಧಿಕ ಸಾಧು ಸಂತರನ್ನು ಉತ್ತರ ಪ್ರದೇಶ ಸರ್ಕಾರ ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಬಜರಂಗದಳ ಮುಖಂಡ ದೀನದಯಾಳು, ಇಡೀ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿದೆ. ಇಡೀ ದೇಶದೊಳಗೆ ಉಗ್ರರು ನುಸುಳಿದ್ದಾರೆ. ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರ ಅಂತಹವರನ್ನು ಹಿಡಿಯುವ ಕೆಲಸ ಮಾಡುತ್ತಿಲ್ಲ. ಆದರೆ, ಈ ದೇಶಕ್ಕಾಗಿ ಜೀವನ ಮುಡುಪಾಗಿಟ್ಟ ಪ್ರವೀಣ್ ತೊಗಾಡಿಯಾ, ಸಾಧುಸಂತರನ್ನು ಬಂಧನ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಆಂತರಿಕ ಭದ್ರತೆ ಸಮಸ್ಯೆ: ದೇಶದಲ್ಲೇ ಅನೇಕ ಸಮಸ್ಯೆಗಳಿವೆ, ಆಂತರಿಕ ಭದ್ರತೆ ಸಮಸ್ಯೆ ಇದೆ. ಉಗ್ರರ ಸಮಸ್ಯೆ ಇದೆ. ಇಂತಹ ಸಮಸ್ಯೆಗೆ ಸ್ಪಂದಿಸುವ ಕೆಲಸ ಸರ್ಕಾರದ ಕಡೆಯಿಂದ ಆಗಬೇಕು ಎಂದ ಅವರು, ಈ ಪರಿಕ್ರಮ ಯಾತ್ರೆಯ ಹಿಂದೆ ಯಾವುದೇ ದುರುದ್ದೇಶ ಇಲ್ಲ.
ಯಾವುದೇ ರಾಜಕೀಯ ಪಕ್ಷಕ್ಕಾಗಿ ಈ ಯಾತ್ರೆ ನಡೆಯುತ್ತಿಲ್ಲ. ಇಡೀ ದೇಶದ ಹಾಗೂ ವಿಶ್ವದ ಶಾಂತಿಗಾಗಿ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವ ಉದ್ದೇಶದಿಂದ ಎಂದು ತಿಳಿಸಿದರು.
ಕಾರ್ಯಕ್ರಮ ನಡೆದೇ ತೀರುತ್ತದೆ: ಪೂರ್ವನಿಯೋಜಿತ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂಪೂರ್ಣ ನೆಲಕ್ಕಚ್ಚುವ ರೀತಿ ಮಾಡಬೇಕೆಂದು ಹೊರಟಿದ್ದಾರೆ. ಆದರೆ, ಅಖಿಲೇಶ್‌ನಂತಹವರು ನೂರಲ್ಲ ಸಾವಿರ ಸಂಖ್ಯೆಯಲ್ಲಿ ಬಂದರೂ ಕಾರ್ಯಕ್ರಮ ನಡೆದೇ ತೀರುತ್ತದೆ ಎಂದು ದಯಾಳು ಹೇಳಿದರು. ವಿಹಿಂಪ ಜಿಲ್ಲಾಧ್ಯಕ್ಷ ರಮೇಶ್ ಬಾಬು, ಜಿಲ್ಲಾ ಕಾರ್ಯದರ್ಶಿ ನಟರಾಜ್, ನಗರಾಧ್ಯಕ್ಷ ಶ್ಯಾಮರಾವ್ ಶಿರ್ಖೆ, ನಾರಾಯಣ, ಬಜರಂಗದಳ ನಗರ ಪ್ರಮುಖ ರಾಜಶೇಖರ್, ಮಾಲತೇಶ್, ಸಂತೋಷ್, ಲೋಕೇಶ್, ಗಣೇಶ್, ಶಬರಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.