ಅಧಿಕಾರಿಗಳನ್ನೇ ಕೂಡಿ ಹಾಕಿದರು
ಕ.ಪ್ರ.ವಾರ್ತೆ ಹೊಸನಗರ ಆ.26 ಒಟ್ಟು 52 ಕಾಮಗಾರಿಗಳಿಂದ ರು. 35 ಲಕ್ಷ ಬಿಲ್ ನೀಡದೇ ಕಾರ್ಮಿಕರ ಕೂಲಿ ಬಾಕಿ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳನ್ನು 8 ಗಂಟೆ ಕಾಲ ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಕರಿಮನೆ ಗ್ರಾಪಂನಲ್ಲಿ ನಡೆದಿದೆ.
ಕೂಲಿ ಕಾರ್ಮಿಕರು ಕೂಲಿ ಮಾಡಿ ವರ್ಷ ಕಳೆಯುತ್ತಾ ಬಂದರೂ ಕೂಲಿ ಹಣ ನೀಡದಿರುವುದನ್ನು ಖಂಡಿಸಿ, ಗ್ರಾಮಸ್ಥರು ಬೆಳಗ್ಗೆ 9.30ರಿಂದ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದರು. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಸಮಯ 10 ಗಂಟೆಗೆ ಗ್ರಾಪಂ ಒಳಗಿದ್ದ ಅಧಿಕಾರಿಗಳನ್ನು ಕೂಡಿ ಹಾಕಿ ಕಚೇರಿಗೆ ಬೀಗ ಜಡಿದರು.
ಪಟ್ಟು ಬಿಡದ ಗ್ರಾಮಸ್ಥರು: ಯಾರೇ ಬಂದು ವಿನಂತಿ ಮಾಡಿದರೂ ಗ್ರಾಮಸ್ಥರು ಮಾತ್ರ ತಮ್ಮ ಹಠ ಬಿಡಲಿಲ್ಲ. ಬಿಲ್ ಪಾವತಿಸಿ ನಂತರ ಬೀಗ ತೆರೆಯುತ್ತೇವೆ ಎಂದು ಪಟ್ಟು ಹಿಡಿದರು. ಕೊನೆಗೆ ಬೀಗ ತೆಗೆಯುವಾಗ ಸಂಜೆ 6 ತಲುಪಿತ್ತು.
ಸಾಮಾಜಿಕ ಲೆಕ್ಕಪರಿಶೋಧನೆಗಾಗಿ ಆಗಮಿಸಿದ್ದ ಖಾತ್ರಿ ಯೋಜನೆಯ ಕೋ ಆರ್ಡಿನೇಟರ್ ಮಮತಾ, ಸಹಾಯಕ ಮಾರುತಿ, ಗ್ರಾಪಂ ಕಾರ್ಯದರ್ಶಿ ಬಸವರಾಜ್, ಕಂಪ್ಯೂಟರ್ ಆಪರೇಟರ್ ಶಯನಾ, ಪಂಚಾಯ್ತಿ ಸಿಬ್ಬಂದಿ ಲಲಿತಮ್ಮ ಕಚೇರಿ ಒಳಗೆ ಬಂದಿಯಾಗಿದ್ದು ಅಸಹಾಯಕರಾಗುವಂತಾಗಿತ್ತು.
ತಾಪಂ ಸದಸ್ಯರಾದ ಸುಮಾ ಸುಬ್ರಹ್ಮಣ್ಯ, ಬಿ.ಇ.ಮಂಜುನಾಥ್, ಇಒ ವೀರಭದ್ರಪ್ಪ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಳಲು ಆಲಿಸಿ, ಮಹಿಳೆಯರು ಒಳಗೆ ಇರುವುದರಿಂದ ಕಚೇರಿ ಬೀಗ ತೆರೆಯುವಂತೆ ಮನವೊಲಿಸುವ ಮಾತಿಗೂ ಗ್ರಾಮಸ್ಥರು ಕಿವಿಗೊಡಲಿಲ್ಲ.
ಅಧಿಕಾರಿಗಳು ಒಳಗಿರುವುದರಿಂದಲೇ ನಮ್ಮ ಮನವಿಗೆ ಬಲ ಬರಬಹುದು. ಯಾವುದೇ ಕಾರಣಕ್ಕೂ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಮಾಹಿತಿ ಇಲ್ಲ: 6 ತಿಂಗಳ ಹಿಂದೆ ನಡೆದ ಸುಮಾರು 53 ಕಾಮಗಾರಿಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸಿ ಸರ್ಟಿಫೈ ಮಾಡಿದ್ದಾರೆ. ಆದರೆ ಜುಲೈ ತಿಂಗಳಲ್ಲಿ ಆಗಮಿಸಿದ ಜಿಪಂ ಅಧಿಕಾರಿಗಳು ಯಾರಿಗೂ ಮಾಹಿತಿ ನೀಡದೆ ಕಾಮಗಾರಿ ಪರಿಶೀಲಿಸಿ 53 ರಲ್ಲಿ 36 ಕಾಮಗಾರಿಗಳನ್ನು ಗುಣಮಟ್ಟದಿಂದ ಕೂಡಿಲ್ಲ ಎಂದು ವರದಿ ಮಾಡಿದ್ದಾರೆ ಎಂದು ಆರೋಪಿಸಲಾಯಿತು.
ನಗರ ಹೋಬಳಿಯಲ್ಲಿ ಬಿದ್ದ ಮಳೆಗೆ ಕಾಂಕ್ರಿಟ್ ಕಡ್ಡಗಳೇ ಉಳಿಯುವುದು ಅನುಮಾನ. ಹೀಗಿದ್ದರೂ ಅನಗತ್ಯವಾಗಿ ಖಾತ್ರಿ ಕಾಮಗಾರಿ ಹಣ ತಡೆಹಿಡಿದಿರುವ ಔಚಿತ್ಯ ಪ್ರಶ್ನಿಸಿದರಲ್ಲದೆ. ಹಣ ಪಾವತಿಯಾಗುವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಪ್ರತಿದಿನ ಗ್ರಾಪಂ ಕಚೇರಿ ಎದುರು ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು. ಸಂಜೆ 6 ಗಂಟೆ ಆಗುತ್ತಿದ್ದಂತೆ ಪ್ರತಿಭಟನೆಯನ್ನು ನಾಳೆಗೆ ಮುಂದೂಡಿ ಕಚೇರಿಯ ಬೀಗ ತೆಗೆದು ಗ್ರಾಮಸ್ಥರು ವಾಪಾಸಾದರು.
ಪ್ರಮುಖರಾದ ಸಾದಗಲ್ ಹರೀಶ್, ರಮೇಶ ಹಲಸಿನ ಹಳ್ಳಿ, ಪರ್ವತಪ್ಪಗೌಡ, ಕಟ್ಟಿನಕೈ ಗೋಪಾಲ, ದೇವೇಂದ್ರಪ್ಪ, ಸುಬ್ರಹ್ಮಣ್ಯ ಚಕ್ರಾ, ಮಳಲಿ ಸತೀಶ್, ನಿಲ್ಸಕಲ್ ಗೋಪಾಲ್ ಸೇರಿದಂತೆ ಗ್ರಾಪಂ ಸದಸ್ಯರು ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

