ಶಿವಮೊಗ್ಗ

ಗ್ರಾಪಂ ಕಚೇರಿ ಪ್ರವೇಶಿಸದಂತೆ ಅಧಿಕಾರಿಗಳಿಗೆ ನಿರ್ಬಂಧ

Published On :

ಕ.ಪ್ರ.ವಾರ್ತೆ  ಹೊಸನಗರ   ಆ.27
ಕಳೆದ 10 ತಿಂಗಳಿಂದ ಖಾತ್ರಿ ಯೋಜನೆಯ ಹಣ ಬಾಕಿ ಉಳಿಸಿಕೊಂಡಿರುವುದನ್ನು ಖಂಡಿಸಿ ಕರಿಮನೆ ಗ್ರಾಪಂಯಲ್ಲಿ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ಎರಡನೇ  ದಿನವೂ ಮುಂದುವರೆಯಿತು.
ಸೋಮವಾರ ಅಧಿಕಾರಿಗಳನ್ನು ಬೆಳಗ್ಗೆಯಿಂದ ಸಂಜೆವರೆಗೆ ಗ್ರಾಪಂ ಕಚೇರಿಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು ಇಂದು ಅಧಿಕಾರಿಗಳು ಕಚೇರಿ ಪ್ರವೇಶಿಸದಂತೆ ನಿರ್ಬಂಧಿಸಿ ಮೊದಲೇ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿ ತಬ್ಬಿಬ್ಬು: ಬಾಕಿ ಉಳಿಸಿಕೊಂಡ ಸುಮಾರು ರು. 35 ಲಕ್ಷಕ್ಕೂ ಹೆಚ್ಚು ಹಣ ಪಾವತಿಸುವವರೆಗೂ ಪ್ರತಿಭಟನೆಯ ಪಟ್ಟು ಹಿಡಿದ ಗ್ರಾಮಸ್ಥರ ವರ್ತನೆಯಿಂದ ಅಧಿಕಾರಿಗಳು ತಬ್ಬಿಬ್ಬು ಆಗುವಂತಾಗಿತ್ತು.
ಮಂಗಳವಾರ ಬೆಳಗ್ಗೆ ಒಂದಡೆ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸ್ಥಳೀಯ ಒಂದು ನಿಯೋಗ ಸಿ. ರಾಮಚಂದ್ರರಾವ್ ನೇತೃತ್ವದಲ್ಲಿ ತೀರ್ಥಹಳ್ಳಿಗೆ ಬಂದಿದ್ದ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನ ಸೆಳೆಯಿತು. ಅಹವಾಲು ಆಲಿಸಿದ ಸಚಿವರು ಕರಿಮನೆ ಗ್ರಾಪಂಯಲ್ಲಿ ಉಂಟಾಗಿರುವ ಸಮಸ್ಯೆ ಬಗ್ಗೆ ಪರಿಶೀಲಿಸಿ ಕೂಡಲೇ ಇತ್ಯರ್ಥ ಪಡಿಸುವಂತೆ ಜಿಪಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಆದೇಶಿಸಿದರು.
ಕೂನೆಗೂ ಸಿಎಸ್ ಭೇಟಿ: 2 ದಿನದಿಂದ ನಡೆಯುತ್ತಿರುವ ಪ್ರತಿಭಟನೆ ನಿಲ್ಲಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳು  ಮನವಿ ಮಾಡಿದರು ಕಿವಿಗೊಡದ ಗ್ರಾಮಸ್ಥರು ಸಿಎಸ್ ಸ್ಥಳಕ್ಕಾಗಮಿಸಿ, ಸಮಸ್ಯೆ ಬಗ್ಗೆ ಉತ್ತರ ನೀಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೆ ಇಲ್ಲ ಎಂದು ಖಡಕ್ ನಿಲುವು ತಾಳಿದ್ದರಿಂದ ಅನಿವಾರ್ಯವಾಗಿ ಸಿಎಸ್  ಶಶಿಕಾಂತ್ ಸೆಂಥಿಲ್ ಸ್ಳಳಕ್ಕಾಗಮಿಸಬೇಕಾಗಿ ಬಂತು.
ನಂತರ ಖಾತ್ರಿ ಅವ್ಯವಸ್ಥೆ ಮತ್ತು ಕೂಲಿಕಾರ್ಮಿಕರ ಅಳಲು ಆಲಿಸಿದ ಸಿಎಸ್. ನನಗೆ 15 ದಿನ ಸಮಯ ಕೊಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ. ನಿಮಗೆ ಬರಬೇಕಾದ ಹಣ ಪಾವತಿಸುವ ಸಂಬಂಧ ಶೀಘ್ರ ಕ್ರಮ ಕೈಗೊಳ್ಳುತ್ತೇನೆ. ಒಂದು ವೇಳೆ ಕೊಟ್ಟ ಮಾತು ತಪ್ಪಿದಲ್ಲಿ ಮತ್ತೆ ಪ್ರತಿಭಟನೆ ಮುಂದುವರಿಸಿ ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಸಂಜೆ ವೇಳೆಗೆ ಪ್ರತಿಭಟನೆ ನಿಲ್ಲಿಸಲಾಯಿತು.
ತಾಪಂ ಸದಸ್ಯೆ ಸಾಥ್: ತಾಪಂ ಸದಸ್ಯೆ ಸುಮಾ ಸುಬ್ರಹ್ಮಣ್ಯ ಬೆಳಿಗ್ಗೆಯಿಂದಲೂ ಪ್ರತಿಭಟನೆಗೆ ಸಾಥಥ್ನೀಡಿದ್ದು ಗಮನ ಸೆಳೆಯಿತು. ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಸತೀಶ ಗೌಡ ನರ್ತಿಗೆ ಮತ್ತು ಸದಸ್ಯರು, ಪ್ರಮುಖರಾದ ಕರಿಮನೆ ಗೋಪಾಲ್, ಹಲಸಿನಹಳ್ಳಿ ರಮೇಶ್, ದೇವೇಂದ್ರಪ್ಪ, ಸಾದಲ್ ಹರೀಶ್, ಪರ್ವತಪ್ಪ, ಮಳಲಿ ಸತೀಶ್, ಗೋಪಾಲ್, ರಾಮಣ್ಣ, ರಮೇಶ್, ನವೀನ್ ಸೇರಿದಂತೆ 100 ಕ್ಕು ಹೆಚ್ಚು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.