ಶಿವಮೊಗ್ಗ

ರಾಜ್ಯಪಾಲರು ನಿರ್ದೇಶನ ನೀಡಲು ಆಗ್ರಹ

Published On :

ಕ.ಪ್ರ.ವಾರ್ತೆ  ಶಿವಮೊಗ್ಗ   ಆ.28
ಗೋಹತ್ಯೆ ತಿದ್ದುಪಡಿ ಮಸೂದೆ ವಾಪಾಸ್ ಹಾಗೂ ಧಾರ್ಮಿಕ ಪರಿಷತ್ತು ಸಮಿತಿಗಳ ರದ್ದತಿ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಗುಡುಗಿದ್ದಾರೆ.
ಬುಧವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೇ, ರಾಜ್ಯಪಾಲರು  ಗೋಹತ್ಯೆ ತಿದ್ದುಪಡಿ ಮಸೂದೆಯನ್ನು ಒಪ್ಪಿ, ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಮನವಿ ಸಾರಾಂಶ: ನೂತನವಾಗಿ ಅಧಿಕಾರ ಗದ್ದುಗೆ ಹಿಡಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಲು ಸಿದ್ಧಪಡಿಸಿದ್ದ ಗೋಹತ್ಯೆ ನಿಷೇಧ ಕಾಯಿದೆ 2010 ಮತ್ತು 2012 ಇದರಲ್ಲಿ ಕೈಗೊಂಡಿದ್ದ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯುವ ಮೂಲಕ, ಕಾಯಿದೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದಾರೆ.
ಕಾಯ್ದೆಯನ್ನು ಈ ಹಿಂದೆ ಉಭಯ ಸದನಗಳಲ್ಲಿ ಅನುಮೋದಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿತ್ತು. ದುರ್ದೈವ ವಶಾತ್ ರಾಜ್ಯಪಾಲರು ಕಳೆದ ಅನೇಕ ತಿಂಗಳುಗಳಿಂದ ಒಪ್ಪಿಗೆ ನೀಡದೆ ತಡೆ ಹಿಡಿದಿದ್ದರು.
ಕವಡೆ ಕಿಮ್ಮತ್ತಿಲ್ಲ: ಹೊಸ ಸರ್ಕಾರ ಗೋ, ಭೂ ಮತ್ತು ಪ್ರಕೃತಿ ಪ್ರೇಮಿಗಳ ಭಾವನೆಗಳಿಗೆ ಕವಡೆ ಕಿಮ್ಮತ್ತು ನೀಡದೇ ಕೇವಲ ತಮ್ಮ ಮತಬ್ಯಾಂಕ್ ರಾಜಕಾರಣವನ್ನು ಪೋಷಿಸುವ ಹುನ್ನಾರದಲ್ಲಿ ಈ ಮಸೂದೆಯನ್ನು ತಿರಸ್ಕರಿಸಿದೆ. ಈ ನಿರ್ಣಯದಿಂದ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಬಲವಾದ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಸು, ಎತ್ತುಗಳನ್ನು ಕಸಾಯಿಖಾನೆಗೆ ಕಳುಹಿಸುವ ಈ ನಿರ್ಣಯದಿಂದ ರೈತರು ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಅವಲಂಬಿಸುವಂತೆ ಮಾಡುತ್ತದೆ. ಈಗಾಗಲೇ ಸಾರ ಕಳೆದುಕೊಂಡು ಇಳುವರಿಗಳು ಕುಂಠಿತವಾಗಿರುವ ಸಂದರ್ಭದಲ್ಲಿ ಸರ್ಕಾರದ ತೀರ್ಮಾನವು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಮಂಡಳಿ ಸದಸ್ಯರ ರದ್ದು: ಸಿದ್ಧರಾಮಯ್ಯನವರ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದಲ್ಲಿ ರಾಜ್ಯದ ವಿವಿಧ ಎ ಗ್ರೇಡ್ ದೇವಸ್ಥಾನ ಸಮಿತಿಗಳಿಗೆ ನೇಮಕವಾಗಿದ್ದ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಸದಸ್ಯರನ್ನು ರದ್ದುಗೊಳಿಸಿ, ದೇವಸ್ಥಾನಗಳನ್ನು ಕಾಂಗ್ರೆಸ್ಸೀಕರಣ ಮಾಡಲು ಮುಂದಾಗಿರುವುದು ಖಂಡನೀಯ. ಇದಲ್ಲದೇ ನೂರಾರು ಬಿ ಹಾಗೂ ಸಿ ಗ್ರೇಡ್ ದೇವಸ್ಥಾನಗಳ ಸಮಿತಿ ರದ್ದುಗೊಳಿಸಲು ಸರ್ಕಾರ ಹೆಜ್ಜೆ ಇಟ್ಟಿದೆ.
ಸರ್ಕಾರದ ಈ ನಿರ್ಧಾರಕ್ಕೆ ನ್ಯಾಯಾಲಯದಲ್ಲಿ 6 ವಾರಗಳ ತಡೆಯಾಜ್ಞೆ ದೊರೆತಿದೆ. ಆದರೂ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಕಾನೂನನ್ನು ಧಿಕ್ಕರಿಸಿದಂತೆ ಎಂದು ಬಿಜೆಪಿ ಹೇಳಿದೆ.
ಮೊದಲ ಬಾರಿಗೆ ತೀರ್ಮಾನ: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯ ರಾಜಕೀಕರಣಗೊಳಿಸುವ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ಇದೊಂದು ಕೆಟ್ಟ ಪರಂಪರೆಗೆ ನಾಂದಿ ಹಾಡುವುದು. ಆದ್ದರಿಂದ ಕೂಡಲೇ, ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ ದೇವಸ್ಥಾನಗಳ ಕಾರ್ಯವನ್ನು ಕಾಂಗ್ರೆಸ್ಸೀಕರಣಗೊಳಿಸಬಾರದು ಎಂದು ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಎಚ್ಚರಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.
ಎಸ್. ಜ್ಞಾನೇಶ್ವರ್, ಡಿ.ಎಸ್. ಅರುಣ, ಚನ್ನಬಸಪ್ಪ, ಸುನಿತಾ ಅಣ್ಣಪ್ಪ, ಮಧುಸೂಧನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.