ಶಿವಮೊಗ್ಗ

ಬ್ಯಾಂಕ್ ದರೋಡೆ ಯತ್ನ

Published On :

ಕ.ಪ್ರ. ವಾರ್ತೆ, ಶಿವಮೊಗ್ಗ, ಡಿ.2
ಎಟಿಎಂಗೆ ಕಾವಲುಗಾರರಿಲ್ಲ ಎಂಬ ಚರ್ಚೆ ಹಳೆಯದಾಯಿತೆಂಬುದಕ್ಕೆ ಸಾಕ್ಷಿ ಎಂಬಂತೆ ಕಾವಲುಗಾರನಿಲ್ಲದ ಬ್ಯಾಂಕಿನ ದರೋಡೆಯ ಯತ್ನವೂ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬೀಗ ಒಡೆದು ಒಳಪ್ರವೇಶಿಸಿರುವ ದುಷ್ಕರ್ಮಿಗಳು ಸಿಸಿ ಕ್ಯಾಮೆರಾ ವೈರುಗಳನ್ನು ತುಂಡರಿಸಿ ದರೋಡೆಗೆ ಯತ್ನ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ಬ್ಯಾಂಕಿನ ಸಿಬ್ಬಂದಿ ಬಂದಾಗ ಬೀಗ ಒಡೆದಿರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಶಿವಕುಮಾರ್ ಹಾಗೂ ಸಿಬ್ಬಂದಿ ಸುತ್ತಮುತ್ತಲಿನ ಸ್ಥಳ ಪರಿಶೀಲನೆ ನಡೆಸಿದರು.
ಬ್ಯಾಂಕ್ ಮೊದಲ ಮಹಡಿಯಲ್ಲಿದ್ದು, ದುಷ್ಕರ್ಮಿಗಳು ಹಿಂಬದಿಯಲ್ಲಿ ಬಾಗಿದ್ದ ತೆಂಗಿನ ಮರವೊಂದನ್ನು ಹತ್ತಿ ಮುಂಭಾಗಕ್ಕೆ ಬಂದಿದ್ದಾರೆ. ಸರಿಯಾಗಿ ರಾತ್ರಿ 9.35ಕ್ಕೆ ಬೀಗ ತುಂಡರಿಸಿ ಒಳಪ್ರವೇಶಿಸಿದ್ದಾರೆ. ಮುಸುಕುಧಾರಿ ವ್ಯಕ್ತಿಯೊಬ್ಬ ಒಳಬಂದು ಅಲ್ಲಿದ್ದ ಐದು ಸಿಸಿ ಕ್ಯಾಮೆರಾಗಳ ವೈರ್ ತುಂಡರಿಸಿದ್ದಾನೆ. ಇಲ್ಲಿಯವರೆಗಿನ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ದಾಖಲಾಗಿವೆ. ನಂತರ ಇನ್ನಷ್ಟು ವ್ಯಕ್ತಿಗಳು ಒಳಬಂದಿರಬಹುದೆಂಬುದು ಪೊಲೀಸರ ಸಂಶಯ.
ದೋಚಿಲ್ಲ: ಒಳಗೆ ಅವರಿಗೆ ಏನನ್ನೂ ದೋಚಲು ಸಾಧ್ಯವಾಗಿಲ್ಲ. ಎಲ್ಲಾ ವಸ್ತುಗಳು ಹಾಗೆಯೇ ಇವೆ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ. ಸ್ಟ್ರಾಂಗ್ ರೂಂ ಬಾಗಿಲು ಒಡೆಯಲು ವಿಫಲ ಯತ್ನ ನಡೆಸಿದ ಈತ ಸಾಧ್ಯವಾಗದೇ ಪರಾರಿಯಾಗಿದ್ದಾನೆ. ಸಿಸಿ ಕ್ಯಾಮೆರಾದ ವೈರುಗಳನ್ನು ಕತ್ತರಿಸಿರುವುದರಿಂದ ಈ ಗುಂಪಿನ ನಂತರದ ಚಟುವಟಿಕೆಗಳು ದಾಖಲಾಗಿಲ್ಲ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಆಗಮಿಸಿದ ಪೊಲೀಸರು ಬ್ಯಾಂಕಿನ ಸುತ್ತಮುತ್ತಲಿನ ಪ್ರದೇಶ ಪರಿಶೀಲಿಸಿದರು.
ಕಾವಲುಗಾರನಿಲ್ಲ: ಜನನಿಬಿಡ ರಸ್ತೆಯಲ್ಲಿ ಇರುವ ಬ್ಯಾಂಕಿನ ದರೋಡೆ ಪ್ರಯತ್ನ ನಡೆದಿರುವುದು ಅಚ್ಚರಿ ಮೂಡಿಸಿದೆ. ಬ್ಯಾಂಕ್ ದರೋಡೆ ಪ್ರಯತ್ನ ನಡೆಯುತ್ತಿದ್ದ ವೇಳೆ ಎದುರಿನಲ್ಲಿರುವ ರಸ್ತೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ತಡರಾತ್ರಿಯವರೆಗೂ ನಡೆಯುತ್ತಿತ್ತು. ಜನರು ಕಾರ್ಯಕ್ರಮದಲ್ಲಿ ಮಗ್ನರಾಗಿದ್ದ ವೇಳೆ ದುಷ್ಕರ್ಮಿಗಳು ಬೀಗ ಮುರಿದು ಒಳಪ್ರವೇಶಿಸಿದ್ದಾರೆ. ಬ್ಯಾಂಕಿಗೆ ಕಾವಲುಗಾರರಿಲ್ಲದಿರುವುದು ಗಮನಕ್ಕೆ ಬಂದಿದೆ. ಮಂಗಳವಾರ ಬ್ಯಾಂಕಿನ ಅಧಿಕಾರಿಗಳೂ ಇದನ್ನು ಒಪ್ಪಿಕೊಂಡರು. ಎಲ್ಲಾ ಕಡೆಯಿಂದಲೂ ಲಾಕ್ ಆಗಿರುತ್ತೆ. ಮತ್ತೇಕೆ ಕಾವಲುಗಾರರು ಎಂದು ಮರು ಪ್ರಶ್ನಿಸಿದರು. ಪ್ರಕರಣವು ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.