ಗುರಿ ಮುಟ್ಟುವ ತವಕದಲ್ಲಿ ಸಾಹಸಿ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.2
48 ದಿನಗಳ ಹಿಂದೆ ಏಕಾಂಗಿಯಾಗಿ ಬುಲೆಟ್ ಏರಿ ಶಿವಮೊಗ್ಗದಿಂದ ಹೊರಟಿದ್ದ ದೀಪಕ್ ತಮ್ಮೋಜಿ ಅವರ ಗುರಿ ಈಶಾನ್ಯ ರಾಜ್ಯಗಳತ್ತ ನೆಟ್ಟಿತ್ತು.
ಈಗ ಈ ಏಳು ರಾಜ್ಯಗಳ ಜತೆಗೆ ನೇಪಾಳ ಹಾಗೂ ಭೂತಾನ್ ದೇಶಗಳನ್ನೂ ತಲುಪಿ ಅಪರೂಪದ ಅನುಭವಗಳನ್ನು ತಮ್ಮದಾಗಿಸಿಕೊಂಡಿರುವ ಅವರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ತಮ್ಮ ಪ್ರಯಾಣ ಅಂತ್ಯಗೊಳಿಸಲಿದ್ದಾರೆ.
ವಿಜಯ ದಶಮಿಯ ದಿನ ಅಕ್ಟೋಬರ್ 14ರಂದು ತಮ್ಮ ಪಯಣ ಆರಂಭಿಸಿದ ಅವರು 18 ರಾಜ್ಯಗಳು, ಎರಡು ಹೊರದೇಶಗಳನ್ನು ಮುಟ್ಟಿ ಬಂದಿರುವ ದೀಪಕ್ ಅವರಿಗೆ ಇಡೀ ಪ್ರಯಣದಲ್ಲಿ ಸಾಥ್ ನೀಡಿದ್ದು ಅವರ 'ಬಲರಾಮ'. ಅಂದರೆ ಅವರ ರಾಯಲ್ ಎನ್ ಫೀಲ್ಡ್ ಬೈಕ್ (ಮಾಡೆಲ್ ಮೆಕಿಸ್ಮೋ 500). ಅಂದಹಾಗೆ ಇದು ಇವರ ಕನಸಿನ ಪಯಣ- 2 (ಡ್ರೀಮ್ರೈಡ್-2).
ಕಳೆದ ವರ್ಷ ಇವರು ಡ್ರೀಮ್ರೈಡ್ -1 ಪಯಣವನ್ನು ಗೆಳೆಯ, ಶಿವಮೊಗ್ಗದವರೇ ಆದ ತಂಗಚ್ಚನ್ ಆಂಡ್ರ್ಯು ಅವರ ಜತೆಗೂಡಿ ಸಾಗಿದ್ದರು. ಅಂದು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಗಡಿಗುಂಟ ಸಾಗಿದ್ದರು. 47 ದಿನಗಳ ಈ ಪಯಣದಲ್ಲಿ 19 ರಾಜ್ಯಗಳನ್ನು ಸಾಗಿ ಬಂದಿದ್ದರು.
ಅಂದು ಬಾಕಿ ಉಳಿದಿದ್ದ ಭಾರತದ ಇತರೆ ರಾಜ್ಯಗಳನ್ನು ಡ್ರೀಮ್ರೈಡ್-2 ಸಂದರ್ಭದಲ್ಲಿ ಭೇಟಿ ಮಾಡಿ ತಮ್ಮ ಎರಡನೇ ಕನಸನ್ನು ನನಸು ಮಾಡಿಕೊಂಡರು.
ಅಂದಹಾಗೆ ಡ್ರೀಮ್ರೈಡ್- 3 ಯೋಜನೆಯೂ ಇವರ ಮನಸಿನಲ್ಲಿದೆ. ಇದು ಬಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಮೂಲಕ ಇಂಗ್ಲೆಂಡ್ ತಲುಪುವ ಕನಸಿದು.
ಏಕೆ ಈ ಸವಾರಿ: ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ವಾಸ್ತು ವಿನ್ಯಾಸಕಾರರಾಗಿರುವ ದೀಪಕ್ ತಮ್ಮೋಜಿ ಅವರಿಗೆ ಬೈಕ್ ರೈಡಿಂಗ್ ಎಂದರೆ ಒಂದು ಹುಚ್ಚು. ಏಕೆಂದರೆ ನಾನು ಬಹಿರ್ಮುಖಿಯಾಗಲು ಬೈಕ್ ರೈಡಿಂಗ್ ನನಗೆ ನೆರವಾಗುತ್ತದೆ. ಪ್ರತಿದಿನದ ಏಕತಾನತೆಯನ್ನು ಮರೆಯಲು ಸಹಕಾರಿ. ಸುದೀರ್ಘ ಪಯಣದ ನಂತರ ನಾನು ವಾಪಾಸಾದಾಗ ನನಗೆ ಇನ್ನಷ್ಟು ಆರೋಗ್ಯ ಶಕ್ತಿ ಲಭಿಸಿರುವ ಭಾವನೆ ಮೂಡುತ್ತದೆ ಎನ್ನುತ್ತಾರೆ ದೀಪಕ್.
ಈ ಬಾರಿ ಅವರದು ಸುಮಾರು 11 ಸಾವಿರ ಕಿ.ಮೀ.ಗಳ ಪಯಣ. ದಿನಕ್ಕೆ ಉತ್ತಮ ರಸ್ತೆಯಲ್ಲಿ 300ರಿಂದ 400 ಕಿ.ಮೀ., ಗುಡ್ಡಗಾಡು ಪ್ರದೇಶದಲ್ಲಿ 100ರಿಂದ 150 ಕಿ.ಮೀ. ದೂರ ಸಾಗುತ್ತಿದ್ದ ಅವರು ಯೋಜನೆಯ ಪ್ರಕಾರ ನವೆಂಬರ್ 14ರ ಆಸುಪಾಸಿನಲ್ಲಿಯೇ ವಾಪಸಾಗಬೇಕಿತ್ತು. ಆದರೆ ಪಯಣವು ಎರಡು ವಾರ ಹೆಚ್ಚು ಸಮಯ ತೆಗೆದುಕೊಂಡಿದೆ. ನಿರೀಕ್ಷೆಗೂ ಮೀರಿದ ಪ್ರಯಾಸದ ಹಾದಿ, ಭೂತಾನ್ ಪ್ರವೇಶಿಸುವ ಸಂದರ್ಭದಲ್ಲಿ ಆದ ವಿಳಂಬ ಇವರ ಪಯಣವನ್ನು ಇನ್ನಷ್ಟು ಸುದೀರ್ಘಗೊಳಿಸಿದವು.
ಹೋಗಿದ್ದು ಎಲ್ಲೆಲ್ಲಿ...?
ಶಿವಮೊಗ್ಗ- ಚಿತ್ರದುರ್ಗ- ಬಳ್ಳಾರಿ- ಗುಂತಕಲ್- ಕರ್ನೂಲ್ ಹೈದರಾಬಾದ್, ವಾರಂಗಲ್- ರಾಯ್ ಪುರ್- ಬೋಧಗಯ- ಸಿಲಿಗುರಿ- ಶಿಲಾಂಗ್- ಅಗರ್ತಲ- ಐಜ್ವಾಲ್- ಇಂಫಾಲ- ಕೋಹಿಮಾ- ತಿಂಫು (ಭೂತಾನ್)- ಡಾರ್ಜಿಲಿಂಗ್- ಕಠ್ಮಂಡು (ನೇಪಾಳ)- ಪೋಖರ (ನೇಪಾಳ)- ಬುತ್ವಾಲ್- ಮಹೇಂದ್ರ ನಗರ್(ನೇಪಾಳ)- ಗ್ವಾಲಿಯರ್- ಇಂದೋರ್- ಔರಂಗಬಾದ್- ಸೋಲಾಪುರ- ಚಿತ್ರದುರ್ಗ- ಶಿವಮೊಗ್ಗ.
ಯಾವುದೂ ಕಷ್ಟ ಎನಿಸಲಿಲ್ಲ...
ನಾನು ಹೋಗಿದ್ದೇ ಕಷ್ಟಗಳನ್ನು ಎದುರಿಸಲೆಂದು. ಹಾಗಾಗಿ ಯಾವುದೂ ನನಗೆ ಕಷ್ಟ ಅನಿಸಲಿಲ್ಲ...
ಶಿವಮೊಗ್ಗಕ್ಕೆ ಬರುವ ಒಂದು ದಿನ ಮೊದಲು ದಾವಣಗೆರೆಯತ್ತ ಸಾಗುತ್ತಿದ್ದ ದೀಪಕ್ ತಮ್ಮೋಜಿ ಅವರು -ಕನ್ನಡಪ್ರಭ- ದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ.
ಸಪ್ತ ಸಹೋದರಿಯರ ರಾಜ್ಯವೆಂದು ಹೆಸರಾದ ಈಶಾನ್ಯ ರಾಜ್ಯಗಳ ಒಳಹೊಕ್ಕರೆ ಅದೊಂದು ಅದ್ಭುತ ಲೋಕ. ಸಂಪೂರ್ಣವಾಗಿ ಘಟ್ಟ ಪ್ರದೇಶ. ಇದು ಇಡೀ ಭಾಗದ ಅತ್ಯಂತ ಸಾಹಸ ಪಯಣ ಎಂದು ಬಣ್ಣಿಸಿದರು.
ನೇಪಾಳ ಬಹುತೇಕ ಭಾರತದಂತೆಯೇ ಇದೆ. ಸಾಂಸ್ಕೃತಿಕ ಹೋಲಿಕೆ ಇದೆ. ನಾನು ಈ ದೇಶದ ಗುಡ್ಡಗಾಡು ಪ್ರದೇಶದತ್ತ ಹೋಗಲಿಲ್ಲ. ಆದರೆ ಭೂತಾನ್ ಒಂದು ಸಂಪೂರ್ಣ ವಿಭಿನ್ನ ದೇಶ. ನಾವು ದೇಶದ ಅಭಿವೃದ್ಧಿಯನ್ನು ಜಿಪಿಡಿ ಅಳತೆಗೋಲಿನಲ್ಲಿ ನೋಡಿದರೆ ಅವರು (ಜಿಎನ್ಎಸ್ಗ್ರೆಸ್ ನ್ಯಾಷನಲ್ ಹ್ಯಾಪಿನೆಸ್) ಅಳತೆಗೋಲಿನಲ್ಲಿ ನೋಡುತ್ತಾರೆ. ಅತ್ಯಂತ ಮಾನವ ಪ್ರೀತಿಯ ಜನರು ಎಂದರು.
ಇದರ ಜತೆಗೆ ಅವರ ಅನುಭವದ ಮೂಟೆಯಲ್ಲಿ ಅರುಣಾಚಲ ಪ್ರದೇಶದ ದಟ್ಟ ಕಾಡಿನ ನಡುವೆ ಬೈಕ್ಕೈಕೊಟ್ಟಾಗ ನೆರವಾದ ಸ್ಥಳೀಯ ವೈದ್ಯರೊಬ್ಬರು ನೆರವಾಗಿದ್ದು, ಭೂತಾನ್ ದೇಶ ಒಳಪ್ರವೇಶಿಸುವ ಮುನ್ನ ಅಡೆತಡೆಗಳನ್ನು ಎದುರಿಸಿದ್ದು, ಈಶಾನ್ಯ ರಾಜ್ಯದ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿದ್ದು, ಮಧ್ಯಪ್ರದೇಶ- ಉತ್ತರ ಪ್ರದೇಶದ ಜನರ ಆತಿಥ್ಯ ಸ್ವೀಕರಿಸಿದ್ದು, ಅತ್ಯಂತ ಚಿಕ್ಕ ರಾಜ್ಯವಾದ ಸಿಕ್ಕಿಂನಲ್ಲಿ ಕಾಲ ಕಳೆದಿದ್ದು, ರಸ್ತೆ ಬದಿಯಲ್ಲಿಯೇ ಮಲಗಿದ್ದು ಸೇರಿದಂತೆ ಸಾಕಷ್ಟು ಸಾಮಗ್ರಿಗಳು ಇವೆ.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

