ನಗರ ಸಾರಿಗೆ ಆರಂಭಿಸದಿದ್ದರೆ ಹೋರಾಟ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.4
ಇನ್ನೊಂದು ವಾರದಲ್ಲಿ ಸರ್ಕಾರಿ ನಗರ ಸಾರಿಗೆ ಸೇವೆ ಆರಂಭಿಸದಿದ್ದರೆ ಎಲ್ಲಾ ಜನಪ್ರತಿನಿಧಿಗಳು ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಎಚ್ಚರಿಸಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನ್ ನರ್ಮ್ ಯೋಜನೆಯಡಿ ಶಿವಮೊಗ್ಗ, ಭದ್ರಾವತಿಗೆ ಮಂಜೂರಾಗಿರುವ ಸರ್ಕಾರಿ ನಗರ ಸಾರಿಗೆಯನ್ನು ಖಾಸಗಿ ಬಸ್ ಮಾಲೀಕರ ಲಾಬಿಗೆ ಮಣಿದು ಜಾರಿಯಾಗದಂತೆ ನೋಡಿಕೊಳ್ಳುತ್ತಿದೆ. ಈ ವಿಚಾರದಲ್ಲಿ ಉಂಟಾಗಿರುವ ಷಡ್ಯಂತ್ರಕ್ಕೆ ಪ್ರಭಾವಕ್ಕೊಳಗಾಗಿರುವ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ ಎಂದು ಟೀಕಿಸಿದ್ದಾರೆ.
ಈ ಆರೋಪಕ್ಕೆ ಇಂಬು ನೀಡುವಂತೆ ಸಂಸದರಾಗಲಿ, ಶಾಸಕರಾಗಲಿ ಸರ್ಕಾರಿ ಸಿಟಿ ಬಸ್ ಸಂಚಾರ ಆರಂಭಕ್ಕೆ ಸಂಬಂಧಿಸಿದಂತೆ ಇದೂವರೆಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಬಸ್ ಸಂಚಾರ ಆರಂಭಕ್ಕೆ ತಮ್ಮ ಸಹಮತವಿದೆ ಎಂದಿದ್ದರು. ಆದರೆ, ಅವರೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದು ವಾರದಲ್ಲಿ ಸಂಚಾರ ಆರಂಭವಾಗದಿದ್ದರೆ ಸಚಿವರು, ಸಂಸದರು ಹಾಗೂ ಶಾಸಕರ ಕಚೇರಿ ಎದುರು ಪ್ರತಿಭಟನೆ ಆರಂಭಿಸಲಾಗುವುದು ಎಂದು ಮೇಘರಾಜ್ ಎಚ್ಚರಿಸಿದ್ದಾರೆ.
ಜಾಗ ಇದೆ: ಮಿಳಘಟ್ಟದಲ್ಲಿರುವ 1 ಎಕರೆ ಜಾಗದಲ್ಲಿ ತಾತ್ಕಾಲಿಕ ಡಿಪೋ ನಿರ್ಮಾಣ ಮಾಡಬಹುದು. ಇದಕ್ಕೆ ಡಿಪೋ ಮ್ಯಾನೇಜರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಯೋಜನೆಗೆ ಹಣ ಹಾಗೂ ಜಾಗದ ಕೊರತೆ ಇಲ್ಲ. ಇರುವುದು ಇಚ್ಛಾಶಕ್ತಿಯ ಕೊರತೆ ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಗರದಲ್ಲಿ ಸಂಚರಿಸುತ್ತಿರುವ ನಗರ ಸಾರಿಗೆ ಬಸ್ಗಳ ಮಾಲೀಕರು ಪ್ರಭಾವಿ ರಾಜಕೀಯ ಮುಖಂಡರಾಗಿರುವುದರಿಂದ ಲಾಬಿ ಹೆಚ್ಚುತ್ತಿದೆ. ಇದನ್ನು ತಡೆಯುವಲ್ಲಿ ಸರ್ಕಾರ ಕೂಡಲೇ ಸರ್ಕಾರಿ ನಗರ ಸಾರಿಗೆ ಬಸ್ಗಳನ್ನು ಸಾರ್ವಜನಿಕರ ಸೇವೆಗೆ ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯದರ್ಶಿ ಅಶೋಕ್ ಯಾದವ್, ಕೇಂದ್ರ ಸರ್ಕಾರವು ಜನ್ ನರ್ಮ್ ಯೋಜನೆಯಡಿ ಸರ್ಕಾರಿ ಸಿಟಿ ಬಸ್ ಆರಂಭಕ್ಕೆಂದು ಶಿವಮೊಗ್ಗಕ್ಕೆ 18.85 ಕೋಟಿ ಹಾಗೂ ಭದ್ರಾವತಿಗೆ 10.15 ಕೋಟಿ ಬಿಡುಗಡೆ ಮಾಡಿದೆ. ಯೋಜನೆಯಂತೆ ಶಿವಮೊಗ್ಗದಲ್ಲಿ 65 ಹಾಗೂ ಭದ್ರಾವತಿಯಲ್ಲಿ 35 ಸಿಟಿ ಬಸ್ಗಳು ಸಂಚರಿಸುತ್ತವೆ. ಆದರೆ, ಜಿಲ್ಲಾಡಳಿತ ಮುಂದೆ ಹೆಜ್ಜೆ ಇಟ್ಟಿಲ್ಲ ಎಂದು ಟೀಕಿಸಿದ್ದಾರೆ.
ಜಿಲ್ಲಾಡಳಿತವು ಕೂಡಲೇ ಸಿಟಿ ಬಸ್ ನಿಲ್ದಾಣ, ವರ್ಕ್ಶಾಪ್, ಡಿಪೋ ಸ್ಥಾಪನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಗಳು ಹಾಗೂ ನಾಗರಿಕ ಸಂಘಟನೆಗಳ ಸಭೆ ಕರೆಯಬೇಕು. ಕೂಡಲೇ ಜನರಿಗೆ ಅನುಕೂಲವಾಗುವಂತೆ ಸಿಟಿ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪಿಬಿಐ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ. ಜನಮೇಜಿರಾವ್, ಮಾಹಿತಿ ಹಾಗೂ ಮಾನವ ಹಕ್ಕು ರಾಜ್ಯ ಜಂಟಿ ಕಾರ್ಯದರ್ಶಿ ಕಡ್ಲೆಕಾಯಿ ಮಂಜುನಾಥ್, ರಾಜ್ಯ ಕೊಳಗೇರಿ ನಿವಾಸಿಗಳ ಸಂಘದ ಅಧ್ಯಕ್ಷ ಲಿಂಬೆಹಣ್ಣು ಮಂಜುನಾಥ್, ಪ್ರಾಂಜಲ ಶಿವಪ್ಪನಾಯಕ ಸೇನೆಯ ಭದ್ರಾವತಿ ವಾಸು, ಪರಿಸರ ರಮೇಶ್, ನ್ಯಾಯವಾದಿ ಮಂಜುಳಾದೇವಿ, ಸುವರ್ಣ ನಾಗರಾಜ್, ವಿಜಯ ಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

