ಶಿವಮೊಗ್ಗ

ಮಾಸ್ತಿಕಟ್ಟೆ ಜೀವಕ್ಕೆ 'ವಾರಾಹಿ' ಕುತ್ತು

Published On :

ರವಿ ಬಿದನೂರು
ಹೊಸನಗರ: ಯಾವುದೇ ಯೋಜನೆ ಸುತ್ತಮುತ್ತಲಿನ ಗ್ರಾಮಗಳಿಗೆ ಹಲವು ರೀತಿಯ ನಷ್ಟ ತಂದರೂ ಕೂಡ ಕೊನೆ ಪಕ್ಷ ಒಂದಷ್ಟು ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದು ಇಲ್ಲಿಯವರೆಗಿನ ಸತ್ಯವಾಗಿತ್ತು. ಆದರೆ ವಾರಾಹಿ ಯೋಜನೆ ವಿಷಯದಲ್ಲಿ ಹೀಗಾಗಿಲ್ಲ.
ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರಿದ ಹಿನ್ನೆಲೆಯಲ್ಲಿ 1979-80ರ ಹೊತ್ತಿಗೆ ಚಾಲನೆಗೆ ಬಂದಿದ್ದ ವಾರಾಹಿ ಯೋಜನೆ ಮಾತ್ರ ಇದಕ್ಕೆ ಅಪವಾದ ಎಂಬಂತಾಗಿದೆ. ಯೋಜನಾ ಪ್ರದೇಶದ ಗ್ರಾಮಗಳ ಅಭಿವೃದ್ಧಿಗೆ ಕಾರಣವಾಗುವುದಿರಲಿ. ಇದ್ದ ಹಾಗೂ ಇರಬಹುದಾದ ವ್ಯವಸ್ಥೆಯನ್ನು ಬರಿದು ಮಾಡಿ ಇಡೀ ಊರಿನ ಜೀವಂತಿಕೆಯನ್ನು ಹಾಳು ಮಾಡುತ್ತಿದೆ ಎಂಬ ಆರೋಪ ಇಂದಿನದಲ್ಲ.
ಇದಕ್ಕೆ ತಾಜಾ ಉದಾಹರಣೆ ಸುಮಾರು 3 ದಶಕದ ಹಿಂದೆ ಮಾಸ್ತಿಕಟ್ಟೆ ಭಾಗದಲ್ಲಿ ನಿರ್ಮಾಣ ಕಂಡಿದ್ದ ವಿಶಾಲವಾದ ಕರ್ನಾಟಕ ವಿದ್ಯುತ್ ನಿಗಮದ ವಸಾಹತು ಪ್ರದೇಶವನ್ನು ಹಂತ ಹಂತವಾಗಿ ಸ್ಥಳಾಂತರಿಸುತ್ತಿರುವುದು. ಇಲ್ಲಿನ ಚಿತ್ರಣ ನೋಡಿದರೆ ಜೀವಂತಿಕೆ ಹಾಳು ಮಾಡಿದ ಆರೋಪಕ್ಕೆ ಒಂದಷ್ಟು ಪುಷ್ಠಿ ಸಿಗುವುದಂತು ಸತ್ಯ.
ಹೊಸಂಗಡಿಗೆ ಸ್ಥಳಾಂತರ: 1979-80ರ ಸುಮಾರಿಗೆ ಚಾಲನೆಗೆ ಬಂದ ವಾರಾಹಿ ಯೋಜನೆ 1989-90ರ ಹೊತ್ತಿಗೆ ಮುಕ್ತಾಯ ಕಂಡಿದ್ದು, ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿತು. ಮಾಣಿ ಜಲ ವಿದ್ಯುತ್ ಘಟಕ ಮತ್ತು ದೇಶದಲ್ಲೇ ಪ್ರಥಮ ಎನಿಸಿದ ವಾರಾಹಿ ಭೂಗರ್ಭ ವಿದ್ಯುದಾಗಾರದಿಂದ ಒಟ್ಟು 469 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಬಹುದು. ವಾರಾಹಿ ಯೋಜನೆಯಲ್ಲಿ ನಿರ್ಮಾಣ ಕಂಡ ಎಲ್ಲಾ ಯೋಜನೆಗಳಿಗೆ ಮಾಸ್ತಿಕಟ್ಟೆಯೇ ಕೇಂದ್ರ ಸ್ಥಾನ. ಆದರೂ ಇಲ್ಲಿಂದ ಒಂದೊಂದೇ ವಿಭಾಗವನ್ನು ಹೊಸಂಗಡಿಗೆ ಸ್ಥಳಾಂತರಿಸಿ ಅಲ್ಲಿಂದಲೇ ನಿರ್ವಹಣೆ ಮಾಡಲು ಕೆಪಿಸಿ ಮುಂದಾಗಿದೆ.
ಯೋಜನೆ ಮುಗಿದ ಮೇಲೆ ಸ್ಥಳಾಂತರಿಸುವ ಅಥವಾ ಯಥಾಸ್ಥಿತಿ ಕಾಪಾಡುವ ತೀರ್ಮಾನ ಕೆಪಿಸಿಗೆ ಸೇರಿದ್ದು. ಆದರೆ ಸ್ಥಳಾಂತರಕ್ಕೂ ಪೂರಕ ಕಾರಣ ಬೇಕಲ್ಲವೇ? ಅಂತಹ ಯಾವುದೇ ಸನ್ನಿವೇಶಗಳು ಮಾಸ್ತಿಕಟ್ಟೆಯಲ್ಲಿ ಕಂಡುಬರುತ್ತಿಲ್ಲ.
3 ದಶಕಗಳ ಹಿಂದೆ ಮೈದಳೆದ ಮಾಸ್ತಿಕಟ್ಟೆ ವಸಾಹತು ಸುಮಾರು 85 ಎಕರೆ ಪ್ರದೇಶದಲ್ಲಿದೆ. ಇಲ್ಲಿಂದ ಸ್ಥಳಾಂತರ ಮಾಡುವುದರಿಂದ ಇದ್ದ ಕೋಟ್ಯಂತರ ರುಪಾಯಿ ಆಸ್ತಿ ಹಾಳಾಗುತ್ತದೆ. ಮಾತ್ರವಲ್ಲ ವರ್ಷಕ್ಕೆ ನಿಗಮಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬ ಸತ್ಯವನ್ನು ಇಲ್ಲಿಯ ಚಿತ್ರಣವೇ ಹೊರಹಾಕುತ್ತದೆ. ಹಾಗಿದ್ದರೆ ಸ್ಥಳಾಂತರ ಮಾಡುತ್ತಿರುವುದೇಕೆ ಎಂಬುದೇ ಇಂದಿಗೂ ಯಕ್ಷಪ್ರಶ್ನೆ.
ಸ್ಥಳಾಂತರ ಬೇಡ: ಕೆಪಿಸಿ ದಿಢೀರನೇ ಕೈಗೊಂಡ ಸ್ಥಳಾಂತರ ನಿರ್ಧಾರದಿಂದ ಬೆಚ್ಚಿ ಬಿದ್ದ ಜನತೆ, ಸ್ಥಳಾಂತರ ಮಾಡಬೇಡಿ. ಯೋಜನೆಗಾಗಿ ಸಾವಿರಾರು ರೈತರು ತ್ಯಾಗ ಮಾಡಿದ್ದಾರೆ. ಭೂಮಿ ಕಳೆದುಕೊಂಡಿದ್ದೇವೆ. ಎಲ್ಲವನ್ನು ಬರಿದು ಮಾಡಿ ಈಗ ಕೆಪಿಸಿ ಕೂಡ ಕಾಲ್ಕಿತ್ತರೆ ಸುತ್ತಮುತ್ತಲಿನ ಗ್ರಾಮಗಳು ಸ್ಮಶಾನವಾಗುತ್ತವೆ. ಹಾಗಾಗಿ ಸ್ಥಳಾಂತರ ಬೇಡ ಎಂಬ ಸ್ಥಳೀಯರ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿದೆ.
ಸ್ಥಳಾಂತರ ಕೈಬಿಡುವುದಕ್ಕಾಗಿ ಸ್ಥಳೀಯರು ಕೊಟ್ಟ ಮನವಿಗೆ ಲೆಕ್ಕವಿಲ್ಲ. ಭೇಟಿ ಮಾಡದ ಜನಪ್ರತಿನಿಧಿಗಳು, ಅಧಿಕಾರಿಗಳಿಲ್ಲ. ಆದರೆ ಇದ್ಯಾವುದಕ್ಕು ಕಿವಿಗೊಡದ ಕೆಪಿಸಿ ಒಂದೊಂದೇ ವಿಭಾಗವನ್ನು ಸ್ಥಳಾಂತರ ಮಾಡುತ್ತಿದ್ದು ಗ್ರಾಮಸ್ಥರ ಪಾಲಿಗೆ ಬಿಸಿತುಪ್ಪವಾಗಿದೆ.



ಬಹಳ ಹಿಂದಿನ ನಿರ್ಧಾರ
ಮಾಸ್ತಿಕಟ್ಟೆಯಿಂದ ಹೊಸಂಗಡಿಗೆ ಸ್ಥಳಾಂತರದ ನಿರ್ಧಾರ ಬಹಳ ವರ್ಷ ಹಿಂದೆಯೆ ಆಗಿದೆ. ವಾರಾಹಿ ವ್ಯಾಪ್ತಿಗೆ ಬರುವ ಎಲ್ಲಾ ಯೋಜನೆಗಳ ನಿರ್ವಹಣೆಗೆ ಮಾಸ್ತಿಕಟ್ಟೆ ಸೂಕ್ತವಾಗಿದೆ ಎಂಬ ಮಾತು ಮೊದಲಿನಿಂದಲೂ ಕೇಳಿಬರುತ್ತಿದೆ. ಆದರೆ, ಒಮ್ಮೆ ತೆಗೆದುಕೊಂಡ ನಿರ್ಧಾರ ಹಿಂಪಡೆಯಬೇಕಾದಲ್ಲಿ ಕೂಡ ಸಾಧಕ- ಬಾಧಕ ಇರುತ್ತವೆ. ಒಟ್ಟಿನಲ್ಲಿ ಈ ಬಗ್ಗೆ ಸ್ಥಳೀಯರಿಂದ ಆಗಾಗ್ಗೆ ದೂರು- ಮನವಿ ಬರುತ್ತಿದ್ದು, ಈ ಬಗ್ಗೆ ನಿಗಮದ ಮೇಲಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ.
ಟಿ ರಾಮಯ್ಯ, ಮುಖ್ಯ ಅಭಿಯಂತರರು, ಎಲಕ್ಟ್ರಿಕಲ್ ವಿಭಾಗ
ವಾರಾಹಿ ಯೋಜನೆ ಕೆಪಿಸಿ ಹೊಸಂಗಡಿ.


 ಇವರೇನಂತಾರೆ?


ಮಾಸ್ತಿಕಟ್ಟೆಯಿಂದ ಹೊಸಂಗಡಿಗೆ ವಾರಾಹಿ ಯೋಜನೆಯ ವಿಭಾಗಗಳನ್ನು ಸ್ಥಳಾಂತರಿಸಲು ಯಾವುದೇ ಕಾರಣಗಳಿಲ್ಲ. 10 ವರ್ಷಗಳ ಹಿಂದೆ ಹಿರಿಯ ಅಧಿಕಾರಿಯೊಬ್ಬರ ವ್ಯಕ್ತಿಗತ ಹಿತಾಸಕ್ತಿ ಮತ್ತು ಸ್ವಪ್ರತಿಷ್ಠೆ ಫಲವಾಗಿ ಸ್ಥಳಾಂತರವಾಗುತ್ತಿದೆ. ಈ ಬಗ್ಗೆ ಕೆಪಿಸಿ ಪುನರ್ ಪರಿಶೀಲಿಸಬೇಕು ಮತ್ತು ಸರ್ಕಾರ ಕೂಡ ಮಧ್ಯೆ ಪ್ರವೇಶಿಸಿ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳಬೇಕು.
ಟಿ ಜಿ.ವೈ. ರವೀಂದ್ರ, ರೈತ ಸಂಘ.
ಕೆಪಿಸಿ ಕೈಗೊಂಡ ಸ್ಥಳಾಂತರ ನಿರ್ಧಾರ ಯಾವುದೇ ಗೊತ್ತುಗುರಿ ಇಲ್ಲದ ಅವೈಜ್ಞಾನಿಕ ಕ್ರಮ. ವಾರಾಹಿ ಯೋಜನೆ ಪ್ರದೇಶದ ಕೇಂದ್ರ ಸ್ಥಳ ಮಾಸ್ತಿಕಟ್ಟೆ. ಆದರೆ ಇಲ್ಲದ ಸಬೂಬು ನೀಡಿ ಸ್ಥಳಾಂತರ ಮಾಡುತ್ತಿರುವುದು ಸಕಲವನ್ನು ತ್ಯಾಗ ಮಾಡಿದ ಈ ಪ್ರದೇಶಕ್ಕೆ ಬಗೆದ ದ್ರೋಹ. ಕೆಪಿಸಿ ಅಧಿಕಾರಿಗಳು ಮತ್ತೊಮ್ಮೆ ಅಧ್ಯಯನ ನಡೆಸಿ ಸ್ಥಳಾಂತರ ಕೈಬಿಟ್ಟಲ್ಲಿ ಕೆಪಿಸಿಗೂ ಕೋಟ್ಯಂತರ ರುಪಾಯಿ ಉಳಿತಾಯ ಮತ್ತು ಇಲ್ಲಿಯ ಗ್ರಾಮಸ್ಥರಿಗೂ ಬದುಕಿಗೊಂದು ಆಧಾರ ಸಿಗುತ್ತದೆ.
ಟಿ ಎಸ್. ಮಹೇಶ್, ಸದಸ್ಯ,
ಖೈರಗುಂದ ಗ್ರಾಪಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.