ಶಿವಮೊಗ್ಗ

ಉತ್ಸವ ಬದಲಾವಣೆಗೆ ಪ್ರೇರೇಪಿಸಲಿ

Published On :

ಕ.ಪ್ರ.ವಾರ್ತೆ, ಸಾಗರ, ಡಿ.15
ಉತ್ಸವದ ಮೂಲಕ ಬದಲಾವಣೆಗೆ ಮನಸ್ಸನ್ನು ಪ್ರೇರೇಪಿಸುವ ಕೆಲಸ ನಡೆಯಬೇಕು ಎಂದು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ರಾಜ್ಯ ಸರ್ಕಾರ ತಾಲೂಕಿನ ಕೆಳದಿಯಲ್ಲಿ ಭಾನುವಾರ ಆಯೋಜಿಸಿದ್ದ ಕೆಳದಿ ಉತ್ಸವ ಉದ್ಘಾಟಿಸಿ, ಈ ಉತ್ಸವದಿಂದ ಮುಂದೆ ಉತ್ಸವ ನಡೆಯುವವರೆಗೆ ಈ ಊರಿನಲ್ಲಿ ಬದಲಾವಣೆಯ ಸಂಕೇತ ತೋರಿಸಿಕೊಡುವ ಮೂಲಕ ಉತ್ಸವವನ್ನು ಸಾರ್ಥಕಗೊಳಿಸಬೇಕು ಎಂದು ಹೇಳಿದರು.
ಸಂಸ್ಕೃತಿ ತೋರಿಸುವ ಕೆಲಸ: ಹಳೆಯದನ್ನು ನೆನಪಿಸಿಕೊಂಡರೆ ನಾಳಿನದು ಗೋಚರಿಸುತ್ತದೆ. ಈ ಉತ್ಸವದ ಮೂಲಕ ಜನರಿಗೆ ಹಳೆಯದನ್ನು ನೆನಪಿಸಿಕೊಡಬೇಕು. ಕೆಳದಿ ಅರಸರು ಈ ಊರು, ಸಮಾಜವನ್ನು ಕಟ್ಟಿದ್ದನ್ನು, ಹಿಂದೆ ಈ ಊರು ರಾಜಧಾನಿಯಾಗಿದ್ದನ್ನು, ಇಲ್ಲಿನ ಸಂಸ್ಕೃತಿಯನ್ನು ತೋರಿಸಿಕೊಡುವ ಕೆಲಸ ನಡೆಯಬೇಕು ಎಂದು ಹೇಳಿದರು.
ಇದು ಬದಲಾವಣೆಯ ಯುಗ. ಬದಲಾವಣೆಗೆ ನಾವು ಮೈಯೊಡ್ಡಬೇಕು. ಸರ್ಕಾರಗಳು ಸಮಾಜದಲ್ಲಿ ಬದಲಾವಣೆ ತರಲು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅಂತಹ ಯೋಜನೆಗಳನ್ನು ಸಮರ್ಥವಾಗಿ  ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದವರು ಹೇಳಿದರು.
ಅವನತಿಯ ಅಂಚು: ಗೃಹ ಕೈಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ಸಾಗರ ಪಟ್ಟಣದಲ್ಲಿ ನಿರ್ದಿಷ್ಟ ಜಾಗ ನೀಡಲಾಗುವುದು. ಇದಕ್ಕಾಗಿ ತಮ್ಮ ಶಾಸಕರ ನಿಧಿಯಿಂದ ರು. 10 ಲಕ್ಷ  ನೀಡುವುದಾಗಿ ಘೋಷಿಸಿದರು.
ಬಹಳ ಹಿಂದಿನಿಂದಲೂ ಸಮಾಜದಲ್ಲಿ ಶ್ರಮಿಕ ವರ್ಗವನ್ನು ಕಡೆಗಣಿಸಲಾಗುತ್ತಿದೆ. ಕೆಳದಿಯಂತಹ ಸಾಮ್ರಾಜ್ಯವನ್ನು ಕೇವಲ ಅರಸರು ಕಟ್ಟಲಿಲ್ಲ. ಇದರಲ್ಲಿ ಶ್ರಮಿಕವರ್ಗದ ಕೊಡುಗೆ ಸಾಕಷ್ಟಿದೆ. ಆದರೆ ಸಾಮ್ರಾಜ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರ ಸಮಾಧಿ ಎಲ್ಲಿಯೂ ಇಲ್ಲ. ರಾಜಮಹಾರಾಜರಂತೆ ಶ್ರಮಿಕ ವರ್ಗವನ್ನೂ ಗುರುತಿಸಬೇಕು ಎಂದರು.
ಮುದೆ 3 ದಿನ: ನಾಣ್ಯ ಹಾಗೂ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಈ ವರ್ಷ ಸರ್ಕಾರ ಕೆಳದಿ ಉತ್ಸವವನ್ನು ಸಾಕೇಂತಿಕವಾಗಿ ಒಂದು ದಿನ ನಡೆಸುತ್ತಿದೆ. ಮುಂದಿನ 3 ವರ್ಷಗಳಲ್ಲಿ 3 ದಿನಗಳ ಕಾಲ ನಡೆಸಲು ಯೋಜಿಸಲಾಗುವುದು ಎಂದರು.
ವಸ್ತುಪ್ರದರ್ಶನ ಉದ್ಘಾಟಿಸಿದ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ನಿರಂತರ ಪರಿವರ್ತನೆಯಿಂದ ಸಮಾಜದಲ್ಲಿ ಬದಲಾವಣೆಗಳಾಗಿರುವ ಇತಿಹಾಸ ನಮ್ಮ ಮುಂದಿದೆ. ಬದಲಾವಣೆಗೆ ತೆರೆದುಕೊಳ್ಳದಿದ್ದರೆ ಉತ್ತಮ ಭವಿಷ್ಯ ನಿರ್ಮಾಣ ಅಸಾಧ್ಯ. ಹೋರಾಟ ಇಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಕೇವಲ ರಾಜಕಾರಣಿಯಿಂದ, ಸರ್ಕಾರದಿಂದ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಎಲ್ಲರೂ ಸೇರಿ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಾಹಿತಿ ನಾ. ಡಿಸೋಜ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಪಂ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಜಿಪಂ ಸದಸ್ಯೆ ಸುಮಂಗಲ, ತಾಪಂ ಅಧ್ಯಕ್ಷ ಹರೀಶ್ ಗಂಟೆ, ಸದಸ್ಯೆ ಪಾರ್ವತಿ, ಕೆಲಸಿ ಗ್ರಾಪಂ ಅಧ್ಯಕ್ಷ ಚೌಡಪ್ಪ ಮೊದಲಾದವರು ಹಾಜರಿದ್ದರು. ವಸುಧಾ ಶರ್ಮ  ಮತ್ತು ಸಂಗಡಿಗರು ನಾಡಗೀತೆ, ರೈತಗೀತೆ ಹಾಡಿದರು. ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಪವಿಭಾಗಾಧಿಕಾರಿ ಡಾ. ಉದಯಕುಮಾರ ಶೆಟ್ಟಿ ಸ್ವಾಗತಿಸಿದರು. ತಹಸೀಲ್ದಾರ್ ಸಾಜಿದ್ ಅಹಮದ್ ಮಲ್ಲಾ ವಂದಿಸಿದರು. ದೀಪಕ್ ಸಾಗರ್ ನಿರೂಪಿಸಿದರು.
ಉದ್ಘಾಟನಾ ಸಮಾರಂಭಕ್ಕೂ ಮೊದಲು ಭವ್ಯ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾ ತಂಡಗಳು, ಸ್ತಬ್ದಚಿತ್ರಗಳು ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.