ಶಿವಮೊಗ್ಗ

ಎಪಿಎಂಸಿಗೆ ರೈತಸಂಘ ದಿಢೀರ್ ಮುತ್ತಿಗೆ

Published On :

ಕ.ಪ್ರ.ವಾರ್ತೆ, ಸೊರಬ,  ಡಿ.17
ಬೆಂಬಲ ಬೆಲೆ ಯೋಜನೆಯಡಿ ಬತ್ತ ಹಾಗೂ ಮೆಕ್ಕೆಜೋಳ ಖರೀದಿ ಮಾಡುವ ವೇಳೆ ಅನುಸರಿಸಲಾಗುತ್ತಿರುವ ಮಾನದಂಡವನ್ನು ಸರಳೀಕರಣ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಎಪಿಎಂಸಿಗೆ ದಿಢೀರ್ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತ ಸಂಘದ ಕಾರ್ಯಾಧ್ಯಕ್ಷ ಎನ್. ಶಿವಣ್ಣ ಓಟೂರು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ರೈತರ ಪರದಾಟ: ರಾಜ್ಯ ಸರ್ಕಾರ ಬತ್ತ ಹಾಗೂ ಮೆಕ್ಕೆಜೋಳಕ್ಕೆ ನ್ಯಾಯ ಸಮ್ಮತವಾಗಿ ಬೆಲೆ ನೀಡಬೇಕು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಬೆಂಬಲ ಬೆಲೆಯಡಿ ಪಟ್ಟಣದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಖರೀದಿ ಕೇಂದ್ರವನ್ನು ನವೆಂಬರ್ 25 ರಂದು ತೆರೆದಿದ್ದು, ಈಗಾಗಲೇ ರೈತರು ಖರೀದಿ ಕೇಂದ್ರಕ್ಕೆ ಬತ್ತ ಮತ್ತು ಮೆಕ್ಕೆಜೋಳವನ್ನು ತಂದಿದ್ದಾರೆ. ಆದರೆ ಖರೀದಿ ವೇಳೆ ಅನುಸರಿಸಲಾಗುತ್ತಿರುವ ಮಾನದಂಡಗಳಿಂದಾಗಿ ಖರೀದಿಯಾಗದೆ ರೈತರು ಪರದಾಡುವಂತಾಗಿದೆ ಎಂದು ತಿಳಿಸಿದರು.
ಕೆಲವು ಕೃಷಿ ಭೂಮಿಯಲ್ಲಿ ಬೆಳೆದ ಮೆಕ್ಕೆಜೋಳದ ಕಾಳುಗಳು ಚಿಕ್ಕದಾಗಿವೆ. ಅಧಿಕಾರಿಗಳು ಇಂತಹ ಕಾಳುಗಳ ಖರೀದಿ ಮಾಡುತ್ತಿಲ್ಲ. ಈಗಾಗಲೇ ಟನ್‌ಗಟ್ಟಲೆ ಇಲ್ಲಿಗೆ ತಂದು ಸುರಿದಿದ್ದಾರೆ. ರಸವತ್ತಾದ ಸಣ್ಣಕಾಳುಗಳನ್ನು ಖರೀದಿ ಮಾಡಬಾರದು ಎಂದು ಸರ್ಕಾರದ ಯಾವುದೇ ನಿಯಮವನ್ನು ಹೊರಡಿಸಿಲ್ಲ. ಆದರೂ ಅಧಿಕಾರಿಗಳು ಖರೀದಿಸುತ್ತಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ರೈತರು ಖರೀದಿ ಕೇಂದ್ರಗಳಿಗೆ ತಂದ ಬತ್ತ ಹಾಗೂ ಮೆಕ್ಕೆಜೋಳದ ಎಲ್ಲಾ ಚೀಲಗಳನ್ನು ಸುರಿಸಿ ತೂಕ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಪ್ರತಿ ಚೀಲದಲ್ಲಿರುವ ಕೆಲ ಕಾಳನ್ನು ತೆಗೆದು ಪರಿಶೀಲನೆ ನಡೆಸಬೇಕು. ಮಾರುಕಟ್ಟೆಯಲ್ಲಿ ಖಾಲಿ ಚೀಲಕ್ಕೆ 35 ಇದ್ದು, ಸರ್ಕಾರ 1 ಕ್ವಿಂಟಾಲ್ ಚೀಲಕ್ಕೆ 13 ಗಳನ್ನು ಮಾತ್ರ ನೀಡುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಸರ್ಕಾರ ರೈತರು ಧಾನ್ಯಗಳನ್ನು ತುಂಬಿ ತರುವ ಚೀಲಗಳಿಗೆ ಕನಿಷ್ಠ  35ಗಳನ್ನು ನೀಡಬೇಕು ಎಂದು ಒತ್ತಾಯಿಸಿದ ರೈತರು ಮುಂದಿನ ದಿನಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಎಪಿಎಂಸಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಮೆಕ್ಕೆಜೋಳದ ಚಿಕ್ಕ ಕಾಳುಗಳನ್ನು ಸಹಾ ಖರೀದಿಸಲು  ಅಧಿಕಾರಿಗಳು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪಿ.ಜಿ. ನಟರಾಜ್ ಪ್ರತಿಕ್ರಿಯಿಸಿ, ರೈತರ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಹಾಲೇಶಪ್ಪಗೌಡ, ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ಸಂಘಟನಾ ಕಾರ್ಯದರ್ಶಿ ಸುರೇಶ್, ಮುಖಂಡರಾದ ಜಯಪ್ಪಗೌಡ, ಹಾಲಪ್ಪಗೌಡ, ವಿಜುಗೌಡ, ಮೆಹಬೂಬ್ ಸಾಬ್ ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.