ಶಿವಮೊಗ್ಗ

ಕನ್ನಡಕ್ಕೆ ಮಹಾಪ್ರಾಣಗಳ ಅಗತ್ಯವಿಲ್ಲ

Published On :

ಕ.ಪ್ರ.ವಾರ್ತೆ  ಸಾಗರ  ಡಿ.17:
 ಪಾಠದಲ್ಲಿ ಆಡುಭಾಷೆಗೆ ಹತ್ತಿರವಾದ ಬರಹ ಇರಬೇಕು. ಮಾತಿನಲ್ಲಿ ಇರುವುದೇ ಬರಹದಲ್ಲಿ ಬರದಿದ್ದರೆ ಹೆಚ್ಚು ಜನರಿಗೆ ಕಲಿಯಲು ಆಸಕ್ತಿ ಬರುವುದಿಲ್ಲ. ಕೆಳವರ್ಗದ ಮಕ್ಕಳಿಗೆ ಒಂದು ರೀತಿಯ ಕೀಳರಿಮೆ ಕಾಡುತ್ತದೆ ಎನ್ನುತ್ತಾರೆ ಪಂಪ ಪ್ರಸಸ್ತಿಪುರಸ್ಕೃತ ಭಾಷಾ ವಿಜ್ಞಾನಿ ಡಿ.ಎನ್.ಶಂಕರಭಟ್.
 ಅವರಿಗೆ ಪಂಪ ಪ್ರಸಸ್ತಿ ಘೋಷಣೆಯಾದ ಹಿನ್ನೆಲೆಯಲ್ಲಿ ಮಂಗಳವಾರ “OÚ«Ú­sÚ®Úúڒ ದೊಂದಿಗೆ ಮಾತನಾಡಿದ ಅವರು, ವಿಮರ್ಶೆ, ಪತ್ರಿಕಾ ಬರವಣಿಗೆ, ವಿಜ್ಞಾನದ ಪುಸ್ತಕಗಳಲ್ಲಿ ಆಡುಭಾಷೆ ಹಾಗೂ ಬರಹದಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ವಿಜ್ಞಾನ ಪುಸ್ತಕಗಳಲ್ಲಂತೂ ಶೇ.50ರಷ್ಟು ಸಂಸ್ಕೃತ ಪದಗಳಿವೆ. ಇದರಿಂದ ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಕಲಿಯಲ್ಲ, ಕೇವಲ ಬಾಯಿಪಾಠ ಮಾಡುತ್ತಾರೆ ಎಂದು ಹೇಳಿದರು.
ಮಹಾಪ್ರಾಣ ಅಗತ್ಯವಿಲ್ಲ: ಕನ್ನಡಕ್ಕೆ ತನ್ನದೇ ಆದ ವ್ಯಾಕರಣ ಇದೆ. ಆದರೆ ಈಗ ಕನ್ನಡಕ್ಕೆ ಸಂಸ್ಕೃತ ವ್ಯಾಕರಣವನ್ನು ಕಲಿಸಲಾಗುತ್ತಿದೆ. ಕನ್ನಡದ್ದೇ ವ್ಯಾಕರಣ ಕಲಿಸಿದರೆ ಕ್ಲಿಷ್ಟ ಎನಿಸುವುದಿಲ್ಲ. ಕನ್ನಡಕ್ಕೆ ಮಹಾಪ್ರಾಣಗಳ ಅಗತ್ಯವಿಲ್ಲ.
ಆಡುಮಾತಿನಲ್ಲಿ ನಾವು ಮಹಾಪ್ರಾಣವನ್ನು ಅಷ್ಟಾಗಿ ಉಚ್ಚರಿಸುವುದಿಲ್ಲ. ಹಾಗೆಯೇ ಬರಹದಲ್ಲಿಯೂ ಬರಬೇಕು ಎನ್ನುವ ಭಟ್ಟರು ಕನ್ನಡಕ್ಕೆ 31 ಅಕ್ಷರಗಳು ಸಾಕು. ಐ, ಔ, ಜ್ಞಾ ಅಕ್ಷರಗಳ ಅಗತ್ಯವಿಲ್ಲ ಎಂದು ಉದಾಹರಣೆ ಸಹಿತ ವಿವರಿಸುತ್ತಾರೆ.
 ಹೊಸ ಬರಹದ ಪ್ರಯೋಗ ಅಷ್ಟರಮಟ್ಟಿಗೆ ಜಾರಿಯಾಗದಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಲಕ್ರಮೇಣ ಹೊಸಬರಹ ಬಳಕೆಗೆ ಬಂದೇ ಬರುತ್ತದೆ. ಹಾಗೆ ಮಾಡದಿದ್ದರೆ ಕನ್ನಡ ಬರಹ ಜನಸಾಮಾನ್ಯರಿಂದ ದೂರ ಉಳಿದುಬಿಡುತ್ತದೆ.
 ಶಾಲೆಯಲ್ಲಿ ಕೆಳವರ್ಗದ ಮಕ್ಕಳು ಮಹಾಪ್ರಾಣಗಳ ಉಚ್ಚಾರ ಸರಿಯಾಗಿ ಮಾಡದೆ ಅವರಿಗೆ ಕೀಳರಿಮೆ ಕಾಡುತ್ತಿದೆ. ಹೊಸಬರಹ ಜಾರಿಗೆ ಬಂದರೆ ಆ ರೀತಿಯ ಯಾವ ತೊಂದರೆಗಳೂ ಆಗಲ್ಲ ಎನ್ನುತ್ತಾರೆ.
ಆಡುಮಾತಿನಲ್ಲಿ ಇಂಗ್ಲೀಷ್ ಹೆಚ್ಚು ಸೇರಿಕೊಳ್ಳುತ್ತಿರುವ ಬಗ್ಗೆ ಗಮನ ಸೆಳೆದಾಗ ಅದು ಸಹಜ ಪ್ರಕ್ರಿಯೆ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅದರಿಂದ ವಿಷಯ ಅರ್ಥವಾಗಲು ಕಷ್ಟವಾಗುವುದಿಲ್ಲ. ಆದರೆ ಸಂಸ್ಕೃತ ಸೇರಿಕೊಂಡರೆ ವಿಷಯವೇ ಅರ್ಥವಾಗುವುದಿಲ್ಲ. ವಿಜ್ಞಾನ ವಿದ್ಯಾರ್ಥಿಗಳು ಮುಂದೆ ಇಂಗ್ಲೀಷಿನಲ್ಲಿಯೇ ಅಭ್ಯಾಸ ಮಾಡುವುದರಿಂದ ಈಗ ಪಠ್ಯದಲ್ಲಿ ಸಂಸ್ಕೃತ ಪದ ಸೇರಿಕೊಂಡರೆ ಅದರಿಂದ ಮುಂದೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದರು.
ತಲೆಕೆಡಿಸಿಕೊಳ್ಳಲ್ಲ: ಅವರ ಹೊಸ ಬರಹದ ಪ್ರತಿಪಾದನೆಗೆ ಇತರ ವಿದ್ವಂಸರ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ, ಕೆಲವರು ತಮ್ಮ ವಾದವನ್ನು ಬೆಂಬಲಿಸಿದ್ದಾರೆ, ಕೆಲವರು ವಿರೋಧಿಸಿದ್ದಾರೆ. ಆದರೆ ನಾನು ಅದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಲ್ಲ.
ಹೊಸ ಬರಹ ಚಾಲ್ತಿಗೆ ಬರಬೇಕು, ಬಂದರೆ ಹೆಚ್ಚು ಜನರನ್ನು ತಲುಪುತ್ತದೆ ಎನ್ನುವುದು ನನ್ನ ವಾದ. ಬದಲಾವಣೆ ತರುವಾಗ ವಿರೋಧ ಸಹಜ. ಯಾರಿಗೂ ನನ್ನ ವಾದವನ್ನು ತಪ್ಪು ಎಂದು ಹೇಳಲು ಆಗಲ್ಲ.
ಅವರಿಗೆ ಇದು ತಪ್ಪು ಎಂದು ವೈಜ್ಞಾನಿಕವಾಗಿ ಪ್ರತಿಪಾದನೆ ಮಾಡಲು ಆಗಲ್ಲ ಎಂದು ಹೇಳಿದರು.  ಪಂಪ ಪ್ರಶಸ್ತಿ ಬಂದುದಕ್ಕೆ ಶುಭಾಶಯ ಹೇಳಿ ಈ ಬಗ್ಗೆ ಅವರ ಪ್ರತಿಕ್ರಿಯೆ ಕೇಳಿದಾಗ ನನಗೆ ಏನೂ ಅನಿಸುತ್ತಿಲ್ಲ. ನಾನು ಯಾವುದೇ ಪ್ರಶಸ್ತಿ, ಪುರಸ್ಕಾರಗಳನ್ನು ನಿರೀಕ್ಷಿಸಿದವನಲ್ಲ. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಕೆಲಸ ಮಾಡುತ್ತಿಲ್ಲ. ಆ ಬಗ್ಗೆ ಹೆಚ್ಚು ಮೋಹ ಇಲ್ಲ ಎಂದು ಹೇಳಿದರು.

ಭಾಷಾ ಬೈರಾಗಿಗೆ ಪಂಪ ಪ್ರಶಸ್ತಿಯ ಗರಿ
ಸಾಗರ: ಕನ್ನಡ ಬರಹಕ್ಕೆ ಮಹಾಪ್ರಾಣಗಳು ಬೇಡೆವೆಂದು ಪ್ರದಿಪಾದಿಸಿರುವ ಭಾಷಾ ವಿಜ್ಞಾನಿ ಡಿ.ಎನ್.ಶಂಕರಭಟ್ಟರಿಗೆ ಈ ಸಾಲಿನ ಪಂಪ ಪ್ರಶಸ್ತಿ ಸಂದಿದೆ. ಮೂಲತಃ ಪುತ್ತೂರು ತಾಲ್ಲೂಕು ಬೆಟ್ಟಪ್ಪಾಡಿಯವರಾದ ಶಂಕರಭಟ್ಟರು ಅಧ್ಯಯನ, ಬರವಣಿಗೆಗಾಗಿ ಕಳೆದ ಎಂಟು ವರ್ಷಗಳಿಂದ ಸಾಗರ ತಾಲ್ಲೂಕಿನ ಮುಂಗರವಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ.
 ಶಂಕರಭಟ್ಟರು ನೀಚರ್ ಸಾಲುವಿನಲ್ಲಿ ಪ್ರಾಥಮಿಕ ಶಿಕ್ಷಣ, ಬದಿಯಡ್ಕದಲ್ಲಿ ಪ್ರೌಢಶಿಕ್ಷಣ, ಮಂಗಳೂರಿನ ಎಲಸ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ. ಪೂನಾ ವಿವಿ ಯಲ್ಲಿ ತುಳು ಭಾಷೆಯ ವ್ಯಾಕರಣದ ಮೇಲೆ ಪ್ರಬಂಧ ಮಂಡಿಸಿ ಪಿಹೆಚ್.ಡಿ ಪಡೆದಿದ್ದಾರೆ. ನಂತರ ಭಾಷಾ ವಿಜ್ಞಾನ ವಿಷಯದ ಉಪನ್ಯಾಸಕ, ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ, ರೀಸಚರ್ ವಿಭಾಗ ಹೀಗೆ ಬೇರೆ ಬೇರೆ ಸ್ತರದಲ್ಲಿ ಪೂನಾ, ತ್ರಿವೇಂಡ್ರಂ, ಇಂಪಾಲದ ಮಣಿಪುರ ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ದಿನದ ಹೆಚ್ಚು ಸಮಯ ಅಧ್ಯಯನ, ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಾರೆ. ಪತ್ನಿ ಭಾರತಿ ಭಟ್ ಇವರ ಸಂಶೋಧನೆ, ಬರವಣಿಗೆಗೆ ನೆರವಾಗುತ್ತಿದ್ದು ಇವರೂ ಹತ್ತಾರು ಕೃತಿಗಳನ್ನು ಬರೆದಿದ್ದಾರೆ.
 ವೈಜ್ಞಾನಿಕ ಆಧಾರ: ಕನ್ನಡಕ್ಕೆ ಹೊಸ ಬರಹದ ಅವಶ್ಯಕತೆಯಿದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಭಟ್ಟರು ಹೊಸ ಬರಹಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಬರೆದಿದ್ದಾರೆ. ತಮ್ಮ ವಾದವನ್ನು ಬೇರೆಯವರ ಒಪ್ಪದಿದ್ದರೂ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಅವರು ತಮ್ಮ ವಾದ ತಪ್ಪು ಎನ್ನಲು ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಆದರೆ ತಾವು ವೈಜ್ಞಾನಿಕವಾಗಿಯೇ ಎಲ್ಲವನ್ನು ಪ್ರತಿಪಾದಿಸುವುದಾಗಿ ಹೇಳುತ್ತಾರೆ.
 ಹಿಂದೆ ನಾಡೋಜ ಪ್ರಶಸ್ತಿ ಬಂದಾಗ ಅದನ್ನು ಸ್ವೀಕರಿಸಲು ಭಟ್ಟರು ಹೋಗದಿದ್ದಾಗ ನಂತರ ಹೆಗ್ಗೋಡಿಗೆ ಬಂದು ಪ್ರಶಸ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
 -ರಾಜೇಶ ಭಡ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.