ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಕೊರತೆ
ಕ.ಪ್ರ.ವಾರ್ತೆ ಸಾಗರ ಡಿ.21
ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಮನಸ್ಸು ಹಾಗೂ ಕಣ್ಣು ತೆರೆದುಕೊಂಡು ಬದ್ಧತೆಯಿಂದ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು. ಇಲ್ಲಿನ ಸುವರ್ಣಸೌಧ ಭವನದಲ್ಲಿ ನಡೆದ ಜನವಿಕಾಸ ಕರ್ನಾಟಕ ಸಮಿತಿ, ತಾಲೂಕು ಘಟಕ ಉದ್ಘಾಟನೆ ಹಾಗೂ ದಿ. ಅಬ್ದುಲ್ ನಜೀರ್ಸಾಬ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಜೀರ್ಸಾಬ್ ಅತ್ಯಂತ ಪ್ರಾಮಾಣಿಕ ಹಾಗೂ ಸಿದ್ಧಾಂತ, ಬದ್ಧತೆ ಹೊಂದಿದ ಅಪರೂಪದ ರಾಜಕಾರಣಿಯಾಗಿದ್ದರು ಎಂದು ನೆನಪಿಸಿಕೊಂಡರು.
ಅಧಿಕಾರ ವಿಕೇಂದ್ರಿಕರಣದ ಮೂಲಕ ಗ್ರಾಮಗಳು ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶ ನಜೀರ್ಸಾಬ್ ಅವರದ್ದಾಗಿತ್ತು. ಒಬ್ಬ ರಾಜಕಾರಣಿ ಅಧಿಕಾರ ಸಿಕ್ಕಾಗ ಮತ ಕೊಟ್ಟ ಜನರಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಬಹುದು ಎನ್ನುವುದನ್ನು ನಜೀರ್ಸಾಬ್ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್ ಮಾತನಾಡಿ, ಅಬ್ದುಲ್ ನಜೀರ್ಸಾಬ್ ನೆನಪು ಮಾಡಿಕೊಳ್ಳುವ ಮೂಲಕ ಪಂಚಾಯತ್ರಾಜ್ ವ್ಯವಸ್ಥೆಯ ಚರ್ಚೆಯಾಗಬೇಕು. 80ರ ದಶಕದಲ್ಲಿ ಅಧಿಕಾರ ವಿಕೇಂದ್ರಿಕರಣದ ನಿಜವಾದ ಅರ್ಥವನ್ನು ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ನಜೀರ್ಸಾಬ್ ಮಾಡಿದ್ದಾರೆ. ಮಂಡಲ ಪಂಚಾಯಿತಿ, ಜಿಲ್ಲಾ ಪರಿಷತ್ ಕಾಯ್ದೆ ಜಾರಿಗೆ ಕೊಡುವ ಮೂಲಕ ಗ್ರಾಮ ಮಟ್ಟಕ್ಕೆ ಅಧಿಕಾರ ನೀಡಿದ ಕೀರ್ತಿ ನಜೀರ್ಸಾಬ್ ಅವರಿಗೆ ಸಲ್ಲುತ್ತದೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಭೀಮನೇರಿ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ರಮೇಶ್ ಕೆ.ಎಚ್. ಮರಸ ಅಧ್ಯಕ್ಷತೆ ವಹಿಸಿದ್ದರು. ಹರೀಶ್ ಗಂಟೆ, ಟಿ.ಸಿದ್ದಪ್ಪ, ಎಪಿಎಂಸಿ ಉಪಾಧ್ಯಕ್ಷ ಕೆ.ಡಿ. ಜಿನದತ್ತ ಜೈನ್, ಜ್ಯೋತಿ ಮುರಳಿಧರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

