ಬೇಡಿಕೆ ಈಡೇರಿಕೆಗೆ ಹತ್ತು ದಿನ ಗಡುವು
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.22
ರೈತರು, ಗ್ರಾಮೀಣ ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹುಸಿಗೊಳಿಸಿದ್ದಾರೆ. ರೈತರ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ಸೋತಿದ್ದು, ಹೊಣೆಗೇಡಿ ಸರ್ಕಾರದೊಂದಿಗೆ ನಮ್ಮ ಜಗಳ ಆರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಎಚ್ಚರಿಕೆ ನೀಡಿದೆ.
ಇಲ್ಲಿ ನಡೆದ ರಾಜ್ಯ ರೈತ ಸಂಘದ ಪದಾಧಿಕಾರಿ ಸಭೆ ನಡುವೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹಾಗೂ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿ, ಸಂಘಟನೆಯ ಬೇಡಿಕೆ ಈಡೇರಿಕೆಗೆ 10 ದಿನ ಗಡವು ನೀಡಿದ್ದಾರೆ.
ಕೇವಲ ಭರವಸೆ: ಸುಮಾರು 32 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಅ. 28ರಂದು ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಅಲ್ಲಿಗೆ ಬಂದಿದ್ದ ಮೂವರು ಸಚಿವರು ಬೇಡಿಕೆ ಸರಿಯಾಗಿಯೇ ಇದೆ. ತಕ್ಷಣವೇ ಇದನ್ನು ಈಡೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಯತ್ನಗಳೂ ನಡೆದಿಲ್ಲ. ಕನಿಷ್ಠ ಸಭೆ ಕರೆಯುವ ಪ್ರಯತ್ನಕ್ಕೂ ಕೈ ಹಾಕಿಲ್ಲ. ಸರ್ಕಾರ ಸತ್ತುಹೋಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳನ್ನು ಪರಿಹರಿಸಲು ಸಿದ್ದರಾಮಯ್ಯ ಸರ್ಕಾರ ಉದಾಸೀನ ತೋರುತ್ತಿದೆ. ಕಬ್ಬು, ಬತ್ತ, ಬತ್ತಿ, ಜೋಳ ಅಡಕೆ, ತೆಂಗು ಬೆಳೆಗಾರರ ಯಾವುದೇ ಸಮಸ್ಯೆ ಪರಿಹಾರಕ್ಕೆ ಆಲೋಚಿಸುತ್ತಿಲ್ಲ. ಮುಷ್ಕರ ನಡೆಸಿದ ಮೇಲೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳುತ್ತಿದೆ. ಹೀಗಾಗಿ ನಮ್ಮ ಲಡಾಯಿ ಆರಂಭಿಸುವ ಅನಿವಾರ್ಯತೆ ಇದೆ ಎಂದರು.
ದೆಹಲಿ ರಾಜಕೀಯ ಬದಲಾವಣೆಯ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ರೈತ ಸಂಘ ರಾಜ್ಯದಲ್ಲೂ ಬದಲಾವಣೆ ತರುವ ಉಮೇದಿನಲ್ಲಿ ಹೊಸ ಪ್ರಯತ್ನವೊಂದಕ್ಕೆ ಕೈಹಾಕಲು ಅಣಿಯಾಗಿದೆ.
ದೆಹಲಿಯಲ್ಲಿ ಯಶಸ್ಸು ಸಾಧಿಸಿದ ಆಮ್ ಆದ್ಮಿ ಪಕ್ಷದೊಂದಿಗೆ ರಾಜ್ಯದಲ್ಲಿ ಕೈ ಜೋಡಿಸಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಬಗ್ಗೆ ಚಿಂತನೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿದ ಸಂಘಟನೆ ರಾಜ್ಯ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಈ ವಿಚಾರ ಇನ್ನೂ ಚರ್ಚಾ ಹಂತದಲ್ಲಿದೆ. ಜನವರಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದರು.
ಅಮ್ ಆದ್ಮಿ ನಾಯಕ ಯೋಗೇಂದ್ರ ಯಾದವ್ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸ್ಪರ್ಧಿಸುವ ಕುರಿತು ಚರ್ಚೆ ನಡೆದಿತ್ತು. ಆದರೆ, ತೀರ್ಮಾನಕ್ಕೆ ಬರಲಾಗಲಿಲ್ಲ. ಈಗ ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಚರ್ಚೆ ನಡೆಸಿದ್ದೇವೆ ಎಂದರು.
ಜೋಳ ಬೆಳಿತೀವಿ: ನೋಡ್ತಾ ಇರಿ, ವಿಮಾನ ನಿಲ್ದಾಣ ಜಾಗದಲ್ಲಿ ಜೋಳ ಬೆಳೆದು ತೋರಿಸ್ತೇವೆ ಎಂದು ರೈತ ಸಂಘ ಗುಡುಗಿದೆ.
ತಾಂತ್ರಿಕ ಕಾರಣಗಳಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳೇ ಉರುಳಿವೆ. ರೈತರ ಭೂಮಿ ವಶಕ್ಕೆ ಪಡೆದುಕೊಂಡು ಯೋಜನೆ ಕಾರ್ಯಗತಗೊಳಿಸದ ಹಿನ್ನೆಲೆಯಲ್ಲಿ ಸರ್ಕಾರ ವಿರುದ್ಧ ಗುಡುಗಿರುವ ರೈತ ಸಂಘ, ಸವಾಲೆಸೆದಿದೆ.
ಕಾದು ನೋಡುವ ತಂತ್ರ: ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ಇನ್ನು ಕೆಲವು ದಿನ ಕಾದು ನೋಡುತ್ತೇವೆ. ಯೋಜನೆಯ ಉದ್ದೇಶ ಈಡೇರುವ ಲಕ್ಷಣ ಗೋಚರಿಸದಿದ್ದರೆ ಖಂಡಿತ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬೇಸಾಯ ಮಾಡುತ್ತೇವೆ ಎಂದು ಎಂದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಬೇಕು. ಅದರಿಂದ ಒಂದಷ್ಟು ಉದ್ಧಾರ ಆಗುತ್ತದೆ ಎಂದು ಅನೇಕರು ಹೇಳಿದ್ದರು. ಮನವರಿಕೆ ಮಾಡಿದರು, ಒತ್ತಡ ಹೇರಿದರು. ಇದರಿಂದ ರೈತರು ತ್ಯಾಗ ಮಾಡಿದರು. ಹಸನಾದ ಬೆಳೆ ತೆಗೆಯುತ್ತ ಭೂಮಿಯನ್ನು ವಿಮಾನ ನಿಲ್ದಾಣಕ್ಕೆಂದು ಬಿಟ್ಟುಕೊಟ್ಟರು. ಆದರೆ, ಇಂದಿನ ಸ್ಥಿತಿ ಕಂಡು ಬೇಸರವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯೋಜನೆ ಪೂರ್ಣಗೊಳ್ಳುವುದೇ ಅನುಮಾನ ಎಂಬ ಸ್ಥಿತಿ ಇದೆ. ಸರ್ಕಾರ, ಜನಪ್ರತಿನಿಧಿಗಳ ವರ್ತನೆಯಿಂದ ಬಹಳ ಬೇಸರವಾಗುತ್ತದೆ. ರೈತರಿಂದ ಭೂಮಿ ಕಿತ್ತುಕೊಂಡು ಈಗ ಹಾಗೇ ಬಿಟ್ಟರೆ ಸುಮ್ಮನೆ ನೋಡಿ ಕುಳಿತುಕೊಳ್ಳಲಾಗದು. ಕಾದು ನೋಡುತ್ತೇವೆ. ಮುಂಬರುವ ಮುಂಗಾರಿನಲ್ಲಿ ಬೇಸಾಯ ಮಾಡಿ ಜೋಳ ಬೆಳೆದು ತೋರಿಸುತ್ತೇವೆ ಎಂದು ಕೆ.ಟಿ.ಗಂಗಾಧರ್ ಎಚ್ಚರಿಸಿದರು.
ಕೆಐಡಿಬಿ ಮುಚ್ಚಿ: ಮಾನ, ಮರ್ಯಾದೆ, ಗೌರವ ಇದ್ದರೆ, ಕೆಐಡಿಬಿ ಸಂಸ್ಥೆಯನ್ನು ಮೊದಲು ಮುಚ್ಚಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ಅವರು, ಆದಾಯ ಹೆಚ್ಚಿಸಲು ಸರ್ಕಾರ ಭೂಮಿ ಮಾರುವುದು ನಾಚಿಕೆಗೇಡಿನ ಸಂಗತಿ. ರೈತರ ಭೂಮಿಯನ್ನು ಕಡಮೆ ಬೆಲೆಯಲ್ಲಿ ಪಡೆದು ಉದ್ಯಮಿಗಳಿಗೆ ನೀಡುವ ದಲ್ಲಾಳಿತನ ಸರ್ಕಾರದ ಕಡೆಯಿಂದಾಗುತ್ತಿರುವುದು ವಿಷಾದದ ಸಂಗತಿ. ಗನ್ ಪಾಯಿಂಟ್ ರೈತನ ಮೇಲಿಟ್ಟು ಕೆಐಡಿಬಿ ಮೂಲಕ ದಲ್ಲಾಳಿ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

