ಶಿವಮೊಗ್ಗ

ಜಿಎಸ್‌ಎಸ್ ಹುಟ್ಟೂರಲ್ಲಿ ನುಡಿನಮನ

Published On :

ಕ.ಪ್ರ.ವಾರ್ತೆ  ಶಿಕಾರಿಪುರ  ಡಿ.25
ತಾಲೂಕಿನ ಈಸೂರಿನಲ್ಲಿ ಜನಿಸಿ, ನಾಡಿನ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಹೆಮ್ಮರವಾಗಿ ಬೆಳೆದ ಜಿ.ಎಸ್. ಶಿವರುದ್ರಪ್ಪನವರ ಜನ್ಮಸ್ಥಳ ಈಸೂರಿನಲ್ಲಿ ಬುಧವಾರ ಗ್ರಾಮಸ್ಥರು ಸಂತಾಪ ಸಭೆ ನಡೆಸಿ ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು.
ಗ್ರಾಮದ ಮಾರಿಕಾಂಬ ದೇವಸ್ಥಾನದ ಎದುರಿನ ಅರಳೀಕಟ್ಟೆ ಮುಂಭಾಗದಲ್ಲಿ ನೆರೆದ ಗ್ರಾಮಸ್ಥರು ಜಿಎಸ್‌ಎಸ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಪುಷ್ಪಾರ್ಚನೆ ನಂತರ ಮೌನಾಚರಿಸಿ ನುಡಿ ನಮನದ ಮೂಲಕ ಹುಟ್ಟೂರಿನ ಗೌರವ ಸಮರ್ಪಣೆ ಮಾಡಿದರು.
ಸಾಧನೆ ಮೂಲಕ ವಿಶ್ವ ಮಾನವ: ನಂತರದಲ್ಲಿ ನಡೆದ ಸಂತಾಪ ಸಭೆಯಲ್ಲಿ ಗ್ರಾಮದ ಪಶುವೈದ್ಯ ರವಿ ಮಾತನಾಡಿ, ಗ್ರಾಮದಲ್ಲಿ ಜನಿಸಿದ ಜಿಎಸ್‌ಎಸ್ ತಮ್ಮ ಸಾಧನೆ ಮೂಲಕ ವಿಶ್ವಮಾನವರಾದವರು. ಅವರ ಸಾಧನೆಗಳು ಹುಟ್ಟೂರು ಈಸೂರಿನ ಕೀರ್ತಿ ಹೆಚ್ಚಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು. ಅವರ ಆದರ್ಶ ಇಂದಿನ ಯುವಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದರು.
ಉಪನ್ಯಾಸಕ ಸೋಮಶೇಖರ್ ಶಿವಮೊಗ್ಗಿ ಮಾತನಾಡಿ, ಸುಖಬಲ್ಲವ ಸುಖಿಯಲ್ಲ, ದುಃಖಬಲ್ಲವ ದುಖಿಯಲ್ಲ ಸುಖ ದುಖ- ಎರಡನ್ನೂ ಬಲ್ಲವನು ಸುಖಿಯಲ್ಲ ಆದರೆ ಹುಟ್ಟಿದ ಬಳಿಕ ಸಾವಿನ ಮರ್ಮವನ್ನು ಅರಿತವನೇ ನಿಜವಾದ ಸುಖಿ ಎಂದು ಜಿಎಸ್‌ಎಸ್ 1997ರಲ್ಲಿ ಶಿಕಾರಿಪುರದಲ್ಲಿ ನಡೆದ ಪೌರ ಸನ್ಮಾನದಲ್ಲಿ ಆಡಿದ ಮಾತನ್ನು ಮೆಲಕು ಹಾಕಿದರು.
ರಾಜ್ಯದ ಗಮನ: ಶಿಕ್ಷಕ ಕಾಳೇಶಪ್ಪ ಮಾತನಾಡಿ, ಈಸೂರು ಗ್ರಾಮದಲ್ಲಿ ಜನಿಸಿದ ಜಿಎಸ್‌ಎಸ್ ತಮ್ಮ ಸಾಹಿತ್ಯ ಕೃಷಿ ಮೂಲಕ ಇಡೀ ರಾಜ್ಯದ ಗಮನ ಸೆಳೆದವರು. ಅವರ ಸಾಧನೆ ವಿಶ್ವಕ್ಕೆ ಮಾದರಿಯಾಗಿದೆ. ಅವರ ಸಾವು ಹುಟ್ಟೂರಿನ ಜನತೆಗೆ ಭರಿಸಲಾರದ ನಷ್ಟವಾಗಿದೆ ಎಂದ ಅವರು ಸಮಸ್ತ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅವರ ಆತ್ಮಕ್ಕೆ ಶಾಂತಿ ಕೋರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಗ್ರಾಮದ ಕನ್ನಡ ಯುವಕ ಸಂಘದ ಸದಸ್ಯರು ಕಾರ್ಯಕ್ರಮ ಆಯೋಜಿಸಿದ್ದರು. ಸಂಘದ ಗೌರವಾಧ್ಯಕ್ಷ ಬೇಗೂರು ಶಿವಪ್ಪ, ತಾಲೂಕು ಕಸಾಪ ಅಧ್ಯಕ್ಷ ಶಿವರಂಜಿನಿ ಸುದರ್ಶನ್, ಗ್ರಾಮದ ಮುಖಂಡ ಶಿವಪ್ಪಯ್ಯ, ಸತೀಶ್ಚಂದ್ರ, ವಿಜಯ ಕುಮಾರ್, ಜಯಪ್ಪ, ನಾಗರಾಜ ಸ್ವಾಮಿ, ಪ್ರಭು, ಹುಚ್ರಾಯಪ್ಪ, ತಾಪಂ ಉಪಾಧ್ಯಕ್ಷೆ ಸರೋಜಮ್ಮ, ಶೀಲಾವತಿ, ವೀರಪ್ಪ, ಬಸಪ್ಪಯ್ಯ ಇದ್ದರು.

ಸಾಹಿತ್ಯ ಲೋಕಕ್ಕೆ ಜಿಎಸ್ಸೆಸ್ ಕೊಡುಗೆ ಸ್ಮರಣೀಯ
ಭದ್ರಾವತಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಮ್ಮನ್ನಗಲಿದ್ದರೂ ಅವರು ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಆದಿಚುಂಚನಗಿರಿ ಮಠದ ನಿರ್ಮಾಲಾನಂದನಾಥ ಶ್ರೀ ಹೇಳಿದರು.
ನ್ಯೂಟೌನ್ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಶಾಲಾ ವಾರ್ಷಿಕೋತ್ಸವದ ಚುಂಚಾದ್ರಿ ಮೇಳದ ಸಾನ್ನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಜಿಎಸ್ಸೆಸ್ಸ್ ಕನ್ನಡ ಸಾಹಿತ್ಯ ಸೇವೆ ಸದಾ ಅವರ ಕೀರ್ತಿಯನ್ನು ನೆನಪಿಸುತ್ತದೆ ಎಂದರು.
ಶಾಲಾ ವಾರ್ಷಿಕೋತ್ಸವಗಳಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಮನರಂಜನೆಯ ವೇದಿಕೆಯಾಗಬಾರದು. ಅದು ಸಂಸ್ಕೃತಿಯನ್ನು ಸಾರುವ ಪ್ರತೀಕವಾಗಿರಬೇಕು ಎಂದರು.
ಮಠದ ಆಡಳಿತಾಧಿಕಾರಿ ಕೆ.ಪಿ. ಹನುಮಂತರಾಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯವಿಷಗಳ ಅಧ್ಯಯನದ ಜೊತೆಗೆ ಪಠ್ಯೇತರ ವಿಷಯಗಳಲ್ಲಿಯೂ ಭಾಗವಹಿಸಿದಾಗ ಮಾತ್ರ ಪರಿಪೂರ್ಣತೆ ಕಾಣಲು ಸಾಧ್ಯ ಎಂದರು.
ಇದೇ ವೇಳೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಸಕ ಎಂಜೆ.ಅಪ್ಪಾಜಿ, ಶಿವಮೊಗ್ಗ  ಶಾಖಾ ಮಠದ ಪ್ರಸನ್ನನಾಥ ಶ್ರೀ, ಸಂಸ್ಥೆಯ ಧರ್ಮದರ್ಶಿ ವೆಂಕಟರಮಣ, ಮರಿಯಪ್ಪ, ರಂಗನಾಥ, ಶ್ರೀನಿವಾಸ್, ಎಚ್. ನರಸಿಂಹಯ್ಯ, ಬಿ.ಜಿ. ಮರಿಯಪ್ಪ, ಚನ್ನೆಗೌಡರು ಮೊದಲಾದವರು ಇದ್ದರು.
ಗಗನಶ್ರೀ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.