ಹೋರಿ ಬೆದರಿಸುವ ಹಬ್ಬ ಸಾವಿನ ಮನೆಯಾಗದಿರಲಿ
ಸೊರಬ: ಗ್ರಾಮೀಣ ಜನತೆಯ ಬಹುಮುಖ್ಯ ಕೃಷಿ ಜೊತೆಗಾರ ಎತ್ತುಗಳಿಗೆ ಬಿಡುವಿನ ದಿನ ದೊರೆತಾಗ ನಮ್ಮ ರೈತಾಪಿ ಜನ ಕಂಡುಕೊಂಡ ಮನೋರಂಜನಾ ವಿಧಾನವೇ ಹೋರಿ ಬೆದರಿಸುವ ಹಬ್ಬ.
ದೀಪಾವಳಿ ಹಬ್ಬದ ದಿನದಂದು ಹಳ್ಳಿಗಳಲ್ಲಿ ಹೋರಿ ಬೆದರಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. ಆದರೆ ಇದನ್ನೇ ಪದೇ ಪದೇ ಏರ್ಪಡಿಸುವ ಮೂಲಕ ಈ ಪದ್ಧತಿ ಮನೋರಂಜನೆ ಮತ್ತು ಜೂಜಾಗಿ ಪರಿವರ್ತನೆಗೊಂಡಿದೆ. ಈ ಸ್ಪರ್ಧೆಯ ವಿಶೇಷ ಹಾಗೂ ಆಶ್ಚರ್ಯವೆಂದರೆ, ಸ್ಪರ್ಧೆಯಲ್ಲಿ ಯಾರಾದರೂ ಮೃತಪಟ್ಟರೆ ಅದು ಅಪರಾಧವಾಗುವುದಿಲ್ಲ.
ಸ್ಪರ್ಧೆ ವಿಧಾನ: ಹೋರಿ ಬೆದರಿಸುವ ವೇಳೆ ಕೊಬ್ಬರಿ ಹಿರಿಯಲು ಯುವಕರ ದಂಡು ಸಜ್ಜಾಗಿ ನಿಂತಿರುತ್ತಾರೆ. ರಭಸದಿಂದ ಬರುವ ಬಲಿಷ್ಟ ಹೋರಿಗಳು ಜನರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಬೇಕು. ಹೀಗೆ ಹೋರಿ ತಪ್ಪಿಸಿಕೊಳ್ಳುವಾಗ ಅದರ ಮೇಲೆ ಎಗರುವ ಗುಂಪು ಹೋರಿಯನ್ನು ಹಿಡಿದು ನಿಲ್ಲಿಸಿ ಅದರ ಕೊರಳಲ್ಲಿರುವ ಕೊಬ್ಬರಿಯನ್ನು ಕಿತ್ತುಕೊಳ್ಳುತ್ತಾರೆ.
ಹೋರಿ ಸಹ ತನ್ನನ್ನು ರಕ್ಷಿಸಿಕೊಳ್ಳಲು ಕೋಡುಗಳಿಂದ ತಿವಿಯುವುದು ಇಲ್ಲವೇ ಒದೆಯುವ ತಂತ್ರ ಅನುಸರಿಸುತ್ತವೆ. ಇಂತಹ ಸಂದರ್ಭದಲ್ಲೇ ಅವಘಡಗಳು ಸಂಭವಿಸುತ್ತವೆ. ಪ್ರಾಣದ ಹಂಗು ತೊರೆದು ಕೊಬ್ಬರಿ ಹಿರಿಯುವುದೆ ಇಲ್ಲಿ ಮಾನದಂಡವಾಗಿರುತ್ತದೆ.
ಇಬ್ಬರ ಸಾವು: ಇಂತಹ ಅವಘಡಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಸೊರಬ ತಾಲ್ಲೂಕು ಜಡೆ ಗ್ರಾಮದಲ್ಲಿ ನಡೆದ ಘಟನೆ. ಹೋರಿ ಹಿಡಿಯುವ ಭರಾಟೆಯಲ್ಲಿ ಇಬ್ಬರು ಸ್ಥಳದಲ್ಲಿಯೆ ಧಾರುಣ ಸಾವನ್ನಪ್ಪಿದರೆ, ಇನ್ನೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡಿದ್ದಾರೆ.
ಒಂದು ರೀತಿಯಲ್ಲಿ ಜೂಜಿನ ರೀತಿ ನಡೆಯುವ ಈ ಚಟುವಟಿಕೆಗಳಿಗೆ ಅನುಮತಿ ಹೇಗೆ ದೊರಕುತ್ತದೆ, ಅನುಮತಿ ಇದ್ದರೂ ರಕ್ಷಣಾ ವ್ಯವಸ್ಥೆಯಲ್ಲಿ ಏನು ಕೊರತೆಯಾಗಿದೆ, ರಕ್ಷಣಾ ಸಿಬ್ಬಂದಿ ಇದ್ದರೂ ನಿಯಂತ್ರಿಸಲಾಗದಿದ್ದಾಗ ಇಂತಹ ಚಟುವಟಿಕೆ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ದೊರೆಯುವುದಿಲ್ಲ .
ಕಸಾಯಿಖಾನೆಗೆ ರವಾನೆ: ಹುಟ್ಟಿನಿಂದ ಅಂತ್ಯದವರೆಗೂ ಒಂದಲ್ಲ ಒಂದು ವಿಧದಲ್ಲಿ ಮನುಷ್ಯನಿಗೆ ನೆರವಾಗುವ ಬಸವನನ್ನು ದೇವರಂತೆ ಕಾಣುವ ಕೃಷಿಕರು, ಮೋಜು, ಮನೋರಂಜನೆಗಾಗಿ ಇಂತಹ ಸ್ಪರ್ಧೆ ಏರ್ಪಡಿಸಿ ಬಳಿಕ ಹೋರಿಗಳು ಸ್ಪರ್ಧೆಯ ವೇಳೆ ಅಕಸ್ಮಾತ್ ಊನಗೊಂಡರೆ ಅವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಮಟ್ಟಕ್ಕೆ ಇಳಿದಿರುವುದು ಆತಂಕದ ಸಂಗತಿ.
ಈ ನಿಟ್ಟಿನಲ್ಲಿ ಜಡೆ ಗ್ರಾಮದಲ್ಲಿ ನಡೆದ ಅನಾಹುತದ ಬಗ್ಗೆ ತಹಸೀಲ್ದಾರ್ ಮತ್ತು ಡಿವೈಎಸ್ಪಿ ನೇತೃತ್ವದ ಪರಿಶೀಲನಾ ಸಭೆ ಬುಧವಾರ ನಡೆದಿದ್ದು, ಅವಘಡಕ್ಕೆ ಕಾರಣವಾಗಿರುವ ಕುರಿತು ಚರ್ಚೆ ನಡೆಸಿತು. ಇಂತಹ ಚಟುಟಿಕೆ ಮುಂದುವರೆಯಬೇಕಿದ್ದರೆ ಅನುಸರಿಸಬೇಕಾದ ಕೆಲ ನಡಾವಳಿಗಳ ಬಗ್ಗೆ ಪರಿಶೀಲಿಸಿತು ಎಂದು ತಿಳಿದು ಬಂದಿದೆ.
ಹೋರಿ ಬೆದರಿಸುವ ಸ್ಫರ್ಧೆಯನ್ನು ನಿಷೇಧಿಸುವುದು ಸುಲಭವಲ್ಲ. ಆದರೆ ಸ್ಪರ್ಧೆಯ ವೇಳೆ ಹೋರಿಗಳಿಗೆ ಹಾಗೂ ಹೋರಿ ಹಿಡಿಯಲು ನಿಂತಿರುವ ತಂಡದ ರಕ್ಷಣೆ ದೃಷ್ಟಿಯಿಂದ ಆಡಳಿತ ಕೆಲವೊಂದು ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

