ಇಂದು ಬಂಗಾರಪ್ಪರಿಗೆ ನುಡಿ ನಮನ
ಕ.ಪ್ರ.ವಾರ್ತೆ, ಸೊರಬ, ಡಿ. 25
ಸಾಮಾನ್ಯ ಜನ ಸಮುದಾಯದಲ್ಲಿ ಬೆಳೆದ, ಅವರಿಂದಲೇ ಮೇಲೆ ಬಂದ ಎಸ್. ಬಂಗಾರಪ್ಪ ಅವರ ಎರಡನೆ ವರ್ಷದ ಪುಣ್ಯ ಸ್ಮರಣೆ ಬುಧವಾರ ಪಟ್ಟಣದ ಬಂಗಾರಧಾಮದಲ್ಲಿ ನಡೆಯಲಿದೆ.
ಜನಸಮುದಾಯವೇ ನನ್ನ ದೊಡ್ಡಶಕ್ತಿ ಎಂದು ನಂಬಿದ್ದ ಅವರ ಚಿಂತನೆಗೆ ಧಕ್ಕೆ ತಾರದ ರೀತಿಯಲ್ಲಿ ನಡೆದುಕೊಳ್ಳುವ ಇರಾದೆ ಇರಿಸಿಕೊಂಡಿರುವ ಎಸ್. ಬಂಗಾರಪ್ಪ ಪ್ರತಿಷ್ಠಾನ ಈ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಜನ ಸಮುದಾಯವೇ ಮುಖ್ಯ ಅತಿಥಿಗಳು, ಅವರೇ ಉದ್ಘಾಟಕರು ಎಂದು ಹೇಳಲಾಗಿದೆ.
ವರ್ಣರಂಜಿತ, ಬಹುಮುಖಿ, ಪರೋಕ್ಷ ಚುನಾವಣೆ ಇಷ್ಟಪಡದ, ರಾಜ್ಯ ಕಂಡ ಅಪರೂಪದ ರಾಜಕಾರಣಿ ಬಂಗಾರಪ್ಪ ಅವರ ಅಭೀಪ್ಸೆಯಂತೆ ಈ ಭಾರಿಯೂ ಕಲ್ಪವೃಕ್ಷ ಕಾರ್ಯಕ್ರಮದಡಿಯಲ್ಲಿ ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಇದೇ ವೇಳೆ ಮಲೆನಾಡು ಶೈಲಿಗೆ ಪೂರಕವಾಗುವಂತೆ ಯೋಜಿಸಲಾದ ಸ್ಮರಣ ಮಂದಿರದ ಶಂಕುಸ್ಥಾಪನೆಯೂ ನೆರವೇರಲಿದೆ. ಸ್ಥಳೀಯ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಲಿದೆ.
ಅಪರೂಪದ ರಾಜಕಾರಣಿ: ಸೊರಬ ತಾಲೂಕು ಕುಬಟೂರಿನ ಕಲ್ಲಪ್ಪ, ಕಲ್ಲಮ್ಮ ದಂಪತಿಗಳಿಗೆ 1933ರಲ್ಲಿ ಜನಿಸಿದ ಬಂಗಾರಪ್ಪ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಕನ್ನಡ ಐಚ್ಚಿಕ ಬಿಎ, ಕಾನೂನು ಪದವಿ ಪಡೆದರು.
1968ರಲ್ಲಿ ರಾಜ್ಯ ವಿಧಾನಸಭೆ ಪ್ರವೇಶಿಸಿದ ಅವರು 1978ರಲ್ಲಿ ರಾಜ್ಯ ಗೃಹ ಸಚಿವರಾಗಿದ್ದರು. 79ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು.
80ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, 1981ರಲ್ಲಿ ಕಂದಾಯ ಮತ್ತು ಕೃಷಿ ಸಚಿವರಾಗಿ, 85-87ರಲ್ಲಿ ವಿರೋಧ ಪಕ್ಷದ ನಾಯಕರಾಗಿ ನಂತರ 90ರಲ್ಲಿ ಕೃಷಿ ಮತ್ತು ತೋಟಗಾರಿಕಾ ಸಚಿವರಾಗಿದ್ದರು. 90-92ರಲ್ಲಿಯೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು 96ರಲ್ಲಿ ಲೋಕಸಭೆಗೆ ಪ್ರವೇಶಿಸಿದರು. ನಂತರದ ಕಾಲದಲ್ಲಿ ಹಲವಾರು ಏಳು ಬೀಳಿನ ಬೆಳವಣಿಗೆಯ ಮೂಲಕ ಸದಾ ಚಾಲ್ತಿಯಿದ್ದ ಬಂಗಾರಪ್ಪ 2011ರಲ್ಲಿ ನಿಧನರಾದರು.
ನುಡಿ ನಮನ: ಎಸ್. ಬಂಗಾರಪ್ಪ ಅವರ ಹೆಸರಿನಲ್ಲಿ ಆರಂಭಿಸಲಾಗಿರುವ ಪ್ರತಿಷ್ಠಾನ ಅವರ ಹೆಸರು ಉಳಿಸುವ ಕಾರ್ಯದಲ್ಲಿ ತೊಡಗಿದೆ.
ಶಾಸಕ ಮಧು ಬಂಗಾರಪ್ಪ ಅವರ ಆಸಕ್ತಿಯಿಂದ ಹುಟ್ಟಿರುವ ಈ ಪ್ರತಿಷ್ಠಾನವು ಹಿಂದೊಮ್ಮೆ ರಾಜ್ಯದಲ್ಲಿ ಬರ ಬಂದಿದ್ದಾಗ ಬಂಗಾರಪ್ಪ ಅವರು ಬಿತ್ತನೆ ಬೀಜ ವಿತರಿಸಿದ್ದನ್ನು ನೆನಪಿಸುವಂತೆ ಬುಧವಾರ ತೆಂಗಿನ ಸಸಿಗಳ ಉಚಿತ ವಿತರಣೆ ಕಾರ್ಯವನ್ನೂ ಹಮ್ಮಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

