ನೀತಿ, ಮಾನವೀಯ ವ್ಯಕ್ತಿತ್ವದ ಡಿಸೋಜ
ಕ.ಪ್ರ.ವಾರ್ತೆ ಟಿ ಸಾಗರ ಟಿ ಡಿ.29
ನೀತಿ ಮತ್ತು ಮಾನವೀಯತೆ ಡಿಸೋಜ ವ್ಯಕ್ತಿತ್ವದ ಬಹುಮುಖ್ಯ ಗುಣ ಎಂದು ಲೇಖಕ ಅ.ರಾ. ಶ್ರೀನಿವಾಸ್ ಅಭಿಪ್ರಾಯಪಟ್ಟರು.
80ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಡಾ.ನಾ. ಡಿಸೋಜ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಗರಸಭೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಡಿಸೋಜ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ನೀತಿ ಹಾಗೂ ಮಾನವೀಯತೆಯ ಕಾರಣಕ್ಕಾಗಿಯೇ ಡಿಸೋಜ ಅವರು ಲೋಕೋಪಯೋಗಿಯಂತಹ ಇಲಾಖೆಯಲ್ಲಿದ್ದೂ ಶುದ್ಧಹಸ್ತರಾಗಿರಲು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ನೋವು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ ಎಂದರು.
ಡಿಸೋಜ ಅವರದ್ದು ಜಾತಿ, ಧರ್ಮದ ಕಟ್ಟನ್ನು ಮೀರಿದ ವ್ಯಕ್ತಿತ್ವ. ದೊಡ್ಡವರಾಗಿ ಬೆಳೆದಿದ್ದರೂ ಸಣ್ಣವರಾಗಿ ಉಳಿಯುವ ದೊಡ್ಡತನ ಅವರದ್ದು. ತಮ್ಮ ವ್ಯಕ್ತಿತ್ವದ ಮೂಲಕವೇ ಅವರು ನಾಡಿನೆಲ್ಲಡೆ ಪ್ರಜ್ಞಾವಲಯವನ್ನು ಸೃಷ್ಟಿಸಿದ್ದಾರೆ. ಸಾಹಿತಿಯಾಗಿದ್ದುಕೊಂಡು ಸಾಮಾಜಿಕ ಬದ್ಧತೆ ಇಟ್ಟುಕೊಂಡವರು. ಸಾಮಾಜಿಕ ಸಮಸ್ಯೆಗಳಿಂದ ದೂರ ನಿಲ್ಲದೆ ಅದರೊಳಗಿದ್ದುಕೊಂಡು ನ್ಯಾಯಕ್ಕಾಗಿ ಹೋರಾಡಿದವರು ಎಂದು ಹೇಳಿದರು.
ಡಿಸೋಜಾ ಅವರನ್ನು ಅಭಿನಂದಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಜನಜೀವನ, ಆಚರಣೆ, ಪರಿಸರ ಸೇರಿದಂತೆ ವಿವಿಧ ಪ್ರಕಾರಗಳನ್ನು ಪ್ರತಿನಿಧಿಸುವ ಸಾಹಿತ್ಯ ಕೃಷಿ ಮಾಡಿರುವ ನಾ.ಡಿಸೋಜ ನಮ್ಮ ನಡುವಿನ ಓರ್ವ ಅಪರೂಪದ ಸಾಹಿತಿ ಎಂದು ಹೇಳಿದರು.
ನಾ.ಡಿಸೋಜ ಅವರ ಸಾಹಿತ್ಯ ಕೃಷಿ ವಿಸ್ಮಯಕಾರಿಯಾದದ್ದು. ಅವರು ಯಾವುದೋ ಕಾಲೇಜಿನ ಪ್ರೊಫೆಸರ್ ಅಲ್ಲ. ಸಾಮಾನ್ಯ ಸರ್ಕಾರಿ ನೌಕರರಾಗಿದ್ದುಕೊಂಡು ನಮ್ಮ ನಡುವಿನ ಸಂಗತಿಗಳನ್ನು, ಮುಳುಗಡೆಯ ಸಂಕಷ್ಟವನ್ನು, ಹಸಲರು, ದೀವರು ಜನಾಂಗದ ಆಚಾರವಿಚಾರಗಳನ್ನು ಅಧ್ಯಯನ ಮಾಡಿ ಅವುಗಳಿಗೆ ಸಾಹಿತ್ಯ ರೂಪ ನೀಡಿದ್ದಾರೆ. ನಮ್ಮ ನೆಲದ ಗುಣವನ್ನು, ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರಹಗಳ ಮೂಲಕ ದಾಖಲಿಸಿದ್ದಾರೆ ಎಂದರು.
ಸಾಹಿತಿಯೋರ್ವ ತಾನು ವಾಸಿಸುವ ಸಮಾಜವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಂತರ ತಾನು ಕೃಷಿ ಮಾಡುವ ಮಾಧ್ಯಮದ ಮೂಲಕ ಅದನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಆಗ ಪರಿವರ್ತನೆಗೆ ಕಾರಣವಾಗಬಹುದು. ಅಂತಹ ಕೆಲಸವನ್ನು ನಾ.ಡಿಸೋಜ ಅವರು ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಸ್ಥಾನ ನಾ.ಡಿಸೋಜ ಅವರಿಗೆ ಸಿಕ್ಕಿರುವುದು ನಮ್ಮ ಜಿಲ್ಲೆಗೆ ಸಂದ ಹೆಮ್ಮೆಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ನಾ.ಡಿಸೋಜ ಇತ್ತೀಚಿನ ದಿನಗಳಲ್ಲಿ ನಮ್ಮ ಜನರಲ್ಲಿ ಭಾಷೆಯ ಬಗ್ಗೆ ನಿರಾಸಕ್ತಿ ಹೆಚ್ಚುತ್ತಿದೆ. ನಾವು ಭಾಷೆಯನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಆಗುತ್ತದೆ. ನಮ್ಮ ಭಾಷೆಯನ್ನು ನನ್ನದು ಎನ್ನುವ ಮನೋಭಾವ ಜಾಗಣತವಾಗಬೇಕಾಗಿದೆ. ಕನ್ನಡದ ಭಾಷೆಗೆ ಉರುಳು ಹಾಕಿ ಇಂಗ್ಲಿಷ್ ಭಾಷೆ ಬೆಳೆಸಬಾರದು ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಆರ್. ನಾಗಭೂಷಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಬಸವರಾಜ್ ಹಾಜರಿದ್ದರು. ಜಿ.ನಾಗೇಶ್ ಸ್ವಾಗತಿಸಿದರು. ಶಿವಯೋಗಿ ವಂದಿಸಿದರು. ವಿ.ಶಂಕರ್ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸ್ಯಾಕ್ಸೋಫೋನ್ ಕಲಾವಿದ ಶ್ರೀಧರ ಸಾಗರ್ ಅವರಿಂದ ಸ್ಯಾಕ್ಸೋಫೋನ್ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

