ಶಿವಮೊಗ್ಗ

ಬಿದರಕ್ಕಿ ಬಂದೈತೆ... ಬರಗಾಲ ಬರ್ತೈತೆ...

Published On :

ಕ.ಪ್ರ.ವಾರ್ತೆ , ಸೊರಬ , ಡಿ.26
ಇದು ಶಕುನದ ಮಾತಲ್ಲ, ಬಿದಿರಕ್ಕಿಗೂ ಬರಗಾಲಕ್ಕೂ ನಂಟಿದೆ. ಗ್ರಾಮಾಂತರ ಪ್ರದೇಶದಲ್ಲಿ ಬಿದರಕ್ಕಿ ಬಂದರೆ ರಾಜನ್ ಹಾಯುವುದು ಎನ್ನುತ್ತಾರೆ. ರಾಜಾನ್ನವೆ ರಾಜನ್, ರಾಜಾನ್ನ ಎಂದರೆ ಅತ್ಯಂತ ಶ್ರೇಷ್ಠವಾದ ಅನ್ನ ಎಂಬ ಅರ್ಥವಿದೆ.
ಬರಗಾಲ, ರಾಜನ್ ನೆಂಟರು- ರಾಜನ್ ಹಾಯುತ್ತಿದೆ ಎಂದರೆ ಬೆಳೆಗೆ ಬರಗಾಲ ಬಂದಂತೆ ಎಂಬ ನಂಬುಗೆ ಇರುವಲ್ಲಿ ಅರ್ಥವೂ ಇದೆ. ಈ ವೇಳೆ ಬಿದಿರಕ್ಕಿಯನ್ನು ತಿನ್ನುವ ಇಲಿ, ಹೆಗ್ಗಣಗಳು ಹೆಚ್ಚು ಮರಿ ಹಾಕುವ ಸಾಮರ್ಥ್ಯ ಪಡೆಯುತ್ತವೆ. ಅಂತೆಯೇ ಇವುಗಳ ಸಂತತಿ ಅಧಿಕವಾಗುತ್ತದೆ. ಹೀಗೆ ರೈತನ ಶತ್ರು ಇಲಿ, ಹೆಗ್ಗಣಗಳು ಅತಿಯಾದರೆ ಬೆಳೆ ಕುಂಠಿತಗೊಳ್ಳುತ್ತವೆ.
ಈ ವೇಳೆ ತಿನ್ನಲು ಬತ್ತ ದೊರಕದೆ ಬಿದಿರಕ್ಕಿಯನ್ನು ತಿನ್ನುವ ಅನಿವಾರ್ಯತೆ ಬಂದದ್ದರಿಂದ ಬಿದರಕ್ಕಿ ಬಿಡಲಾರಂಬಿಸಿದರೆ ಬರಗಾಲ ಬರುತ್ತದೆ ಎಂಬ ನಂಬಿಕೆ, ಆತಂಕವಿದೆ.  
ಬಿದಿರು ಕ್ಷಾಮ: ಬಿದಿರಿನ ಕೆಲವು ಪ್ರಭೇದಗಳಲ್ಲಿ 60-120 ವರ್ಷಕ್ಕೊಮ್ಮೆ ಈ ರೀತಿ ಹೂ ಬಿಡುವುದು ವಿಶೇಷವೂ ಹೌದು. ಇಲ್ಲಿ ಬೆಳೆಯುವ ಬಿದಿರು 30 ವರ್ಷಕ್ಕೊಮ್ಮೆ ಹೂ ಬಿಡುತ್ತವೆ. ಹೂ ಬಿಟ್ಟು ಕಾಯಿ ಆದ ಬಳಿಕ ನಶಿಸುತ್ತವೆ. ಹಾಗಾಗಿಯೇ ಬಿದರಕ್ಕಿ ಬಂದಿದೆ ಎಂದರೆ ಅದನ್ನು ಬಿದಿರಿನ ಕ್ಷಾಮವೆಂತಲೇ ಹೇಳಲಾಗುತ್ತದೆ.
ಈ ನಿಟ್ಟಿನಲ್ಲಿ ಇಂತಹ ನೈಸರ್ಗಿಕ ಪ್ರಕ್ರಿಯೆಯ ನಡುವೆ ಪರಿಸರ ಸಮತೋಲನಕ್ಕೆ ಅನುಸರಿಸಬೇಕಾದ್ದು ಏನು ಎಂಬ ಅರಿವು ಪ್ರಸ್ತುತದ ದಿನಗಳಲ್ಲಿ ತೀರಾ ಅಗತ್ಯವಿದೆ.
ಜೀವ ವೈವಿಧ್ಯತೆಗೆ ದಕ್ಕೆ: ಕಾಡಿನ ಕೆಳ ಸ್ತರದಲ್ಲಿ ಬೆಳೆಯುವ ಕ್ಷಾಮ ತಗುಲಿದ ಬಿದಿರನ್ನು ಕಟಾವು ಮಾಡದೇ ಇದ್ದಲ್ಲಿ ಬೆಂಕಿ ತಗುಲಿ ತಾನು ಸುಡುವುದರ ಜೊತೆಗೆ ಉರಿಯುವ ಬೊಂಬು ಸಿಡಿದು ಸಮೀಪದ ಸಹಜ ಕಾಡು ನಾಶವಾಗುವ ಸಂಭವವಿರುತ್ತದೆ.
ಈ ರೀತಿ ನಾಶವಾಗುವ ವೇಳೆ ಅಪರೂಪದ ಅಣಬೆ, ಶಿಲೀಂಧ್ರಗಳು, ಪಿಟ್ ವೈಪರ್‌ನಂತಹ ಹಾವುಗಳು, ಹಕ್ಕಿ, ಹುಳ ಹುಪ್ಪಟೆಗಳು, ಅಪಾರ ಪ್ರಮಾಣದ ಜೀವ ಪ್ರಭೇದಗಳು  ಕಣ್ಮರೆಯಾಗುವ ಸಾಧ್ಯತೆಯಿದೆ. ಪ್ಲೇಗ್, ಟೈಫಾಯ್ಡ್‌ನಂತಹ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಇರುತ್ತದೆ.
ಮಾಡಬೇಕಾದ್ದೇನು: ಮುಖ್ಯವಾಗಿ ಬಿದಿರು ಕ್ಷಾಮ ತಗುಲಿ ಒಣಗುವ ಮುನ್ನ ಕಟಾವು ಮಾಡುವ ಕಾರ್ಯವಾಗಬೇಕಿದೆ. ಸಹಜವಾಗಿ ಬೆಳೆಯುವ ನಮ್ಮ ಪರಿಸರದಲ್ಲಿನ ತಳಿಗಳನ್ನು ಮರು ವೃದ್ಧಿ ಮಾಡುವುದು ಸುಲಭವಲ್ಲ. ಬಹು ವೇಗವಾಗಿ ಬೆಳೆಯುವ ತಳಿಗಳಾಗಿರುವುರಿಂದ ಈಗ ಉದುರುವ ಬೀಜಗಳ ಪೋಷಣೆಗೆ ಪ್ರಮುಖ ಮುನ್ನೆಚ್ಚರಿಕೆ ಎಂದರೆ ಸುಡದಂತೆ ಕಾಯುವುದು ಅತ್ಯಂತ ಅಗತ್ಯವಾಗಿರುತ್ತದೆ.



-ಶ್ರೀಪಾದ ಬಿಚ್ಚುಗತ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.