ಆರ್ಕೆಸ್ಟ್ರಾಗೆ ಅನುಮತಿ ನಿರಾಕರಣೆ: ವಾಗ್ವಾದ
ಭದ್ರಾವತಿ: ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆರ್ಕೆಸ್ಟ್ರಾ ನಡೆಸಲು ಅನುಮತಿ ನೀಡಿಲ್ಲವೆಂಬ ಕಾರಣಕ್ಕೆ ಮಂಗಳವಾರ ವಿದ್ಯಾರ್ಥಿಗಳ ಗುಂಪು ಪಟ್ಟಣದ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆ ನಡೆಯಿತು.
ಸಿಟ್ಟಿಗೆದ್ದ ವಿದ್ಯಾರ್ಥಿಗಳು ಪ್ರಾಂಶುಪಾಲರ ಆಡಳಿತ ವೈಖರಿ ಟೀಕಿಸಿ ಕಾಲೇಜು ಅಭಿವೃದ್ಧಿ ಸಮಿತಿಯ ಲೆಕ್ಕಪತ್ರಗಳ ವಿವರ ಹಾಗೂ ಕಳೆದ ವರ್ಷ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಗಳ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಾವತಿಸಿದ್ದ ಉಮೇದುವಾರಿಕೆ ಶುಲ್ಕದಲ್ಲಿ ಉಳಿದಿದ್ದ 7500 ರು.ಗಳ ಲೆಕ್ಕವನ್ನು ಕೇಳತೊಡಗಿದಾಗ ವಾಗ್ವಾದ ಗಲಭೆಯಾಗಿ ಮಾರ್ಪಟ್ಟಿತು. ಈ ಬಾರಿ ಸಾಂಸ್ಕೃತಿಕ ವೇದಿಕೆಯ ಚುನಾವಣೆಯನ್ನು ನಡೆಸಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದರು.
ವಿಷಯ ತಿಳಿದು ಕಾಲೇಜಿಗೆ ಹೋದ ಸುದ್ದಿಗಾರರಿಗೆ ಕಾಲೇಜಿನ ಪ್ರಾಂಶುಪಾಲೆ ಟಿ.ಸಿ. ಭಾರತಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ನಡೆಸಲು ಕಾಲೇಜು ಆಡಳಿತವರ್ಗಕ್ಕೆ ಇಷ್ಟವಿರಲಿಲ್ಲ. ಸಾಂಸ್ಕೃತಿಕ ವೇದಿಕೆಯ ಚುನಾವಣೆ ನಡೆಸಲು ಕಾಲೇಜಿನಲ್ಲಿ ವಾತಾವರಣ ಸರಿ ಇರಲಿಲ್ಲ. ಕಾಲೇಜಿನಲ್ಲಿ ಮಚ್ಚು-ಲಾಂಗು ಸಂಸ್ಕೃತಿ ಹೆಚ್ಚಾಗಿದೆ. ಪೊಲೀಸರೇ ಚುನಾವಣೆ ನಡೆಸುವುದು ಬೇಡವೆಂದು ಸಲಹೆ ನೀಡಿದ ಮೇರೆಗೆ ಚುನಾವಣೆಯನ್ನು ರದ್ದುಪಡಿಸಿದೆವು ಎಂದು ತಿಳಿಸಿದರು.
ಟೆಂಡರ್ ಪ್ರಕ್ರಿಯೆ: ಈ ಸಂದರ್ಭದಲ್ಲಿ ಕಾಲೇಜಿಗೆಂದು ಖರೀದಿಸಿದ ಜನರೇಟರ್ ಬಗ್ಗೆ ಟೆಂಡರ್ ಪ್ರಕ್ರಿಯೆ ಏಕೆ ನಡೆಸಿಲ್ಲವೆಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಟೆಂಡರ್ ಪ್ರಕ್ರಿಯೆ ಅಗತ್ಯ ಕಾಲೇಜಿಗೆ ಇಲ್ಲ, ಯುಜಿಸಿ ಮಾರ್ಗಸೂಚಿಯಂತೆ ಹಾಗೂ ಕೇಂದ್ರ ಸರ್ಕಾರದ ಜಿಡಿಎಸ್ ಅಂಡ್ ಡಿ ನಿಯಮದಂತೆ ನೋಂದಾಯಿತ ವ್ಯಾಪಾರಿಗಳಿಂದ ನಾವು ಖರೀದಿಸಿದ್ದೇವೆಂದು ಉತ್ತರಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿದ್ದಲಿಂಗಪ್ಪ ಈ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚಿಸಿಲ್ಲವೆಂದು ಆಕ್ಷೇಪವೆತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರು ಕಾಲೇಜಿನ ಖರೀದಿ ಸಮಿತಿ ಇದೆ ಅದು ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಚರ್ಚಿಸುವ ಅಗತ್ಯವಿಲ್ಲವೆಂದು ಉತ್ತರಿಸಿದರು.
9 ಮಂದಿ ಡಿ ದರ್ಜೆ ನೌಕರರು ಕೆಲಸ ಮಾಡುವ ಕಾಲೇಜಿನ ಪ್ರಾಂಗಣ ಧೂಳು ಮಯವಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿರದೆ ಅದರಲ್ಲಿ ಊಟ ಮಾಡಿ ಕೈ ಮತ್ತು ಪಾತ್ರೆಗಳನ್ನು ತೊಳೆದ ಕುರುಹುಗಳು ಕಂಡುಬಂದವು. ತರಗತಿಗಳಲ್ಲಿ ಲೈಟು ಹಾಗೂ ಫ್ಯಾನ್‌ಗಳಿಲ್ಲ. ಶೌಚಾಲಯ ಸ್ವಚ್ಛತೆಯಿಲ್ಲದೆ ಒಳಗೆ ಹೋಗುವುದು ಕಷ್ಟವೆನಿಸುವಂತಿತ್ತು. ಇವೆಲ್ಲವನ್ನೂ ಪ್ರಶ್ನಿಸುತ್ತೇವೆಂದೇ ಪ್ರಾಂಶುಪಾಲರು ಸಾಂಸ್ಕೃತಿಕ ವೇದಿಕೆಯ ಚುನಾವಣೆ ನಡೆಸುತ್ತಿಲ್ಲವೆಂಬುದು ವಿದ್ಯಾರ್ಥಿ ಮುಖಂಡರಅಹವಾಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

