ಶಿವಮೊಗ್ಗ

ರೈತನ ತುತ್ತಿನ ಚೀಲದ ಮೇಲೆ ಸರ್ಕಾರಿ ಮಹಲು

Published On :

ಆಯನೂರು: ವಿದ್ಯೆ ತಲೆಗೆ ಹತ್ತಿದವರಲ್ಲ, ಕೈಯಲ್ಲಿ ನಾಲ್ಕು ಕಾಸೂ ಇಲ್ಲ, ಹೋರಾಟಕ್ಕೆ ಗಟ್ಟಿ ದನಿಯೂ ಇಲ್ಲ. ಇದು ಆಯನೂರಿನಲ್ಲಿ ಭೂಮಿ ಕಳೆದುಕೊಂಡ 130 ರೈತ ಕುಟುಂಬಗಳ ಕರಾಳ ಸ್ಥಿತಿ.
 ಭಾನುವಾರ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆಯನೂರಿನಲ್ಲಿ 15ಕ್ಕೂ ಹೆಚ್ಚು ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಯೋಜನೆಗಳು ಅನುಷ್ಠಾನಕ್ಕೆ ಬರುವ ಜಾಗ 130 ರೈತ ಕುಟುಂಬಗಳ ತುತ್ತಿನ ಚೀಲವಾಗಿದ್ದ ಕೃಷಿ ಭೂಮಿಯ ಮೇಲೆ ಎಂಬುದು ವಿಪರ್ಯಾಸ.
 ಕಳೆದ 4-5 ದಶಕದಿಂದ ಕೃಷಿ ಮಾಡಿಕೊಂಡು(ಬಗರ್‌ಹುಕುಂ) ಬಂದಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಕುಟುಂಬಗಳು ಇಲ್ಲಿವೆ. ಇದೀಗ ಯಾವುದೇ ಮಾಹಿತಿ ನೀಡದೇ ಈ ಜಾಗದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಅತ್ಯಾಸಕ್ತಿ ತೋರಿದ್ದಾರೆ. ಪರಿಣಾಮ ತಲಾ 1-2 ಎಕರೆ ಭೂಮಿಹೊಂದಿದ್ದ ಈ ಬಡ ಕುಟುಂಬಗಳು ಅಕ್ಷರಶಃ ಬೀದಿಗೆ ಬೀಳಲಿವೆ.
ಗಟ್ಟಿ ದನಿ ಇಲ್ಲ: ರಾಜ್ಯದ ವಿವಿಧೆಡೆ ರೈತರ ಒಕ್ಕಲೆಬ್ಬಿಸುವ ಸಂದರ್ಭ ಬಂದಾಗ ರಾಜಕೀಯ ನಾಯಕರು, ಸ್ವಾಮೀಜಿಗಳು ಮುಂದೆ ಬಂದಿದ್ದರು. ಆದರೆ, ಇಲ್ಲಿನ ರೈತರಿಗೆ ಯಾವ ಶಕ್ತಿಯೂ ಇಲ್ಲವಾಗಿದೆ. ಹೋರಾಟದ ಮುಂದಾಳತ್ವಕ್ಕೆ ಗಟ್ಟಿ ದನಿಯೇ ಇಲ್ಲವಾಗಿದೆ.
 ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಶಾರದಾ ಪೂರ್ಯಾನಾಯ್ಕ ಅವರು ರೈತರೊಂದಿಗೆ ಹಾಗೆ ಬಂದು ಹೀಗೆ ಹೋಗಿದ್ದು ಬಿಟ್ಟರೆ, ಉಳಿದವರು ಇತ್ತ ಸುಳಿದಿಲ್ಲ. ಹೀಗಾಗಿ ರೈತರ ದನಿಯೇ ಅಡಗಿ ಹೋಗಿದೆ. ಆಕಾಶ ಕಳಚಿಬಿದ್ದವರಂತೆ ಕಂಡಬರುತ್ತಾರೆ.
ಚಪ್ಪಡಿ ಎಳೆದರು: 40-45 ವರ್ಷದಿಂದ ಇಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಎಲ್ಲರೂ ಸಣ್ಣ ರೈತರು. ಜೋಳ, ರಾಗಿ, ಬತ್ತ ಬೆಳೆಯಲಾಗುತ್ತಿದ್ದೇವೆ. ಇಲ್ಲಿ ಬಂದ ಬೆಳೆಯಿಂದ ವರ್ಷಕ್ಕೆ 20-30 ಸಾವಿರ ಉಳಿಸಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಜನಪ್ರತಿನಿಧಿಗಳ ಒತ್ತಾಸೆಗೆ ಬಿದ್ದು, ಹಣದಾಸೆಗೆ ಮಾರುಹೋಗಿ ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯಲಾಗುತ್ತಿಲ್ಲ, ಅದು ಹುಲ್ಲುಬನಿ ಎಂದು ಸ್ಥಳೀಯ ಕಂದಾಯ ಅಧಿಕಾರಿಗಳು ಷರಾ ಬರೆದಿದ್ದಾರೆ. ಪರಿಣಾಮ ಇದು ಸರ್ಕಾರಿ ಜಾಗವೆಂದು ದಾಖಲೆಯೂ ಸೃಷ್ಟಿಯಾಗಿದೆ ಎಂದು ಷಣ್ಮುಖ ನಾಯ್ಕ ಬೇಸರ ವ್ಯಕ್ತಪಡಿಸುತ್ತಾರೆ.
 ಲಂಬಾಣಿ ಜನಾಂಗದವರೇ ಹೆಚ್ಚಾಗಿ ಇಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಬಗರ್ ಹುಕುಂ ಜಾಗವನ್ನು ತಮಗೆ ಖಾತೆ ಮಾಡಿಕೊಡುವಂತೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಅದರಂತೆ ದಾಖಲಾತಿ ಪ್ರಕ್ರಿಯೆಯೂ ನಡೆದಿತ್ತು. 1994ರಲ್ಲಿ 34 ರೈತರಿಗೆ ಹಕ್ಕು ಕೂಡ ಪ್ರಾಪ್ತವಾಗಿದೆ. ಈ ಮಧ್ಯೆ ಉಳಿದ ರೈತರಿಗೆ ಹಕ್ಕುಪತ್ರ ನೀಡುವ ಹಂತದಲ್ಲಿತ್ತು. ಕಂದಾಯ ಎಷ್ಟು ಕಟ್ಟಬೇಕು, ದಂಡವೆಷ್ಟು ಸೇರಿದಂತೆ ಬೇರೆ ಶುಲ್ಕ ಕಟ್ಟಬೇಕೆಂಬುದೂ ನಿಗದಿಯಾಗಿತ್ತು. ಈ ಮಧ್ಯೆ ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳು ಈ ಜಾಗದಲ್ಲಿ ಸರ್ಕಾರಿ ಯೋಜನೆ ಅನುಷ್‌ಠಾನಕ್ಕೆ ಮುಂದಾಗಿದ್ದಾರೆ. ಈ ಮೂಲಕ ಕೈಯಲ್ಲಿದ್ದ ತುತ್ತು, ಊಟವಿದ್ದ ತಟ್ಟೆಯನ್ನೇ ಕಸಿದಿದ್ದಾರೆ ಎಂಬುದು ರೈತರ ನೇರ ಆರೋಪ.
 ನಮ್ಮ ಕೃಷಿ ಭೂಮಿ ಹೊರತಾಗಿ ಸರ್ಕಾರಿ ಭೂಮಿಯೇ ಸಾಕಷ್ಟು ಸುತ್ತಮುತ್ತ ಇದೆ. ಹೀಗಿರುವಾಗ ಹಕ್ಕುಪತ್ರ ಕೈಸೇರುವ ಸಂದರ್ಭದಲ್ಲಿ ಭೂಮಿ ಕಸಿದುಕೊಂಡಿದ್ದು ಎಷ್ಟು ಸರಿ ಎಂದು ರೈತರು ದಾಖಲೆಯನ್ನು ಪ್ರದರ್ಶಿಸುತ್ತಾರೆ. ಅನೇಕ ರೈತರು ಜಮೀನು ಕಳೆದುಕೊಳ್ಳುವ ಶಾಕ್‌ನಿಂದ ಹೊರಬಂದಿಲ್ಲ.
ಏನೆಲ್ಲಾ ಯೋಜನೆ: ಸೈನಿಕ ತರಬೇತಿ ಶಾಲೆ, ಸಾಯ್ ಕ್ರೀಡಾಂಗಣ, ಎಸ್ಸಿಎಸ್ಟಿ ವಿದ್ಯಾರ್ಥಿನಿಲಯ, ಮಾದರಿ ಶಾಲೆ, ವಿಜ್ಞಾನ ಕೇಂದ್ರ, ಅಗಸ್ತ್ಯ ಫೌಂಡೇಶನ್ ಚಟುವಟಿಕೆ, ಬಸ್ ನಿಲ್ದಾಣ, ತಾಲೂಕು ಮಟ್ಟದ ಕ್ರೀಡಾಂಗಣ, ಪಾರ್ಕ್, ತಾರಾಲಯ, ಐಟಿಐ, ಅತಿಥಿಗೃಹ ಇತ್ಯಾದಿ ಯೋಜನೆಗಳು ಇಲ್ಲಿ ಬರಲಿವೆ.
 ಈ ಪೈಕಿ ಹಾಲಿ ಇರುವ ಶಾಲೆಯ ಕ್ರೀಡಾಂಗಣವನ್ನೇ ತಾಲೂಕು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸುವುದು ಹಾಗೂ ಈ ಶಾಲೆಯಲ್ಲೇ ವಿಜ್ಞಾನ ಕೇಂದ್ರ ಆರಂಭಿಸುವ ಯೋಜನೆ ಇದೆ. ಹೀಗಿರುವಾಗ ಪ್ರತ್ಯೇಕ ಜಾಗ ಏಕೆ ಎಂಬ ಪ್ರಶ್ನೆ ಒಂದಾದರೆ, ಹಾಲಿ ಬಸ್ ನಿಲ್ದಾಣದ ಹಿಂಬದಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ ಮಾಡಲು ಜಾಗ ನಿಗದಿಮಾಡಲಾಗಿದೆ. ಮತ್ತೆ ಕೇಂದ್ರ ಪ್ರದೇಶದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಜಾಗದಲ್ಲಿ ಬಸ್ ನಿಲ್ದಾಣಕ್ಕೇಕೆ ಜಾಗ ನಿಗದಿಮಾಡಲಾಗಿದೆ. ಈ ನಿರ್ಧಾರ ಹಲವು ಅನುಮಾನಕ್ಕೆಡೆಮಾಡಿದೆ ಎಂದು ರೈತರು ಹೇಳುತ್ತಾರೆ.
- ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.