ಪದವೀಧರ ಸಹಕಾರ ಸಂಘದಿಂದ ಸಹಕಾರಿ ಆಸ್ಪತ್ರೆ
ಶಿವಮೊಗ್ಗ: ಬ್ಯಾಂಕಿಂಗ್ ವ್ಯವಹಾರದಲ್ಲಿ ತೊಡಗಿದ್ದ ನಗರದ ಪದವೀಧರ ಸಹಕಾರ ಸಂಘ ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದು, ಸಹಕಾರಿ ಆಸ್ಪತ್ರೆಯನ್ನು ಆರಂಭಿಸುತ್ತಿದೆ. ಈ ಮೂಲಕ ರಾಜ್ಯದ ಮೂರನೇ ಸಹಕಾರಿ ಆಸ್ಪತ್ರೆ ಇದಾಗಿರುತ್ತದೆ.
ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶ ಇಟ್ಟುಕೊಂಡು ಕುವೆಂಪು ರಸ್ತೆಯಲ್ಲಿರುವ ಸಂಘದ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಲಾಗುತ್ತಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಯೋಜನೆ ಕುರಿತು ವಿವರಣೆ ನೀಡಿದ ಆಸ್ಪತ್ರೆ ಸಮಿತಿ ಅಧ್ಯಕ್ಷ ಡಾ. ಸತೀಶ್ ಕುಮಾರ್ ಶೆಟ್ಟಿ ಹಾಗೂ ಎಸ್.ಪಿ. ದಿನೇಶ್, 23ರಂದು ಸಂಜೆ 4 ಗಂಟೆಗೆ ಆಸ್ಪತ್ರೆಯನ್ನು ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸುವರು ಎಂದು ತಿಳಿಸಿದರು.
ರಜತ ಮಹೋತ್ಸವ: ಸಹಕಾರಿ ವಲಯದಲ್ಲಿ ಜಿಲ್ಲೆಯಲ್ಲೇ ಇದು ಪ್ರಥಮ ಆಸ್ಪತ್ರೆಯಾಗಿದೆ. ಸಂಘ 195-96ರಲ್ಲಿ ತನ್ನ ರಜತ ಮಹೋತ್ಸವ ಆಚರಿಸಿದ ಸಂದರ್ಭದಲ್ಲೇ ತನ್ನ ಸದಸ್ಯರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸಹಕಾರಿ ಆಸ್ಪತ್ರೆ ಸ್ಥಾಪಿಸುವ ಘೋಷಣೆ ಮಾಡಿತ್ತು. ಅದು ಈಗ ಈಡೇರಿದಂತಾಗಿದೆ ಎಂದು ತಿಳಿಸಿದರು.
ಈ ಆಸ್ಪತ್ರೆಯಲ್ಲಿ ಜನರಲ್ ಮೆಡಿಸನ್(ಕನ್ಸಲ್ಟಿಂಗ್ ಫಿಜಿಷಿಯನ್), ಪಿಡಿಯಾಟ್ರಿಕ್ಸ್, ಆರ್ಥೋಪಿಡಿಕ್, ಜನರಲ್ ಸರ್ಜರಿ, ಗೈನಕಾಲಜಿ ಸೇವೆ ದೊರೆಯಲಿದೆ. ಹೊರ ರೋಗಿಗಳ ಸೇವೆಯ ಜೊತೆ ಸುಸಜ್ಜಿತ ಪ್ರಯೋಗಾಲಯ ಮತ್ತು ರಿಯಾಯಿತಿ ದರದಲ್ಲಿ ಔಷಧಾಲಯಗಳ ಸೇವೆಯೂ ಇಲ್ಲಿ ಲಭ್ಯವಿರುತ್ತದೆ.
ರಿಯಾಯಿತಿ: ಸಂಘದ ಸದಸ್ಯರಿಗೆ ಎಲ್ಲಾ ಪರೀಕ್ಷೆಗಳಲ್ಲಿ ಶೇ.30ರಷ್ಟು ಮತ್ತು ಸಂಘದ ಸದಸ್ಯರಲ್ಲದವರಿಗೆ ಶೇ.20ರಷ್ಟು ರಿಯಾಯಿತಿ ಇರುತ್ತದೆ. ಕಡಿಮೆ ದರದಲ್ಲಿ ಉತ್ತಮ ಸೇವೆ ಒದಗಿಸುವುದು ತಮ್ಮ ಉದ್ದೇಶ ಎಂದ ಅವರು ಪ್ರವೇಶ ಶುಲ್ಕ ಸದಸ್ಯರಿಗೆ 60 ರುಪಾಯಿ ಹಾಗೂ ಹೊರಗಿನವರಿಗೆ 80 ರುಪಾಯಿ ನಿಗದಿಪಡಿಸಲಾಗಿದೆ. ಹೊರ ರೋಗಿಗಳ ವಿಭಾಗವು ಪ್ರತಿ ದಿನ ಮಧ್ಯಾಹ್ನ 12ರಿಂದ 2.30ರವರೆಗೆ ಹಾಗೂ ಸಂಜೆ 6ರಿಂದ 8.30ರವರೆಗೆ ತೆಗೆದಿರುತ್ತದೆ ಎಂದು ತಿಳಿಸಿದರು.
ಯಂತ್ರೋಪಕರಣ: 25 ಲಕ್ಷ ರುಪಾಯಿ ವೆಚ್ಚದಲ್ಲಿ ಆಸ್ಪತ್ರೆ ಸಿದ್ಧಪಡಿಸಲಾಗಿದೆ, 1 ಕೋಟಿ ರುಪಾಯಿ ವೆಚ್ಚದ ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ಇದಕ್ಕಾದ ವೆಚ್ಚವನ್ನು ಸಂಘದ ಲಾಭದ ಹಣದಲ್ಲಿಯೇ ಬಳಸಿಕೊಳ್ಳಲಾಗುತ್ತಿದೆ ಎಂದು ದಿನೇಶ್ ವಿವರಿಸಿದರು. ಎರಡು ತಿಂಗಳಿಗೊಮ್ಮೆ ಆಸ್ಪತ್ರೆಯು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಉದ್ದೇಶ ಹೊಂದಿದೆ ಎಂದ ಅವರು, ಸಂಘದ ಸದಸ್ಯರಿಗೆ ಜಿಸಿಎಸ್ ಹೆಲ್ತ್ ಕಾರ್ಡ್ ವಿತರಿಸುವ ಯೋಜನೆ ಇದೆ. ಕಾರ್ಡ್ ಹೊಂದಿದ ಸದಸ್ಯರು ಮತ್ತು ಕುಟುಂಬದವರು ರಿಯಾಯಿತಿ ದರದಲ್ಲಿ ಚಿಕಿತ್ಸೆ, ವಿವಿಧ ಪರೀಕ್ಷೆಗಳು ಮತ್ತು ಸೇವೆಗಳನ್ನು ಪಡೆಯಬಹುದು.
ಆ್ಯಂಬುಲೆನ್ಸ್ ಸೇವೆ: ಸಂಘದ ಮೊದಲ ಮಹಡಿಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಿ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ನೀಡುವ ಗುರಿ ಇದ್ದು, ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಬೆಂಗಳೂರು, ಮಣಿಪಾಲದ ಆಸ್ಪತ್ರೆಗಳಿಗೆ ಕರೆದೊಯ್ಯಲು ಬೇಕಾಗುವ ಸುಸಜ್ಜಿತ ವೆಂಟಿಲೇಟರ್ ಆ್ಯಂಬುಲೆನ್ಸ್ ಸೇವೆ ಒದಗಿಸುವ ಯೋಜನೆ ಸಂಘ ಹೊಂದಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

