ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ
ಹೊಸನಗರ: ಹಿನ್ನೀರು ನಿಲ್ಲಿಸಿ ವಿದ್ಯುತ್ ಉತ್ಪಾದನೆ ಮೂಲಕ ಕೋಟ್ಯಂತರ ರೂ. ಆದಾಯ ಗಳಿಸುತ್ತಿರುವ ಸರ್ಕಾರಕ್ಕೆ ಸಂಪರ್ಕ ಸೇತುವೆ ನಿರ್ಮಿಸುವುದು ದೊಡ್ಡ ಕೆಲಸವಲ್ಲ. 5 ದಶಕದ ಬೇಡಿಕೆಗೆ ಸ್ಪಂದಿಸಿ ಇಲ್ಲವಾದಲ್ಲಿ ಶರಾವತಿ ಹಿನ್ನೀರಿಗೆ ಜಿಗಿದು ಪ್ರಾಣತ್ಯಾಗಕ್ಕೂ ಸಿದ್ಧ. ಎಂಬ ಎಚ್ಚರಿಕೆಯನ್ನು ಹಿನ್ನೀರು ನಿವಾಸಿಗಳು ಸರ್ಕಾರಕ್ಕೆ ರವಾನಿಸಿದ್ದಾರೆ.
ನಿಟ್ಟೂರು ಗ್ರಾಪಂ ವ್ಯಾಪ್ತಿಯ ಹಸಿರುಮಕ್ಕಿ ಹಿನ್ನೀರು ಪ್ರದೇಶದಲ್ಲಿ ಶರಾವತಿ ಸಂತ್ರಸ್ಥರ ಹೋರಾಟ ಸಮಿತಿ ನೇತೃತ್ವ ವಹಿಸಿದ್ದ ಹಸಿರುಮಕ್ಕಿ ಸೇತುವೆ ಬೇಡಿಕೆಯ ಪ್ರತಿಭಟನೆಯಲ್ಲಿ ಹಿನ್ನೀರು ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೇತುವೆ ನಿರ್ಮಾಣಕ್ಕೆ ಪೂರಕ: ಹಸಿರುಮಕ್ಕಿ ಪ್ರದೇಶ ಸೇತುವೆ ನಿರ್ಮಾಣಕ್ಕೆ ಪೂರಕವಾಗಿದೆ. ಸೇತುವೆ ನಿರ್ಮಾಣವಾದರೆ ಈ ಭಾಗದ ಜನರ ಬದುಕು ಕೊಂಚ ಸಧಾರಿಸುತ್ತದೆ. ಅಲ್ಲದೆ ಶಿವಮೊಗ್ಗ, ಉಡುಪಿ ಜಿಲ್ಲೆಗಳ ಸಂಪರ್ಕ ಸುಗಮಗೊಳ್ಳುತ್ತದೆ. ಮಾತ್ರವಲ್ಲದೆ ಸಾಗರ ಪೇಟೆಯ ಸಂಪರ್ಕ ಹಿನ್ನೀರು ನಿವಾಸಿಗಳಿಗೆ ಸುಗಮವಾಗುತ್ತದೆ. ಸುಮಾರು 40 ಕಿ.ಮೀ ಕಡಿಮೆಯಾಗುವುದರಿಂದ ಇಂಧನ ಉಳಿತಾಯವಾಗುತ್ತದೆ ಆದರೆ ಇಷ್ಟೆಲ್ಲ ಪೂರಕ ವಾತಾವರಣ ವಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಾದಯಾತ್ರೆ: ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸಾಗರ ತಾಲೂಕಿನ ಹುಲಿದೇವರ ಬನದಿಂದ ಹಸಿರುಮಕ್ಕಿ ಮತ್ತು ್ಡಹೊಸನಗರ ತಾಲೂಕಿನ ಕೆ.ಬಿ. ಸರ್ಕಲ್ನಿಂದ ಹಸಿರುಮಕ್ಕಿಗೆ ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿದರು.
ನಿಟ್ಟೂರು, ಅರಮನೆಕೊಪ್ಪ, ಹೊಸೂರು, ಕುದುರೂರು, ಆವಿನಹಳ್ಳಿ, ಕೋಳೂರು, ಶಂಕಣ್ಣ ಶ್ಯಾನಬೋಗೆ ಸೇರಿದಂತೆ ಸಾಗರ, ಹೊಸನಗರ, ಕೊಲ್ಲೂರು ಭಾಗದಿಂದ ಒಟ್ಟು 11 ಗ್ರಾಪಂ ವ್ಯಾಪ್ತಿಯ ಜನ ಸ್ವಯಂಪ್ರೇರಿತರಾಗಿ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಸೇತುವೆ ಎಷ್ಟು ಅನಿವಾರ್ಯ ಎಂಬುದನ್ನು ಪ್ರಚುರಪಡಿಸಿದಂತಿತ್ತು.
ಮನವಿ ಸ್ವೀಕಾರ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಸಿ ಸೂಚನೆ ಮೇರೆಗೆ ಸಾಗರ ತಹಸೀಲ್ದಾರ್ ರಾಜಣ್ಣ ಹಸಿರುಮಕ್ಕಿ ಪ್ರದೇಶಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.
ಇದು ಸಾಂಕೇತಿಕ ಪ್ರತಿಭಟನೆ. ಕಳೆದ ಎರಡೂವರೆ ದಶಕದಿಂದ ಸೇತುವೆಗಾಗಿ ವಿವಿಧ ರೀತಿಯಲ್ಲಿ ಸರ್ಕಾರದ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಇನ್ನು ಕಣ್ಮುಚ್ಚಿ ಕುಳಿತರೆ ಸುಮ್ಮನಿರುವವರು ನಾವಲ್ಲ ಎಂಬ ಸಂದೇಶ ರವಾನಿಸಲು ಪ್ರತಿಭಟಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಹೋರಾಟ ಸಮಿತಿ ಘೋಷಿಸಿದೆ.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ, ಮಾಜಿ ಸದಸ್ಯ ಬಿ.ಆರ್. ಜಯಂತ್, ಹೋರಾಟ ಸಮಿತಿ ಗೌರವಾಧ್ಯಕ್ಷ ಗಾಂಜಾಳ ರಾಮಚಂದ್ರರಾವ್, ಅಧ್ಯಕ್ಷ ಕೊಳಕಿ ಲಕ್ಷ್ಮಿನಾರಾಯಣ, ಕಾರ್ಯದರ್ಶಿ ಕೂಡ್ಲುಕೊಪ್ಪ ಸುರೇಶ್, ದೊಡ್ಲೆಪಾಲ್ ಚಂದ್ರಶೇಖರ್, ಶ್ರೀಕರ್, ಚಂದ್ರಶೇಖರ ಶೆಟ್ಟಿ, ಶಿವರಾಮ ಶೆಟ್ಟಿ, ನಾಗೇಂದ್ರ, ಕೆ.ಬಿ. ಲಿಂಗಪ್ಪ ಸೇರಿದಂತೆ ಗ್ರಾಪಂ ಅಧ್ಯಕ್ಷರು ಸದಸ್ಯರು ಸಂಘಟನಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

