ಶಿವಮೊಗ್ಗ

ಶಿಕ್ಷಕರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ

Published On :

ಶಿವಮೊಗ್ಗ: ಉದ್ಯೋಗದಲ್ಲಿ ಇಚ್ಛಾಶಕ್ತಿ ಹೊಂದಿ ಉತ್ತಮ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಆಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಕರ್ತವ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಗುರುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವಿಷ್ಯದ ಪ್ರಜೆಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರು ಯಾರ ಬಳಿಯು ಕೈಚಾಚದೇ ಬದುಕುವಂತೆ ವೇತನ, ರಜಾದಿನಗಳು ಹಾಗೂ ಇತರೆ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ಅಸಮಾಧಾನ: ಪ್ರಸ್ತುತ ಇದು ಸ್ಪರ್ಧಾತ್ಮಕ ಯುಗ. ಪ್ರತಿಯೊಬ್ಬರು ಹೊಸ- ಹೊಸ ವಿಷಯಗಳನ್ನು ಶಿಕ್ಷಕರು ಕಲಿತು ವಿದ್ಯಾರ್ಥಿಗಳಿಗೆ ಕಲಿಸುತ್ತಿರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ಕರ್ತವ್ಯ ಶಿಕ್ಷಕರದ್ದು ಎಂದ ಅವರು, ಆಡಳಿತ ಪಕ್ಷದಲ್ಲಿ ಗೆದ್ದ ನಾನು ನಿಮ್ಮ ಬೇಡಿಕೆಗಳನ್ನು ಆಲಿಸುವಂತೆ ಆಡಳಿತ ಮಾಡುವವರಿಗೇ ಹೇಳುವುದು ಸ್ಪಲ್ಪ ಕಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ: ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಇಂದು ಶಾಲೆ ಮಕ್ಕಳ ಆಸಕ್ತಿ ಕೇಂದ್ರವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ವಿದ್ಯಾಭ್ಯಾಸ ಕಡೆ ಗಮನಹರಿಸುವಂತೆ ಮಾಡಿ, ಅವರನ್ನು ಮನೆಯಿಂದ ಶಾಲೆಗೆ ಕರೆತರುವ ಹೊಣೆ ಶಿಕ್ಷಕರ ಮೇಲಿದೆ. ನಿಮ್ಮ ಬೋಧನೆ, ಅನುಭವಗಳು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು ಎಂದರು.
ವಿದೇಶದ ಶಿಕ್ಷಣ ಕ್ಷೇತ್ರದ ಪ್ರಯೋಗಳನ್ನು ರಾಜ್ಯದಲ್ಲಿ ತರುವುದು, ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕಿಂತ ಅವರ ಶಾಲೆಗಳಲ್ಲೇ ಶಿಕ್ಷಕರಿಗೆ ಹೆಚ್ಚಿನ ಬೋಧನೆಗೆ ಅವಕಾಶ ಮಾಡಿಕೊಡಿ ಎಂದು ಸರ್ಕಾರಕ್ಕೆ ಮನವರಿಕೆ ಮಾಡುವುದಾಗಿ ತಿಳಿಸಿದರು.
ಚರ್ಚಿಸಿ ಸೂಕ್ತ ಪರಿಹಾರ: ಗೋವಿಂದ ಅವರ ವರದಿಯಲ್ಲಿ ಮಹಿಳಾ ಶಿಕ್ಷಕರ ಸಮಸ್ಯೆಗಳನ್ನು ಉಲ್ಲೇಖ ಮಾಡಿಲ್ಲ. ಆದರೆ, ಮಹಿಳಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಸದಸ್ಯೆ ಗಾಯಿತ್ರಿ ಷಣ್ಮುಖಪ್ಪ, ರೇಣುಕಮ್ಮ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಅರುಣ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ. ಗಣಪತಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಡಿ.ಕೆ. ದಿವಾಕರ ಮತ್ತಿತರರು ಇದ್ದರು.

ನೋಟಿಸ್ ಬಂದ ಕೂಡಲೇ ಸೂಕ್ತ ಉತ್ತರ: ಬಿವೈಆರ್
ಶಿವಮೊಗ್ಗ: ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ತಮಗೆ ಬಿಜೆಪಿ ಹೈಕಮಾಂಡ್‌ನಿಂದ ಈ ವರೆಗೆ ಯಾವುದೆ ನೋಟಿಸ್ ಬಂದಿಲ್ಲ, ನೋಟಿಸ್ ನೀಡಿದರೆ, ಅದಕ್ಕೆ ತಕ್ಷಣ ಸೂಕ್ತ ಉತ್ತರ ನೀಡುವುದಾಗಿ ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಘಟಕದಿಂದ ಶಿಫಾರಸ್ಸು ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಈ ಕುರಿತು ಕೇಂದ್ರ ಮುಖಂಡರು ನೋಟಿಸ್ ನೀಡಿದರೆ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.
ಆಹ್ವಾನ ಬಂದಿಲ್ಲ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕೆಜೆಪಿಯಿಂದ ಈವರೆಗೆ ಆಹ್ವಾನ ಬಂದಿಲ್ಲ. ಒಂದು ವೇಳೆ ಬಂದರೆ ನಂತರ ಅದರ ಬಗ್ಗೆ ನಂತರ ತೀರ್ಮಾನ ಮಾಡಲಾಗುವುದು. ಆಹ್ವಾನದ ಬಗ್ಗೆ ಯಾರಾದರೂ ಹೇಳಿಕೆ ನೀಡಿದ್ದರೆ ಅವರನ್ನು ಪ್ರಶ್ನಿಸುವುದು ಸೂಕ್ತ ಎಂದು ತಿಳಿಸಿದರು.
ಮಧು ಸುಮ್ಮನಿರಲಿ: ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾತನಾಡುವ ನೈತಿಕತೆ ಜೆಡಿಎಸ್‌ನ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರಿಗಿಲ್ಲ ಎಂದು ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
 ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಮಧು ಬಂಗಾರಪ್ಪ ಪದೇಪದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇದು ಅವರ ರಾಜಕೀಯ ಜೀನವನಕ್ಕೆ ಸರಿಹೊಂದುವುದಿಲ್ಲ. ಎಸ್. ಬಂಗಾರಪ್ಪ ಅವರ ಬಗ್ಗೆ ಅವರ ಮಕ್ಕಳಿಗಿಂತ ನಮಗೆ ಹೆಚ್ಚಿನ ಗೌರವರವಿದೆ. ಅದನ್ನು ಹಾಳು ಮಾಡಿಕೊಳ್ಳುವಂತ ಕೆಲಸ ಮಧು ಅವರಿಂದ ಆಗುವುದು ಬೇಡ ಎಂದರು.
 ಮಧು ಬಂಗಾರಪ್ಪ ಅವರಿಗೆ ರಾಜಕೀಯದ ಚಳುವಳಿ, ಹೋರಾಟಗಳ ಬಗ್ಗೆ ತಿಳಿದಿಲ್ಲ ಎಂದ ಅವರು, ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಮಧು ಬಂಗಾರಪ್ಪ ಅವರು ಹೇಳಿಕೆಗಳನ್ನು ನೀಡಿದರೆ, ಅದಕ್ಕೆ ತಕ್ಕ ಉತ್ತರ ಕೊಡಲು ನಮಗೂ ಗೊತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.