ಶಿವಮೊಗ್ಗ

ನಿಸ್ವಾರ್ಥ ಸೇವೆಯ ವೈದ್ಯರನ್ನು ಗೌರವಿಸಿ

Published On :

ಕ.ಪ್ರ.ವಾರ್ತೆ  ಸಾಗರ  ಜು.2 ರೋಗಿಯ ಬದುಕು ಹಸನುಗೊಳಿಸಲು ವೈಯಕ್ತಿಕ ಸುಖಸಂತೋಷ ಮರೆತು ನಿಸ್ವಾರ್ಥ  ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರ ಬಗ್ಗೆ ಸಮಾಜ ಗೌರವಾದರ ಹೊಂದಿರಬೇಕು ಎಂದು ಸಾಹಿತಿ ಡಾ. ನಾ. ಡಿಸೋಜ ಹೇಳಿದರು.
  ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸೋಮವಾರ ವೈದ್ಯ ದಿನಾಚರಣೆ ಅಂಗವಾಗಿ ಸಿಬ್ಬಂದಿಯಿಂದ  ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು, ಆಸ್ಪತ್ರೆ ವೈದ್ಯರನ್ನು ಸನ್ಮಾನಿಸಿ ಮಾತನಾಡಿದರು.
ಒತ್ತಡದ ಕಾರ್ಯದಿಂದ ಹಾನಿ: ವೈದ್ಯರು ಒತ್ತಡದಲ್ಲಿ ಕಾರ್ಯ ನಿರ್ವಹಿಸಿದರೆ ವೃತ್ತಿ ಹಾಗೂ ವ್ಯಕ್ತಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಒತ್ತಡ ರಹಿತವಾಗಿ ಕಾರ್ಯನಿರ್ವಹಿಸುವ ವಾತಾವರಣವನ್ನು ನಾವು ಸೃಷ್ಟಿಸಬೇಕು.
ಇತ್ತೀಚೆಗೆ ವೈದ್ಯರು ಹಾಗೂ ಆಸ್ಪತ್ರೆ ಮೇಲೆ ಹಲ್ಲೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ಸಮಾಜದಿಂದ ವಿಮುಖರಾಗುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಸ್ವಾಸ್ಥ್ಯ ರಕ್ಷಿಸುವ ಕಾರ್ಯ ಮಾಡುತ್ತಿರುವ ವೈದ್ಯರ ರಕ್ಷಣೆಯ ಭಾರ ನಮ್ಮ ಮೇಲಿದೆ ಎಂದು ಹೇಳಿದರು.
ಆರೋಗ್ಯ ಪೂರ್ಣ: ಊರಿನಲ್ಲಿ ಒಳ್ಳೆಯ ಆಸ್ಪತ್ರೆ ಹಾಗೂ ಒಳ್ಳೆಯ ವೈದ್ಯರು ಇದ್ದಾಗ ಅಂತಹ ಊರು ಆರೋಗ್ಯಪೂರ್ಣವಾಗಿರುತ್ತದೆ. ಬದುಕಿನುದ್ದಕ್ಕೂ ಜನರ ಆರೋಗ್ಯದ ಬಗ್ಗೆ ಗಮನಹರಿಸುವ ವೈದ್ಯರನ್ನು ಪ್ರೀತಿ, ವಿಶ್ವಾಸದಿಂದ ನಡೆಸಿಕೊಂಡಾಗ ಅವರಿಂದ ಹೆಚ್ಚಿನ ಸೇವೆ ಪಡೆಯಬಹುದು. ಇಂತಹ ದಿನಾಚರಣೆಗಳ ಮೂಲಕ ಆತ್ಮವಲೋಕನ ನಡೆಯಬೇಕು ಎಂದರು.
  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ, ಸಮಾಜಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡ ವೈದ್ಯರನ್ನು ಸ್ಮರಿಸುವ ಇಂತಹ ದಿನಾಚರಣೆಯನ್ನು ಅರ್ಥಪೂರ್ಣವಾಗಿಸುವ ಹೊಣೆ ಎಲ್ಲರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ವೈದ್ಯರು ಹಾಗೂ ರೋಗಿಗಳ ನಡುವಿನ ಮಾನವೀಯ ಸಂಬಂಧ ದೂರವಾಗುತ್ತಿದೆ ಎಂದರು.
ದೃಷ್ಟಿ ಬದಲಾಗಲಿ: ಹಲವು ಸಂದರ್ಭದಲ್ಲಿ ವೈದ್ಯರು ತಾವು ಮಾಡದ ತಪ್ಪಿಗೂ ಸಾರ್ವಜನಿಕರಿಂದ ನಿಂದನೆಗೆ ಒಳಗಾಗಬೇಕಾಗುತ್ತದೆ. ಜೀವ ಉಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ವೈದ್ಯರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು ಎಂದು ಹೇಳಿದರು.
  ಉಪವಿಭಾಗೀಯ ಆಸ್ಪತ್ರೆಯ ಡಾ.ಬಿ.ಜಿ. ಸಂಗಂ, ಡಾ. ಪ್ರಕಾಶ್ ಬೋಸ್ಲೆ, ಡಾ. ವಾಸುದೇವ್, ಡಾ. ಮಂಜುನಾಥ ಪ್ರಸಾದ್, ಡಾ. ಶ್ರೀನಿವಾಸ್, ಡಾ. ರಾಜು, ಡಾ. ಜಯಲಕ್ಷ್ಮೀ, ಡಾ. ಪ್ರತಿಮಾ, ಡಾ. ಸ್ಮಿತಾ ಅವರನ್ನು ಸನ್ಮಾನಿಸಲಾಯಿತು.
ಉಪವಿಭಾಗೀಯ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಲೋಹಿತ್ ಸ್ವಾಗತಿಸಿದರು. ಮೌನೇಶ್ ವಂದಿಸಿದರು. ವೈ. ಮೋಹನ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.