ಮಂಡಗದ್ದೆ ಗ್ರಾಮಸ್ಥರಿಗೆ ಸಂಕಷ್ಟ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.2
ಮಂಡಗದ್ದೆ ಎಂಬ ಪಕ್ಷಿಗಳ ಊರಿನ ಅಂತಿಮ ದಿನಗಳು ಹತ್ತಿರವಾಗುತ್ತಿವೆ. ಈ ಗ್ರಾಮದ ಮನೆಗಳನ್ನು ತೆರವುಗೊಳಿಸುವ ದಿನಗಳು ಹತ್ತಿರ ಬರುತ್ತಿದ್ದಂತೆ ತುಂಗಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಆತಂಕ ಹೆಚ್ಚಾಗುತ್ತಿದೆ.
ಗ್ರಾಪಂ ಮಂಡಗದ್ದೆ ನಿವಾಸಿಗಳಿಗೆ ಕೂಡಲೇ ಮನೆಗಳನ್ನು ತೆರವು ಮಾಡುವಂತೆ ತಮಟೆ ಪ್ರಚಾರಕ್ಕೆ ಮುಂದಾಗಿದ್ದು, ಅವರಿಗೀಗ ಉಳಿದಿರುವುದು ಕೇವಲ 8 ದಿನ ಮಾತ್ರ. ಜುಲೈ 10ರೊಳಗೆ ಮಂಡಗದ್ದೆ ಗ್ರಾಮಸ್ಥರು ಜಾಗ ತೆರವು ಮಾಡಬೇಕಾಗಿದೆ.
ಅವಕಾಶ ನೀಡಿ: ಇದರಿಂದ ಆತಂಕಗೊಂಡಿರುವ ಮಂಡಗದ್ದೆಯ ಸಂತ್ರಸ್ತರು ಮಂಗಳವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರನ್ನು ಭೇಟಿಯಾಗಿ ಮಳೆಗಾಲ ಮುಗಿಯುವ ವರೆಗೂ ಅವಕಾಶ ನೀಡುವಂತೆ ಒತ್ತಾಯಿಸಿದರು. ಇಲ್ಲಿರುವ 30ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರವೇ ಸಿಕ್ಕಿಲ್ಲ. ಏಕೆಂದರೆ ಅವರು ಮನೆ ಕಟ್ಟಿಕೊಂಡಿರುವ ಜಾಗ ಬೇರೆಯವರಿಗೆ ಸೇರಿದ್ದು. 30-40 ವರ್ಷದ ಹಿಂದೆ ಇವರು ಮನೆ ಕಟ್ಟಿಕೊಳ್ಳುವಾಗ ಜಾಗ ಯಾರದ್ದು ಎಂದು ನೋಡುವುದಕ್ಕೇ ಹೋಗಿಲ್ಲ. ಮಾಲೀಕರೂ ಕೇಳುವುದಕ್ಕೆ ಹೋಗಿಲ್ಲ. ಈಗ ತೆರವುಗೊಳಿಸುವ ಸಮಯ ಬಂದಾಗ ಸಂಕಷ್ಟ ಶುರುವಾಗಿದೆ. ಮಂಡಗದ್ದೆ, ಕಣಗಾಲಕೊಪ್ಪ ಹಾಗೂ ಲಿಂಗಾಪುರದ ನಿವಾಸಿಗಳು ಕಷ್ಟಪಡುವಂತಾಗಿದೆ.
ತಮ್ಮದಲ್ಲದ ನಿವೇಶನದಲ್ಲಿ ಮನೆ ಕಟ್ಟಿಕೊಂಡವರಿಗೆ 2002ರ ಎಸ್ಆರ್ ದರದಂತೆ ಪರಿಹಾರ ನಿಗದಿ ಮಾಡಲಾಗಿತ್ತು. ಇವರಿಗೆ ಮೇಲ್ಛಾವಣಿ ಪರಿಹಾರ ಎಂದು, ಇದೂವರೆಗಿನ ಬಡ್ಡಿ ಸೇರಿಸಿ ಕೊಡುವಂತೆ ತೀರ್ಮಾನವಾಗಿತ್ತು. ಈ ಪರಿಹಾರ ಸಂತ್ರಸ್ತರಿಗೆ ಸಿಕ್ಕಿಲ್ಲ.
ಪರಿಹಾರ ಕೊಡಿ: ತೀರ್ಥಹಳ್ಳಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಂತ್ರಸ್ತರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡಗದ್ದೆಯ 40 ಕುಟುಂಬಗಳ ಬಳಿ ಸೂಕ್ತ ದಾಖಲೆಗಳೇ ಇಲ್ಲ. ಇದೇ ಕಾರಣದಿಂದ ಅವರಿಗೆ ಪರಿಹಾರ ನಿರಾಕರಿಸುವುದು ಸರಿ ಅಲ್ಲ. ಹೈಪವರ್ ಕಮಿಟಿಯ ತೀರ್ಮಾನಗಳು ಇನ್ನೂ ಸಾಕಷ್ಟು ಅನುಷ್ಠಾನವಾಗಿಲ್ಲ. ಸಚಿವ ಕಿಮ್ಮನೆ ರತ್ನಾಕರ್ ಅವರು ಈ ಬಗ್ಗೆ ಗಮನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಪವರ್ ಕಮಿಟಿ ತೀರ್ಮಾನದಂತೆ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಅಲ್ಲಿಯವರೆಗೂ ತೆರವುಗೊಳಿಸಬಾರದು ಎಂದು ಒತ್ತಾಯಿಸಿದ ಅವರು, ಮಳೆಗಾಲದಲ್ಲಿ ಮನೆ ಕೆಡವಿದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಇಲ್ಲಿಯೇ ಇದ್ದು ಜೀವನ ರೂಪಿಸಿಕೊಂಡವರನ್ನು ಮಾನವೀಯತೆಯಿಂದ ನೋಡಬೇಕು. ಅವರಿಗೆ ಸೂಕ್ತ ಪರಿಹಾರ ಕಲ್ಪಿಸಿಯೇ ಮನೆ ತೆರವುಗೊಳಿಸಬೇಕು ಎಂದರು.
ಸಚಿವ ಕಿಮ್ಮನೆ ಅವರು ಮನೆ ತೆರವಿಗೆ ನಾಲ್ಕು ತಿಂಗಳು ಅವಕಾಶ ಕೊಡುವುದಾಗಿ ಬಾಯಿಮಾತಿನಲ್ಲಿ ಹೇಳಿದ್ದಾರೆ. ಇನ್ನೊಂದೆಡೆ ನೀರಾವರಿ ಇಲಾಖೆಯು ಗ್ರಾಪಂಗೆ ಪತ್ರ ಬರೆದು ಜುಲೈ 10ರೊಳಗೆ ತೆರವುಗೊಳಿಸುವಂತೆ ಸೂಚನೆ ನೀಡಿದೆ. ಅವರು ಮನೆಗಳನ್ನು ಕೆಡವಲು ಸಿದ್ಧತೆ ನಡೆಸಿದ್ದಾರೆ. ಕಿಮ್ಮನೆ ರತ್ನಾಕರ್ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದರು. ಮನವಿ ಸಲ್ಲಿಸಿದ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಮುಖಂಡ ಸಾಲೇಕೊಪ್ಪ ರಾಮಚಂದ್ರ, ಗ್ರಾಮಸ್ಥರಾದ ಕೃಷ್ಣಮೂರ್ತಿ, ಅರುಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

