ಶಿವಮೊಗ್ಗ

ಮಳೆಗೆ 160 ಲಕ್ಷಕ್ಕೂ ಅಧಿಕ ನಷ್ಟ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.5
ಕಳೆದ 3 ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 160 ಲಕ್ಷಕ್ಕೂ ಅಧಿಕ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲಾಡಳಿತದ ಕಂದಾಯ ವಿಭಾಗದ ವಿಪತ್ತು ನಿರ್ವಹಣಾ ವಿಭಾಗದ ಅಂಕಿ ಅಂಶಗಳ ಪ್ರಕಾರ, 7 ತಾಲೂಕುಗಳ ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸುರಿದ ಮಳೆಯ ಪ್ರಮಾಣದಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಲ್ಲಿದ್ದಾರೆ.
ಸೊರಬ ತಾಲೂಕಿನ ಸರ್ವೆ ನಂ.18ರಲ್ಲಿರುವ ರಾಜ್ಯ ಹೆದ್ದಾರಿಯು ಮಳೆ ನೀರಿನಲ್ಲಿ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದ ಸುಮಾರು 1 ಕೋಟಿ ನಷ್ಟವಾಗಿದೆ. ಸಾಗರ ತಾಲೂಕಿನಲ್ಲಿ 5 ಕೆರೆ, ಶಿಕಾರಿಪುರ 1, ಸೊರಬದಲ್ಲಿ 6 ಕೆರೆ ಸೇರಿದಂತೆ 12 ಕೆರೆಗಳಿಗೆ ಹಾನಿಯಾಗಿದೆ. ಇದರಿಂದ 19 ಲಕ್ಷ ನಷ್ಟವಾಗಿದೆ. ಇತರೆ ತಾಲೂಕಿನ ಕೆರೆಗಳಿಗೆ ಉಂಟಾದ ಹಾನಿಯ ಬಗ್ಗೆ ಮಾಹಿತಿ ದೊರೆತಿಲ್ಲ.
ಸೊರಬ ತಾಲೂಕಿನಲ್ಲಿ ಆದ ಪ್ರವಾಹದಲ್ಲಿ ಮೂರು ಜಾನುವಾರುಗಳು, ಸಾಗರದಲ್ಲಿ 25 ಎಕರೆ ಕೃಷಿ ಭೂಮಿ ಮಳೆ ನೀರಿನಲ್ಲಿ ಜಲಾವೃತವಾಗಿದೆ.
ಇನ್ನು ಮಳೆಯಿಂದ ಸುಮಾರು 14 ಮನೆಗಳಿಗೆ ಹಾನಿಯಾಗಿದ್ದು, ಹೊಸನಗರದಲ್ಲಿ 6, ಶಿವಮೊಗ್ಗದಲ್ಲಿ 4, ಶಿಕಾರಿಪುರ ಹಾಗೂ ಸೊರಬ ತಾಲೂಕಿನಲ್ಲಿ 1 ಮನೆ ಹಾನಿಗಿಡಾಗಿವೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಅಬ್ಬರ ಇಳಿಮುಖ
ಜಿಲ್ಲೆಯಲ್ಲಿ ಮಳೆ ಅಬ್ಬರ ಸಂಪೂರ್ಣ ಇಳಿಮುಖವಾಗಿದ್ದು, ಉಕ್ಕಿ ಹರಿಯುತ್ತಿದ್ದ ತುಂಗಾ, ಭದ್ರಾ, ಶರಾವತಿ, ವರದಾ ಸೇರಿದಂತೆ ಪ್ರಮುಖ ನದಿಗಳು ಸಹಜ ಸ್ಥಿತಿಗೆ ಮರಳಿವೆ.
ಬುಧವಾರ ಆರ್ಭಟಿಸಿದ್ದ ಆರಿದ್ರಾ ಮಳೆ ಗುರುವಾರ ಕ್ಷೀಣಿಸಿದ್ದು, ಶುಕ್ರವಾರಕ್ಕೆ ಅಲ್ಲಲ್ಲಿ ತೋರುಗಾಣಿಕೆಗಷ್ಟೇ  ಮಳೆಯಾಯಿತು. ಶಿವಮೊಗ್ಗ ನಗರದ ಸೀಗೆಹಟ್ಟಿ ಬಳಿ ಮನೆಗಳಿಗೆ ನುಗ್ಗಿದ್ದ ನೀರು ಈಗ ಇಳಿಕೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಅದೇ ರೀತಿ ಶಿವಮೊಗ್ಗ -ತೀರ್ಥಹಳ್ಳಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಎಂದಿನಂತೆ ವಾಹನ ಸಂಚಾರ ಸುಗಮವಾಗಿ ಸಾಗಿದೆ.
ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ, ಶಿರೂರು, ಹೊದ್ಲ, ಅರಳಾಪುರ, ಮೇಳಿಗೆ ವ್ಯಾಪ್ತಿಯ ವಿವಿಧ ಕಡೆ ಮಳೆ ನೀರು ತೋಟ, ಗದ್ದೆ ಆವರಿಸಿಕೊಂಡಿದ್ದು, ಕೃಷಿಕರು ಆತಂಕಿತರಾಗಿದ್ದಾರೆ. ದಾಖಲೆ ಮಳೆ ಬೀಳುತ್ತಿದ್ದ ಹೊಸನಗರ ವ್ಯಾಪ್ತಿಯಲ್ಲೂ ಮಳೆ ಅಬ್ಬರ ಕಡಿಮೆಯಾಗಿದೆ. ಸಾಗರ ತಾಲೂಕಿನಲ್ಲಿ ಹರಿಯುವ ವರದಾ ನದಿಯ ಪ್ರವಾಹ ಕೂಡ ಇಳಿಮುಖವಾಗಿದೆ. ತಾಳುಗುಪ್ಪ ಹೋಬಳಿಯಲ್ಲಿ ಬುಧವಾರ ಬಿದ್ದ ಮಳೆಯನ್ನೇ ಅಲ್ಲಿನ ಜನ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೃಷಿ ಭೂಮಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಕೃಷಿಕರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಮಳೆ ಪ್ರಮಾಣ: ಶುಕ್ರವಾರ ಬೆಳಗ್ಗೆ 8ಗಂಟೆಯ ಮಾಹಿತಿಯಂತೆ (ಹಿಂದಿನ 24 ಗಂಟೆಗಳಲ್ಲಿ) ಆಗುಂಬೆಯಲ್ಲಿ 12 ಸೆಂಟಿಮೀಟರ್ ಮಳೆ ಸುರಿದಿದ್ದರೆ, ಲಿಂಗನಮಕ್ಕಿಯಲ್ಲಿ 7 ಸೆಂ.ಮೀ., ತಾಳಗುಪ್ಪ, ತೀರ್ಥಹಳ್ಳಿಯಲ್ಲಿ ತಲಾ 4 ಸೆಂ.ಮೀ., ಹೊಸನಗರ 3 ಸೆಂ.ಮೀ., ಸಾಗರ, ಹುಂಚದಕಟ್ಟೆಯಲ್ಲಿ ತಲಾ 1 ಸೆಂ.ಮೀ.ಮಳೆ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.