ಶಿವಮೊಗ್ಗ

ಬಾಲನ್ಯಾಯ ಕಾಯ್ದೆ ಅನುಷ್ಠಾನ ಅಗತ್ಯ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.5
ಬಹಳ ಹಿಂದೆಯೇ ಬಾಲನ್ಯಾಯ ಕಾಯ್ದೆ ಅನುಷ್ಠಾನಷ್ಟಾನಗೊಂಡಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಇದರ ಪರಿಣಾಮಕಾರಿ ಅನುಷ್ಠಾನಗೊಂಡಿಲ್ಲ. ಬಡತನ, ಅನಕ್ಷರತೆ ಹಾಗೂ ಸುತ್ತಲ ಪರಿಸರದ ಕಾರಣದಿಂದ ಮಕ್ಕಳು ದಾರಿತಪ್ಪುತ್ತಿದ್ದು, ಅವರನ್ನು ಸರಿದಾರಿಗೆ ಕರೆತರುವ ಜವಾಬ್ದಾರಿ ಪೋಷಕರು ಹಾಗೂ ನಾಗರಿಕ ಸಮಾಜದ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಅವರು ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಬಾಲನ್ಯಾಯ ಕಾಯ್ದೆ ಹಾಗೂ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಕಾನೂನು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಮುಖ ಘಟ್ಟ: ಬಾಲ್ಯಾವಸ್ಥೆ ಪ್ರತಿವ್ಯಕ್ತಿಯ ಜೀವನದಲ್ಲಿ ಪ್ರಮುಖ ಘಟ್ಟ. ಮಕ್ಕಳ ಮನಸ್ಸು ಮೃದು ಮತ್ತು ಕೋಮಲ, ಪೋಷಕರು ಅಥವಾ ಮಾರ್ಗದರ್ಶಕರು ಹೇಳುವ ಪ್ರತಿ ಮಾತುಗಳನ್ನು ಮಕ್ಕಳು ಸುಲಭವಾಗಿ ಗ್ರಹಿಸಿಕೊಳ್ಳುತ್ತಾರೆ ಅಲ್ಲದೇ ಅವರನ್ನು ಅನುಸರಿಸುತ್ತಾರೆ. ಈ ಭಾವನಾತ್ಮಕ ಸಂಬಂಧ ಮಕ್ಕಳ ಭವಿಷ್ಯಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುತ್ತವೆ ಎಂದರು.
ಇಂತಹ ಅವಧಿಯಲ್ಲಿ ಪೋಷಕರು ತಮ್ಮ ಮಕ್ಕಳು ದಾರಿತಪ್ಪದಂತೆ ಗಮನಹರಿಸಿ, ಉತ್ತಮ ಸಂಸ್ಕಾರ ನೀಡಿದಲ್ಲಿ ಉತ್ತಮ ಪ್ರಜೆಗಳನ್ನಾಗಿ ಸೃಷ್ಟಿಸಬಹುದು. ತಪ್ಪ್ಪಿದಲ್ಲಿ ಪೋಷಕರ ನಿರ್ಲಕ್ಷದಿಂದ ಹಾಗೂ ಸಹವಾಸ ದೋಷದಿಂದ ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಾರೆ ಎಂದರು.
ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಮತ್ತು ಅವರ ರಕ್ಷಣೆಗೆ ಸೂಕ್ತ ವಾತಾವರಣ ನಿರ್ಮಾಣವಾಗಬೇಕಾಗಿರುವುದು ಇಂದಿನ ಅಗತ್ಯಗಳಲ್ಲೊಂದು ಎಂದವರು ಹೇಳಿದರು.
ಬಾಲಾಪರಾಧಿಗಳನ್ನು ವಯಸ್ಕ ಅಪರಾಧಿಗಳ ರೀತಿಯಲ್ಲಿ ನಡೆಸಿಕೊಳ್ಳುವಂತಿಲ್ಲ. ಅಲ್ಲದೇ ಅವರನ್ನು ಜೈಲಿನಲ್ಲಿಡುವುದು ಸರಿಯಾದ ವಿಧಾನವಲ್ಲ ಬದಲಾಗಿ ಅವರಿಗೆ ಪ್ರತ್ಯೇಕ ಸ್ಟೇ ಹೋಂಗಳಲ್ಲಿ ಉಳಿಸಬೇಕೆಂದರು.
ಸೂಕ್ತ ಮಾರ್ಗದರ್ಶನ: ಕಾರ್ಯಾಗಾರದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನಾಗೇಶ್, ದಾರಿತಪ್ಪಿದ ಮಕ್ಕಳಿಗೆ ಶಿಕ್ಷೆ ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುವುದಿಲ್ಲ, ಬದಲಾಗಿ ಮಕ್ಕಳ ಮನಸ್ಸಿನಲ್ಲಿ ಸೇಡು, ದ್ವೇಷ-ಅಸೂಯೆಯ ಭಾವನೆ ಹೆಚ್ಚುತ್ತದೆ. ಆದ್ದರಿಂದ ಅವರ ಪ್ರಚೋದನಾತ್ಮಕ ಕಾರಣಗಳ ಬಗ್ಗೆ ಹಾಗೂ ಅವರ ಮಿತ್ರರ ಒಡನಾಟ ಗಮನಿಸಿ, ಸಕಾಲಿಕವಾಗಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಈ ಕಾಯ್ದೆಯ ಅನುಷ್ಠಾನದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದ ಅವರು, ಪೋಷಕರು ಕೂಡ ಮಕ್ಕಳನ್ನು ನೈತಿಕವಲ್ಲದ ಚಟುವಟಿಕೆಗಳಿಗೆ ಉತ್ತೇಜಿಸುತ್ತಿದ್ದಾರೆ. ಪೋಷಕರು ಇಂತಹ ಅಚಾತುರ್ಯಗಳಿಗೆ ಅವಕಾಶ ನೀಡುವ ಮೊದಲು ಒಮ್ಮೆ ಗಂಬೀರವಾಗಿ ಆಲೋಚಿಸುವುದು ಒಳಿತು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀಕಾಂತಮ್ಮ ಹಾಗೂ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಬಿ. ದಯಾಳು ಅವರು ಆಗಮಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ರವಿ ಎಂ. ನಾಯ್ಕ ಆಗಮಿಸಿ, ಉಪನ್ಯಾಸ ನೀಡಿದರು.
ಇನ್ಸ್‌ಪೆಕ್ಟರ್ ಚನ್ನಕೇಶವ ಸ್ವಾಗತಿಸಿದರು. ಇನ್ಸ್‌ಪೆಕ್ಟರ್, ಹಿರಿಯ ಮಕ್ಕಳ ಕಲ್ಯಾಣಾಧಿಕಾರಿ ಓಂಕಾರನಾಯ್ಕ ಅವರು ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.