ಅರಸಾಳುವಿನಲ್ಲೂ ರೈಲು ನಿಲ್ಲಿಸಿ
ಕ.ಪ್ರ.ವಾರ್ತೆ ಶಿವಮೊಗ್ಗ ಜು.6
ತಾಳಗುಪ್ಪ-ಶಿವಮೊಗ್ಗ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ನೇತೃತ್ವದಲ್ಲಿ ಗ್ರಾಮಸ್ಥರು ಶನಿವಾರ ನೈಋತ್ಯ ರೈಲ್ವೆವಲಯದ ಡಿವಿಜನಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಿದರು.
ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದಲ್ಲಿ ಈ ಹಿಂದೆ ರೈಲ್ವೆ ಮೀಟರ್ ಗೇಜ್ ಮಾರ್ಗವಿದ್ದು, ರೈಲ್ವೆ ನಿಲುಗಡೆ ಮತ್ತು ಟಿಕೆಟ್ ಬುಕಿಂಗ್ ವ್ಯವಸ್ಥೆಯಿತ್ತು. ಆದರೆ, ಶಿವಮೊಗ್ಗ ತಾಳಗುಪ್ಪ ರೈಲ್ವೆ ಮಾರ್ಗವು ಬ್ರಾಡ್ಗೇಜ್ಗೆ ಪರಿವರ್ತನೆಯಾದ ಸಂದರ್ಭದಲ್ಲಿ ಈಗ ಹಾಲಿ ಸಂಚರಿಸುವ ತಾಳಗುಪ್ಪ-ಶಿವಮೊಗ್ಗ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಅರಸಾಳು ಗ್ರಾಮದಲ್ಲಿ ನಿಲ್ಲಿಸುತ್ತಿಲ್ಲ ಎಂದು ಗ್ರಾಮಸ್ಥರು ಮನವಿಯಲ್ಲಿ ದೂರಿದ್ದಾರೆ.
ಮುಂದಿನ ಪ್ರಯಾಣಕ್ಕೆ ಅನುಕೂಲ: ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ, ಯಾತ್ರಾ ಸ್ಥಳಗಳಾದ ಹುಂಚ, ಕೊಲ್ಲೂರು, ಸಿಗಂಧೂರು ಹಾಗೂ ಕುಂದಾಪುರ, ಉಡುಪಿಗೆ ಪ್ರಯಾಣ ಬೆಳೆಸುವವರಿಗೆ ಅರಸಾಳು ಬಳಿ ರೈಲು ನಿಲುಗಡೆ ಕೊಟ್ಟಲ್ಲಿ ಅನುಕೂಲವಾಗುತ್ತದೆ.
ಅಲ್ಲದೆ ಅರಸಾಳಿನಲ್ಲಿ ರೈಲು ನಿಲ್ಲಿಸುವುದರಿಂದ ಪಕ್ಕದಲ್ಲಿಯೇ ಹೊನ್ನಾಳಿ, ಬೈಂದೂರು ರಸ್ತೆಯಿದ್ದು, ಮುಂದೆ ಪ್ರಯಾಣ ಬೆಳೆಸಲು ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ವಿವರಿಸಿದ್ದಾರೆ. 2013-14ರ ರೈಲ್ವೆ ಬಜೆಟ್ನಲ್ಲಿ ಶಿವಮೊಗ್ಗ- ತಾಳಗುಪ್ಪ ಮಧ್ಯೆ ಎರಡು ಪ್ಯಾಸೆಂಜರ್ ರೈಲುಗಳನ್ನು ಮಂಜೂರು ಮಾಡಿ, ಜುಲೈ 1ರಿಂದ ಪ್ರಾರಂಭ ಮಾಡುವುದಾಗಿ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಇದುವರೆಗೂ ಈ ಮಾರ್ಗದಲ್ಲಿ ಯಾವುದೇ ರೈಲುಗಳನ್ನು ಓಡಾಡಲು ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿಲುಗಡೆಗೆ ಒತ್ತಾಯ: ಕಳೆದ ವರ್ಷ (ಸೆಪ್ಟಂಬರ್ 8, 2012) ಶಿವಮೊಗ್ಗ- ತಾಳಗುಪ್ಪ ರೈಲು ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಮುನಿಯಪ್ಪ ಅವರು ಅರಸಾಳಿನಲ್ಲಿ ಎಕ್ಸ್ಪ್ರೆಸ್ ರೈಲಿಗೆ ನಿಲುಗಡೆ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ. ಆದರಿಂದ ತಾವು ಕೂಡಲೇ ಗ್ರಾಮಸ್ಥರ ಅನುಕೂಲಕ್ಕಾಗಿ ಅರಸಾಳಿನಲ್ಲಿ ರೈಲುನ್ನು ನಿಲ್ಲಿಸಲು ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಶಿವಮೊಗ್ಗ- ತಾಳಗುಪ್ಪ ಮಧ್ಯೆ 2013-14ರ ರೈಲ್ವೆ ಬಜೆಟ್ನಲ್ಲಿ ಘೋಷಿಸಿದಂತೆ ಕೂಡಲೇ 2 ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು. ತಾಳಗುಪ್ಪ- ಶಿವಮೊಗ್ಗ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಅರಸಾಳು ಗ್ರಾಮದಲ್ಲಿ ನಿಲ್ಲಿಸಬೇಕು, ಅರಸಾಳು ಗ್ರಾಮದಲ್ಲಿ ಎಲ್ಲಾ ರೈಲುಗಳಿಗೂ ರೈಲ್ವೆ ನಿಲುಗಡೆ ನೀಡಿ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ತೆರೆಯಬೇಕು, ಪುನರ್ ನಿರ್ಮಿತ ಅರಸಾಳು ರೈಲ್ವೆ ನಿಲ್ದಾಣದ ಕಟ್ಟಡವು ನಾದುರಸ್ತವಾಗಿದ್ದು, ಕೂಡಲೇ ನಿಲ್ದಾಣದ ಕಟ್ಟಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಣ್ಣಾ ಹಜಾರೆ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿ. ವಸಂತ ಕುಮಾರ್, ಪ್ರಧಾನ ಕಾರ್ಯದರ್ಶಿ ಅಶೋಕ್ ಯಾದವ್, ಗ್ರಾಮಸ್ಥ ಟೈಲರ್ ರಾಜಣ್ಣ, ವಿಧಾನಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ ಮತ್ತಿತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

