ಶಿಕ್ಷಣದಿಂದ ಸಮಸ್ಯೆಗೆ ಪರಿಹಾರ
ಕ.ಪ್ರ.ವಾರ್ತೆ, ಶಿಕಾರಿಪುರ, ಜು.11
ಕಂದಾಚಾರ, ಮೂಢನಂಬಿಕೆ ಇಂದಿಗೂ ಗ್ರಾಮೀಣ ಭಾಗದಲ್ಲಿ ಜೀವಂತವಾಗಿದ್ದು, ಸರ್ವರಿಗೂ ಶಿಕ್ಷಣದಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಇಲ್ಲಿನ ತಹಸೀಲ್ದಾರ್ ಪ್ರಕಾಶ್ ಐ ಗಣಾಚಾರಿ ತಿಳಿಸಿದರು.
ಗುರುವಾರ ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಶಿವಮೊಗ್ಗ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ, ತಾಲೂಕು ಆಡಳಿತ, ತಾಪಂ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಹಾಗೂ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ್ವಿತೀಯ ಸ್ಥಾನ: ಹೆಚ್ಚಿನ ಜನಸಂಖ್ಯೆಯಲ್ಲಿ ಭಾರತ ಪ್ರಪಂಚದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಪ್ರತಿ ವರ್ಷ ನಾಗಾಲೋಟದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಇದೇ ವೇಗದಲ್ಲಿ ಮುಂದುವರಿದಲ್ಲಿ ಸರ್ಕಾರ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಕಲ್ಪಿಸುವುದು ಅಸಾಧ್ಯವಾಗಲಿದೆ ಎಂದ ಅವರು, ಇದರಿಂದಾಗಿ ಭವಿಷ್ಯದಲ್ಲಿ ನಿದ್ರಿಸಲು ಸ್ಥಳ ಅಭಾವದಿಂದ ನಿಂತ ಸ್ಥಳದಲ್ಲಿಯೇ ನಿದ್ರಿಸುವ ಅನಿವಾರ್ಯ ಸ್ಥಿತಿ ತಲುಪುವುದಾಗಿ ಎಚ್ಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಅಧ್ಯಕ್ಷ ಹನುಮಂತಪ್ಪ, ವಿಸ್ತೀರ್ಣದ ದುಪ್ಪಟ್ಟು ಜನಸಂಖ್ಯೆ ದೇಶದಲ್ಲಿದ್ದು, ನಿಯಂತ್ರಣಕ್ಕೆ ಸರ್ಕಾರ ಹಲವು ಯೋಜನೆ ರೂಪಿಸಿದರೂ ಕೊಳಗೇರಿ ಮತ್ತಿತರ ಕಡೆ ಅನಕ್ಷರತೆ, ಅಜ್ಞಾನದಿಂದಾಗಿ ಸಾಮಾನ್ಯ ಜನತೆಯನ್ನು ತಲುಪುವಲ್ಲಿ ವಿಫಲವಾಗಿದೆ ಎಂದರು.
ಚೀನಾ ಮಾದರಿ: ಚೀನಾ ಮಾದರಿಯಲ್ಲಿ ಕುಟುಂಬಕ್ಕೆ ಒಂದು ಮಗು ಯೋಜನೆಯನ್ನು ಕಡ್ಡಾಯವಾಗಿಸಿ, ತಪ್ಪಿದಲ್ಲಿ ಸರ್ಕಾರದ ಸೌಲಭ್ಯ ಕಡಿತಗೊಳಿಸುವಂತೆ ಸಲಹೆ ನೀಡಿದ ಅವರು, ಈ ಬಗ್ಗೆ ಸರ್ಕಾರ ತಕ್ಷಣ ಜಾಗೃತವಾಗದಿದ್ದಲ್ಲಿ ಭವಿಷ್ಯ ಕರಾಳವಾಗಲಿದೆ ಎಂದರು.
ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ ಮಾತನಾಡಿ, ದೇಶದ ಜನಸಂಖ್ಯೆ ಹೆಚ್ಚಳದ ರೀತಿಯಲ್ಲಿ ಗಾತ್ರ, ವಿಸ್ತೀರ್ಣ ಹೆಚ್ಚಳವಾಗದಿದ್ದು, ಈ ಬಗ್ಗೆ ಎಲ್ಲರಿಗೂ ತಿಳಿವಳಿಕೆ ನೀಡಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ತಾಲೂಕು ವೈದ್ಯಾಧಿಕಾರಿ ಡಾ. ನಾಗರಾಜನಾಯ್ಕ, ಜನಸಂಖ್ಯೆ ಹೆಚ್ಚಳದಿಂದ ಎಲ್ಲರಿಗೂ ಸರ್ಕಾರದ ಸೌಲಭ್ಯ ಅಸಾಧ್ಯವಾಗಿದ್ದು, ಶಿಕ್ಷಣದಿಂದ ವಂಚಿತರಾದ ಮಕ್ಕಳು ಸಮಾಜಘಾತುಕ ವ್ಯಕ್ತಿಯಾಗಿ ಪರವರ್ತನೆಯಾಗುತ್ತಿದ್ದಾರೆ ಎಂದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ವಿರೂಪಾಕ್ಷಪ್ಪ ವಹಿಸಿ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಸರೋಜಮ್ಮ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ದೇನ್ಯಾನಾಯ್ಕ ಮೊದಲಾದರು ಉಪಸ್ಥಿತರಿದ್ದರು.
ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಜಾಥಾ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

