ಶಿವಮೊಗ್ಗ

ಈ ಶಾಲೆಗೆ ಹೋಗಲು ದಾರಿ ಯಾವುದಯ್ಯ...

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಜು.14
ಈ ಶಾಲೆಗೊಂದು ರಸ್ತೆ ಇದೆ.. ಆದರೆ, ಅದು ಈಗ ನೀರು ತುಂಬಿಕೊಂಡು ಕೆಸರು ಗದ್ದೆಯಂತಾಗಿದೆ.. ಕಾಲಿಡಲು ಕೂಡ ಜಾಗ ಇಲ್ಲ.. ಹೀಗಿರುವಾಗ ಶಾಲೆಗೆ ಹೇಗೆ ತಾನೇ ಹೋಗೋದು...
ಇದು ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮಳೆಗಾಲದ ಗೋಳು. ಅಷ್ಟೇ ಅಲ್ಲದೇ ಮಕ್ಕಳು ಮೂರು ಕಿ.ಮೀ ನಡೆದರೆ ಶಾಲೆಗೆ ಸೇರಿ ಕೊಳ್ಳಬಹುದಿತ್ತು. ಆದರೆ, ಮಳೆಗಾಲದ ಪಜೀತಿಯಿಂದಾಗಿ 8 ಕಿ.ಮೀ ಸುತ್ತು ಹೊಡೆದು ಶಾಲೆ ಮೆಟ್ಟಿಲು ಏರಬೇಕಿದೆ. ಅದಕ್ಕಾಗಿ ಖಾಸಗಿ ವಾಹನವೊಂದನ್ನು ಪೋಷಕರು ಗೊತ್ತುಪಡಿಸಿ ಮಾಸಿಕ ಶುಲ್ಕ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಯ ಆರ್ಭಟದಿಂದ ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿರುವ ಪರಿಣಾಮ ಶಾಲಾ ಮಕ್ಕಳು, ಪೋಷಕರು ಈ ಬೆಲೆ ತೆರಬೇಕಾಗಿದೆ.
ಈ ಗ್ರಾಮದಲ್ಲಿ 5ನೇ ತರಗತಿವರೆಗೆ ಶಿಕ್ಷಣ ಪಡೆದುಕೊಳ್ಳಲು ಅವಕಾಶವಿದೆ. ಅದಾದ ನಂತರ ಹೆಚ್ಚಿನ ಶಿಕ್ಷಣ ಪಡೆಯಲು ತುಪ್ಪೂರು ಅಥವಾ ಚೋರಡಿಯಲ್ಲಿನ ಪ್ರಾಥಮಿಕ ಶಾಲೆಗೆ ಸೇರ್ಪಡೆಯಾಗಬೇಕು. ಚೋರಡಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಹಾಗೂ ಸ್ವಲ್ಪ ದೂರ ಎನ್ನುವ ಕಾರಣಕ್ಕೆ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು 3 ಕಿ.ಮೀ ದೂರದ ತುಪ್ಪೂರು ಶಾಲೆಗೆ ಸೇರ್ಪಡೆಯಾಗಿದ್ದಾರೆ.
ಕೂಲಿ ಕಾರ್ಮಿಕರ ಮಕ್ಕಳು: ಈಗ ಈ ಶಾಲೆಗೆ ಮಕ್ಕಳನ್ನು ಸೇರಿಸಿದ್ದು, ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲದರಿಂದ 8 ಕಿ.ಮೀ ಸುತ್ತುಹಾಕಿಕೊಂಡು ನಡೆಯಬೇಕಿದೆ. ಇಷ್ಟು ದೂರ ನಡೆಯಲು ವಿದ್ಯಾರ್ಥಿಗಳು ನಿರಾಕರಿಸುತ್ತಿರುವುದರಿಂದ ಪೋಷಕರು ಖಾಸಗಿ ವಾಹನವೊಂದನ್ನು ಗೊತ್ತುಪಡಿಸಿಕೊಂಡಿದ್ದಾರೆ.
ಈಗ ಅದರಲ್ಲಿಯೇ ಶಾಲೆಗೆ ಹೋಗಿ ಬರುವುದು ಮಾಡುತ್ತಿದ್ದಾರೆ. ಇಲ್ಲಿ ಬಹುತೇಕ ಕೂಲಿ ಕಾರ್ಮಿಕರ ಮಕ್ಕಳೇ ಇದ್ದು, ಸರ್ಕಾರಿ ಶಾಲೆಗೆ ತಮ್ಮದೇ ವಾಹನವೊಂದನ್ನು ಗೊತ್ತುಪಡಿಸಿಕೊಂಡಿರುವುದು ಅನಿವಾರ್ಯವಾಗಿದೆ. ಹೊರಬೈಲು ಮತ್ತು ಸನ್ನಿವಾಸ ಗ್ರಾಮಗಳಿಂದ 30ಕ್ಕೂ ಹೆಚ್ಚು ಮಕ್ಕಳು ಚೋರಡಿಗೆ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ಇವರ ಪಾಡಂತೂ ಹೇಳತೀರದಾಗಿದೆ ಎನ್ನುತ್ತಾರೆ ಪೋಷಕರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.