ಶಿವಮೊಗ್ಗ

ಬರೆಯುವವರು ಮುಂದೆ ಬಂದರೆ ಓದುಗರಿಗೆ ಕೊರತೆ ಇಲ್ಲ

Published On :

ಶಿವಮೊಗ್ಗ ಸಾಧಕರು ಪುಸ್ತಕ ಬಿಡುಗಡೆಗೊಳಿಸಿದ  ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ
ಶಿವಮೊಗ್ಗ: ಓದುಗರ ವಿಚಾರದಲ್ಲಿ ಸಮಾಜ ಎಂದೂ ಬಂಜೆಯಲ್ಲ. ಓದುಗರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ, ಬರೆಯುವವರು ಮುಂದೆಬರಬೇಕಷ್ಟೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
 ಭಾನುವಾರ ಕಮಲಾ ನೆಹರು ಕಾಲೇಜಿನಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಎಂ.ಎನ್. ಸುಂದರರಾಜ್ ಬರೆದಿರುವ ಶಿವಮೊಗ್ಗ ಸಾಧಕರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಧನೆ ಮಾಡಿದವರ ಕುರಿತು ಓದಿದಾಗ ನಾವು ಏನಾದರೂ ಸಾಧನೆ ಮಾಡಬಹುದು ಎಂದಿಸುತ್ತದೆ. ಹೀಗಾಗಿ ಸಾಧಕರನ್ನು ಹೆಕ್ಕಿ ತೆಗೆದು ಕೃತಿಗೆ ತರುವ ಕೆಲಸ ನಿರಂತರವಾಗಿ ನಡೆಯಬೇಕೆಂದು ಹೇಳಿದರು.
ಇತಿಹಾಸ ತಿಳಿಯುವುದು: ದೇಶದ ಸಂಸ್ಕೃತಿ, ಇತಿಹಾಸ ತಿಳಿಯುವುದು ಒಂದು ಹಂತ. ಆದರೆ, ಇಂದಿನ ಮಕ್ಕಳಿಗೆ ನಮ್ಮವರ ಬಗ್ಗೆಯೇ ಗೊತ್ತಿರುವುದಿಲ್ಲ. ಶಿವಮೊಗ್ಗದಲ್ಲೇ ಹುಟ್ಟಿ ಬೆಳೆದು ಸಾಧನೆ ಮಾಡಿದವರ ಬಗ್ಗೆ ತಿಳಿಯದು. ಈ ರೀತಿ ಕೃತಿಗಳು ಹೊರಬಂದಾಗ ನಮ್ಮ ನಡುವಿನ ಸಾಧಕರ ಬಗ್ಗೆ ತಿಳಿಸಿಕೊಡುವ ಜೊತೆಗೆ ಮುಂದಿನ ಜನಾಂಗಕ್ಕೆ ತಿಳಿಸುವ ಪ್ರಯತ್ನ ಮಾಡಬಹುದಾಗಿದೆ ಎಂದರು.
ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದವರು, ಗ್ರಾಮಗಳ ಅಭಿವೃದ್ಧಿ ಮಾಡಿದವರು, ಸಂಗೀತ-ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಕೊಡುಗೆ  ನೀಡಿದವರು, ಕೃಷಿಯಲ್ಲಿ ಪರಿಣಿತರಾಗಿ ಸಾಧನೆ ಮಾಡಿದವರು, ಒಟ್ಟಾರೆ ಸಮಾಜಕ್ಕೆ ಒಳಿತು ಮಾಡಿದವರನ್ನು ನೆನಪು ಮಾಡಿಕೊಳ್ಳಬೇಕಾದ್ದು ಸಮಾಜದ ಕರ್ತವ್ಯ ಎಂದು ಅಭಿಪ್ರಾಯಪಟ್ಟ ಅವರು, ಸಾಧಕರನ್ನು ಓದಿ ತಿಳಿಯುವ ಪ್ರಯತ್ನ ಆಗಬೇಕಾಗಿದೆ ಎಂದರು. ಓದುವ ಬಗ್ಗೆ ಜಾಗೃತಿ, ತಿಳುವಳಿಕೆ ಮೂಡಿಸಿದರೆ, ಆಸಕ್ತಿ ಬರುವಂತೆ ಮಾಡಿದರೆ ಮಕ್ಕಳು ಓದಿಯೇ ಓದುತ್ತಾರೆ. ಹೀಗಾಗಿ ಇಂತಹ ಪುಸ್ತಕಗಳು ಹೊರಬಂದರೆ ಸಮಾಜದಲ್ಲಿ ನಿರಂತರತೆ ಬರುತ್ತದೆ ಎಂದು ತಿಳಿಸಿದರು.
ಸಾಧನೆ ಸಾಧ್ಯ: ಪುಸ್ತಕ ಕುರಿತು ಮಾತನಾಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಅಧ್ಯಯನ ಇದ್ದರೆ ಮಾತ್ರ ಸಾಧನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಾಧಕನದ್ದು ಹೂವಿನ ಹಾದಿಯಲ್ಲ, ಕಲ್ಲುಮುಳ್ಳಿರುವ ಹಾದಿ. ಸೋಲು ಗೆಲುವಿನ ಕಣ್ಣಾಮುಚ್ಚಾಲೆ, ಸವಾಲುಗಳ ಸರಮಾಲೆ. ಮಾನ ಮರ್ಯಾದೆಯ ತೂಗುಯ್ಯಾಲೆ. ಕಿರಿಯರ ಪಾಠ ಶಾಲೆ ಎಂದು ಸಾಧಕರನ್ನು ಬಣ್ಣಿಸಿದರು.
 ಎಷ್ಟು ಬೇಕಾದರೂ ಜೀವನ ಚರಿತ್ರೆ ಬರೆಯಬಹುದು. ಆದರೆ, ವ್ಯಕ್ತಿತ್ವ ಚರಿತ್ರೆ ಬರೆಯುವುದು ಕಷ್ಟ. ಈ ಪುಸ್ತಕದಲ್ಲಿ ಯಾವುದೇ ವ್ಯಕ್ತಿಯ ಕುರಿತು ಅನಗತ್ಯವಾಗಿ ವರ್ಣಿಸದೇ ವಸ್ತುನಿಷ್ಠವಾಗಿ ಬರೆದಿದ್ದಾರೆ. ಜೊತೆಗೆ ಸೌಜನ್ಯ- ಸಭ್ಯತೆ ಇರುವ ಟೀಕೆಯನ್ನೂ ಮಾಡಿದ್ದಾರೆ ಎಂದು ತಿಳಿಸಿದರು. ಉದ್ಯಮಿ ಎಸ್. ರುದ್ರೇಗೌಡ, ಸುಬ್ರಹ್ಮಣ್ಯಂ, ಶಿವಮೊಗ್ಗ ಟೈಮ್ಸ್ ಸಂಪಾದಕ ಚಂದ್ರಕಾಂತ್, ಸುಂದರರಾಜ್ ಇದ್ದರು. 320 ಪುಟಗಳನ್ನು ಒಳಗೊಂಡ ಶಿವಮೊಗ್ಗ ಸಾಧಕರು ಕೃತಿ 88 ಸಾಧಕರ ವ್ಯಕ್ತಿ ಚರಿತ್ರೆಯನ್ನು ಹೊಂದಿದೆ. ಎಸ್.ಜಿ. ಪ್ರಕಾಶನ ಕೃತಿ ಹೊರತಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.