ಶಿವಮೊಗ್ಗ

'ಅಡಕೆ ಬೆಳೆಗಾರರೊಂದಿಗೆ ಚೆಲ್ಲಾಟ'

Published On :

ಕ.ಪ್ರವಾರ್ತೆ  ಸಾಗರ  ಜು.23
ಭವಿಷ್ಯದ ಅಭದ್ರತೆಯಿಂದ ಬಳಲುತ್ತಿರುವ ಮಲೆನಾಡಿನ ಅಡಕೆ ಬೆಳೆಗಾರರ ಸಮಸ್ಯೆಯೊಂದಿಗೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹಾಗೂ ಪ್ರೊ. ಬಿ.ಎಂ. ಕುಮಾರಸ್ವಾಮಿ ಚೆಲ್ಲಾಟವಾಡುತ್ತಿದ್ದಾರೆ ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಆರೋಪಿಸಿದರು.
    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ನೇಮಿಸಿದ ಡಾ. ಗೋರಕ್‌ಸಿಂಗ್ ಸಮಿತಿ ಮಲೆನಾಡಿನ ಅಡಕೆ ಬೆಳೆಗಾರರ ಸಂಕಷ್ಟಗಳನ್ನು ಅರಿತು ಸೂಕ್ತ ಶಿಫಾರಸನ್ನು ಮಾಡಿದೆ.
ಆದರೆ ಆಯನೂರು ಮಂಜುನಾಥ್ ಮತ್ತು ಬಿ.ಎಂ. ಕುಮಾರಸ್ವಾಮಿ ವರದಿ ರದ್ದುಪಡಿಸುವಂತೆ ಹೇಳಬೇಕಾದರೆ ವರದಿಯಲ್ಲಿ ಏನು ದೋಷ ಕಂಡಿದ್ದಾರೆ ಎನ್ನುವುದನ್ನು ಮೊದಲು ಬೆಳೆಗಾರರಿಗೆ ಸ್ಪಷ್ಟಪಡಿಸಬೇಕು ಎಂದರು.
  ಗೋರಕ್‌ಸಿಂಗ್ ವರದಿಯಲ್ಲಿ ಶೃಂಗೇರಿ ಭಾಗದ ಅಡಕೆ ಬೆಳೆಗಾರರು ಹಳದಿಎಲೆ ರೋಗಬಾಧೆಯಿಂದ ಕೇವಲ ಅಡಕೆ ಮರಗಳನ್ನು ಕಳೆದುಕೊಂಡಿಲ್ಲ. ಬದಲಾಗಿ ಇಡೀ ತೋಟವನ್ನೇ ಕಳೆದುಕೊಂಡಿದ್ದಾರೆ.
  ಆದರೆ ಜನಪ್ರತಿನಿಧಿಯಾದವರಿಗೆ ಬೆಳೆಗಾರರ ಸಂಕಷ್ಟದಿಂದ ನೋವೇ ಆಗಲಿಲ್ಲವೇ ಎಂದು ಪ್ರಶ್ನಿಸಿದರು.
ಆರ್ಥಿಕ ತಜ್ಞ ಎನಿಸಿಕೊಂಡಿರುವ ಕುಮಾರಸ್ವಾಮಿಯವರು ಮೊದಲು ಮಲೆನಾಡಿನ ಅಡಕೆ ಬೆಳೆಗಾರರ ಆರ್ಥಿಕ ಸ್ಥಿತಿ ಅರಿಯುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಗತ್ಯ ವಿವಾದ ಬೇಡ: ಕೇವಲ ರಾಜಕೀಯ ಉದ್ದೇಶದಿಂದ, ವೈಯಕ್ತಿಕ ಹಿತಾಸಕ್ತಿ ಮುಂದಿಟ್ಟುಕೊಂಡು ವರದಿ ಕುರಿತು ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಜಯಂತ್, ಇವರ ವರ್ತನೆಯನ್ನು ಅವರದೇ ಪಕ್ಷದ ಚಿಕ್ಕಮಗಳೂರು ಭಾಗದವರು ಖಂಡಿಸಿದ್ದಾರೆ.
  ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಕೂಡ ಗೋರಕ್‌ಸಿಂಗ್ ವರದಿ ಬಗ್ಗೆ ಅನಗತ್ಯ ವಿವಾದ ಹುಟ್ಟುಹಾಕುತ್ತಿರುವುದನ್ನು ಖಂಡಿಸುತ್ತದೆ ಎಂದು ಹೇಳಿದರು.
ಬೃಹತ್ ಹೋರಾಟ: ತಾವು ಎಂದಿಗೂ ಬೆಳೆಗಾರರ ಜೊತೆಗಿದ್ದು ಹೋರಾಟ ಮಾಡುತ್ತೇನೆ ಎಂದ ಅವರು, ಮುಂದೆ ಗೋರಕ್‌ಸಿಂಗ್ ವರದಿ ಜಾರಿ ಕುರಿತಂತೆ ಬೆಳೆಗಾರರ ಸಭೆ ಕರೆದು ದೊಡ್ಡಮಟ್ಟದ ಹೋರಾಟ ರೂಪಿಸುವುದಾಗಿ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ವ.ಶಂ. ರಾಮಚಂದ್ರ ಭಟ್, ಸಹ ಕಾರ್ಯದರ್ಶಿ ರಾಧಾಕೃಷ್ಣ ಭಟ್, ವೆಂಕಟಗಿರಿ ಕುಗ್ವೆ, ಕೆ.ಎಸ್. ಸುಬ್ರಾವ್ ಮೊದಲಾದವರು ಕಾರ್ಯಕ್ರಮದಲ್ಲಿ  ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.