ಗುಟ್ಕಾ ನಿಷೇಧ ನಡುವೆಯೂ ಕುಗ್ಗದ ಅಡಕೆ
ಶಿವಮೊಗ್ಗ: ಅಡಕೆ ಮಾರುಕಟ್ಟೆ ಪಂಡಿತರು, ಹಿರಿಯ ಅಡಕೆ ವ್ಯಾಪಾರಿಗಳ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗಿವೆ, ತಮ್ಮ ವಿಶ್ಲೇಷಣೆಗಳನ್ನೇ ತಾವು ಇದೀಗ ನಂಬರು. ಭವಿಷ್ಯದ ಮಾರುಕಟ್ಟೆಯ ಬಗ್ಗೆಯೂ ಅವರಿಂದ ಮಾತುಗಳೇ ಹೊರಡುತ್ತಿಲ್ಲ. ಕಾರಣವಿಷ್ಟೆ, ಗುಟ್ಕಾ ನಿಷೇಧ ಆದೇಶದ ನಂತರ ನಿರೀಕ್ಷೆಯಂತೆ ಅಡಕೆ ಬೆಲೆ ಕುಸಿದಿಲ್ಲ. ನಿಧಾನವಾಗಿ ಬೆಲೆ ಏರುಗತಿಯಲ್ಲೇ ಸಾಗಿದ್ದು, ಬೆಲೆ ಇಳಿಕೆಯ ವಾಸನೆ ಕೂಡ ಇತ್ತ ಬಡಿದಿಲ್ಲ.
ಶಿವಮೊಗ್ಗ ಎಪಿಎಂಸಿ ರಾಜ್ಯದ ಅತಿ ದೊಡ್ಡ ಅಡಕೆ ಮಾರುಕಟ್ಟೆ. ಗುಟ್ಕಾ, ಪಾನ್ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಡಕೆ ಸರಬರಾಜಾಗುವುದು ಇಲ್ಲಿಂದಲೇ. ರಾಜ್ಯದಲ್ಲಿ ಗುಟ್ಕಾ ನಿಷೇಧ ಘೋಷಣೆಯಾಗುತ್ತಿದ್ದಂತೆ ಈ ಮಾರುಕಟ್ಟೆಯಲ್ಲಿ ಆತಂಕ ಮನೆ ಮಾಡಿತ್ತು. ಅಡಕೆಗೆ ಭವಿಷ್ಯವಿಲ್ಲ, ಬೆಲೆ ಸಂಪೂರ್ಣ ಇಳಿದು ಹೋಗುತ್ತದೆ ಎಂಬ ಮಾತುಗಳೇ ಎಪಿಎಂಸಿಯ ರಸ್ತೆ ರಸ್ತೆಗಳಲ್ಲಿ ಕೇಳಿಬಂದಿತ್ತು. ಆದರೆ, ಗುಟ್ಕಾ ನಿಷೇಧದ ಆದೇಶ ಹೊರಬಿದ್ದು ಎರಡು ತಿಂಗಳು ಸಮೀಪಿಸುತ್ತಿದೆ, ಆದೇಶ ಅನುಷ್ಠಾನಕ್ಕೆ ಬಂದು 15 ದಿನ ಕಳೆಯುತ್ತಾ ಬಂದಿದ್ದರೂ ಮಾರುಕಟ್ಟೆ ಮಾತ್ರ ಜಗ್ಗಿಲ್ಲ, ಕುಗ್ಗಿಲ್ಲ.
ಆರಂಭದಲ್ಲಷ್ಟೇ ಆತಂಕ: ಎಪಿಎಂಸಿ ನೀಡುವ ಮಾಹಿತಿಯಂತೆ, ರಾಜ್ಯದಲ್ಲಿ ಗುಟ್ಕಾ ನಿಷೇಧ ಆದೇಶವಾಗುತ್ತಿದ್ದಂತೆ ಮಾರುಕಟ್ಟೆಗೆ ಗರ ಬಡಿದಂತಾಗಿತ್ತು. ಆದರೆ, ಇದೀಗ ಅಡಕೆ ಖರೀದಿ ಪ್ರಕ್ರಿಯೆ ಈ ಹಿಂದಿನ ವರ್ಷಗಳಲ್ಲಿ ನಡೆದಂತೆಯೇ ನಡೆಯುತ್ತಿದೆ. ಮಾರುಕಟ್ಟೆ ನಿಧಾನವಾಗಿ ಚೇತರಿಸಿಕೊಂಡಿದೆ ಎಂದು ಅಧಿಕಾರಿಗಳು ವಿವರಿಸಿದರು.
ಆರಂಭದಲ್ಲಿ ಕ್ವಿಂಟಲ್ ಅಡಕೆಯ ಬೆಲೆ 1,500ರಿಂದ 2500 ರುಪಾಯಿ ವರೆಗೆ ಇಳಿದಿದ್ದರು, ನಂತರ 15 ದಿನಗಳಲ್ಲೇ ಚೇತರಿಕೆ ಹಾದಿ ಹಿಡಿಯಿತು. ಇದೀಗ ಬೆಳೆಗಾರನ ಮೊಗದಲ್ಲಿ ಮಂದಹಾಸ ಮೂಡಿಸುವಷ್ಟರ ಮಟ್ಟಿಗೆ ಬೆಲೆ ಇದೆ ಎಂದು ಮಾರುಕಟ್ಟೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಶಿವಮೊಗ್ಗ ಅಡಕೆ ಮಾರುಕಟ್ಟೆಗೆ ವಾರ್ಷಿಕ 6.5ರಿಂದ 7 ಲಕ್ಷ ಮೂಟೆಗಳು ರೈತರಿಂದ ಬರುತ್ತವೆ. ಪ್ರತಿ ಮೂಟೆಯಲ್ಲಿ ಸರಾಸರಿ 70 ಕೆಜಿ ಅಡಕೆ ಇರುತ್ತದೆ.
ಅಂದಾಜಿನ ಮಾಹಿತಿಯಂತೆ ಕಳೆದ ವರ್ಷ ಈ ವೇಳೆಯಲ್ಲಿ 1 ಲಕ್ಷ ಅಡಕೆ ಮೂಟೆ ಖರೀದಿಗೆ ಬಾಕಿ ಇತ್ತು. ಈ ಬಾರಿ 90 ಸಾವಿರದಷ್ಟು ಮೂಟೆಗಳು ದಾಸ್ತಾನಿದೆ. ಇನ್ನೊಂದು ಮಾಹಿತಿಯಂತೆ ಕಳೆದ ವರ್ಷ ಜುಲೈನಲ್ಲಿ ಮಾರಾಟವಾದ ಅಡಕೆಯಷ್ಟೇ ಈಗಲೂ ಖರೀದಿ ನಡೆದಿದೆ. ಗುಟ್ಕಾ ನಿಷೇಧದ ನಂತರ ಖರೀದಿದಾರರು ಅಡಕೆ ಖರೀದಿಸಲು ಮುಂದಾಗಿರಲಿಲ್ಲ. ಆದರೆ, ಇದೀಗ ನಿಧಾನವಾಗಿ ಖರೀದಿ ಪ್ರಮಾಣ ಹೆಚ್ಚಿಸಿದ್ದಾರೆ ಎಂಬುದು ಮಾರುಕಟ್ಟೆಯ ಮಾಹಿತಿ.
ನಿರೀಕ್ಷೆ: ಅಡಕೆ ಬೆಳೆಯ ಸಾಂಪ್ರದಾಯಿಕ ಪ್ರದೇಶಗಳಾದ ತೀರ್ಥಹಳ್ಳಿ, ಹೊಸನಗರ, ಕೊಪ್ಪ, ಶೃಂಗೇರಿ, ಸಾಗರ ಭಾಗದಿಂದ ಅಡಕೆ ಮಾರುಕಟ್ಟೆ ಪ್ರವೇಶಿಸಲು ಇನ್ನೂ 4 ತಿಂಗಳು ಸಮಯವಿದೆ.
ಆದರೆ, ಬಯಲು ಸೀಮೆಯ ಹೊಸ ಅಡಕೆ ಮಾರುಕಟ್ಟೆಗೆ ಪ್ರವೇಶಿಸಲು ಇನ್ನೆರೆಡು ವಾರವಷ್ಟೇ ಬಾಕಿ ಇದೆ. ಇಂತಹ ಹೊತ್ತಿನಲ್ಲಿ ಅಡಕೆ ಬೆಲೆ ಕಳೆದುಕೊಳ್ಳದೇ ಇರುವುದು ರೈತರ ಪಾಲಿಗೆ ಖುಷಿಯ ವಿಚಾರ ಎಂಬುದು ಹಿರಿಯ ಅಡಕೆ ವರ್ತಕ ಕೆ. ಶರ್ಮಾ ಅಭಿಪ್ರಾಯಪಡುತ್ತಾರೆ.
ಮೋದಿ, ಡಬಲ್ ಪೌಚ್ ಕಾರಣ: ಅಡಕೆ ಬೆಲೆ ಇಳಿಯದಿರಲು ಪ್ರಮುಖವಾಗಿ ಲೋಕಸಭೆ ಚುನಾವಣೆ ಕಾರಣವಂತೆ. ಅದರಲ್ಲೂ ನರೇಂದ್ರ ಮೋದಿಯವರ ನಿಲುವು ಕಾರಣವೆಂದು ಎಪಿಎಂಸಿಯಲ್ಲಿನ ಹಲವು ವರ್ತಕರು ವಿಶ್ಲೇಷಿಸುತ್ತಾರೆ.
ಮುಂದೆ ಲೋಕಸಭಾ ಚುನಾವಣೆ ಇದೆ, ಇಂತಹ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಗುಟ್ಕಾ ತಯಾರಿಕಾ ಉದ್ಯಮಿಗಳನ್ನು ಎದುರು ಹಾಕಿಕೊಳ್ಳಬಾರದೆಂಬ ಕಾರಣಕ್ಕೆ ಮೋದಿಯವರು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.
ಇದೇ ರೀತಿ ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲೂ ಗುಟ್ಕಾ ಉದ್ಯಮಿಗಳಿಗೆ ರಿಯಾಯಿತಿ ನೀಡಲಾಗುತ್ತಿದೆ.
ಇದರಿಂದ ಅಡಕೆಗೆ ಬೇಡಿಕೆ ಕಡಿಮೆಯಾಗಿಲ್ಲ ಎಂದು ತಮ್ಮದೇ ದಾಟಿಯಲ್ಲಿ ವಿವರಿಸುತ್ತಾರೆ.
ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಗುಟ್ಕಾ ವಿರುದ್ಧ ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿಲ್ಲ. ಇದಕ್ಕಿಂತ ಮುಖ್ಯವಾಗಿ ಡಬಲ್ ಪೌಚ್‌ನಲ್ಲಿ ಗುಟ್ಕಾ ಮಾರುಕಟ್ಟೆ ಪ್ರವೇಶ ಮಾಡಿರುವುದು ಕಾರಣವಂತೆ.
ಗುಟ್ಕಾ ನಿಷೇಧ ಜಾರಿಯಾದರೂ ಗುಟ್ಕಾ ದಾಸರು ಗುಟ್ಕಾ ತಿನ್ನುವುದು ಬಿಟ್ಟಿಲ್ಲ.
ಹೀಗಾಗಿ ಈ ವರೆಗೆ ಬೆಲೆ ಇಳಿದಿಲ್ಲ ಎಂದು ವರ್ತಕರು ಅಭಿಪ್ರಾಯಪಡುತ್ತಾರೆ.
ಅಡಕೆ ಬೆಲೆ ಹೇಗಿತ್ತು ಹೇಗಾಯ್ತು...
ಬೆಟ್ಟೆ- 17,189-19,060 16,619-17,719 17,219-18,162 18,860-19,499
ಇಡಿ - 17,140-18,389 16,009-16,963 17,009-17,489 16,790-18,869
ಗೊರಬಲು- 7,809-12,069 6,890-11,789 7,519-11,630 8,019-11,839
ರಾಶಿ ಇಡಿ- 18,009-19,069 16,429-17,709 17,369-18,122 18,519-19,390
ಸರಕು- 20,009-26,909 19,809 -26,692 19,810-25,500 20,009- 27,796
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

