ಶಿವಮೊಗ್ಗ

ವೈದ್ಯರ ಕೊರತೆಗೆ ಆಕ್ರೋಶ

Published On :

ಕ.ಪ್ರ.ವಾರ್ತೆ  ಸಾಗರ  ಜು. 25
ಇಲ್ಲಿನ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಭೆಯಲ್ಲಿ ಕರೂರು, ಭಾರಂಗಿ ಹೋಬಳಿಯಲ್ಲಿ ವೈದ್ಯರ ಕೊರತೆಯ ಬಗ್ಗೆ ಆ ಭಾಗದ ಸದಸ್ಯ ಹರೀಶ್ ಗಂಟೆ ತಾಲೂಕು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ವಿಷಯ ಕುರಿತು ಮಾತನಾಡಿದ ಹರೀಶ್, ಕರೂರು ಭಾರಂಗಿ ಹೋಬಳಿಯ ತುಮರಿ, ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂರ್ನಾಲ್ಕು ತಿಂಗಳಿಂದ ವೈದ್ಯರಿಲ್ಲದೆ ಹಿನ್ನೀರಿನ ಜನರು ಪರಿತಪಿಸುತ್ತಿದ್ದಾರೆ. ವೈದ್ಯರ ನೇಮಕಾತಿ ಕುರಿತು ಆರೋಗ್ಯ ಇಲಾಖೆಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದಾಗ್ಯೂ ಅಧಿಕಾರಿಗಳು ನಿರಾಸಕ್ತಿ ತೋರುತ್ತಿರುವುದು ಸಂತ್ರಸ್ತ ಜನರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಕೂಡಲೆ ವೈದ್ಯರ ನೇಮಕ ಮಾಡದಿದ್ದಲ್ಲಿ ತಾವು ಸಭಾತ್ಯಾಗ ಮಾಡುವುದಾಗಿ ಹೇಳಿದರಲ್ಲದೆ ಮುಂದಿನ ಸಭೆಯನ್ನೂ ಬಹಿಷ್ಕರಿಸುವ ಎಚ್ಚರಿಕೆ ನೀಡಿದರು.
ಮತ್ತೋರ್ವ ಸದಸ್ಯೆ ಸುಮಿತ್ರಮ್ಮ, ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಪ್ರತಿ ಗ್ರಾಮಗಳಲ್ಲಿ ಆಚರಿಸುವ ಮೂಲಕ ಜನಜಾಗೃತಿಗೆ ಕ್ರಮ ತೆಗೆದುಕೊಳ್ಳಬೇಕು. ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುವ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಸೂಕ್ತ ಮಾಹಿತಿ ನೀಡುವಂತೆ ಆಗಬೇಕು ಎಂದರು.
ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ ಮಾತನಾಡಿ, ಹಿನ್ನೀರಿನ ಜನರ ಸಮಸ್ಯೆಗೆ ಆರೋಗ್ಯ ಇಲಾಖೆ ತಕ್ಷಣ ಸ್ಪಂದಿಸಬೇಕು. ಕಾಯಂ ವೈದ್ಯರು ನೇಮಕ ಆಗುವವರೆಗೆ ತಾಳಗುಪ್ಪ ಹಾಗೂ ಅರಲಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ವಾರಕ್ಕೆ ಎರಡು ದಿನ ಆಸ್ಪತ್ರೆಗೆ ಭೇಟಿ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯ್ತಿ ಮೂಲಕ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಜನರಿಗೆ ತಲುಪಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
 ಸದಸ್ಯೆ ಶ್ವೇತಾ ಕಾಗೋಡು, ತಾಲೂಕಿನಲ್ಲಿ ಮಳೆಹಾನಿಯಿಂದ ಅಪಾರ ನಷ್ಟ ಉಂಟಾಗಿದೆ. ಮಾಹಿತಿ ನೀಡಬೇಕಾದ ತಹಶೀಲ್ದಾರ್ ತಾಪಂ ಸಭೆಗೆ ಪ್ರತಿಬಾರಿ ಗೈರಾಗುತ್ತಿದ್ದಾರೆ. ಮಳೆಹಾನಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಅರ್ಜಿ ಪಡೆಯಬೇಕು. ಆದರೆ ಅರ್ಜಿಯನ್ನು ಈತನಕ ವಿತರಣೆ ಮಾಡಿಲ್ಲ. ಜೊತೆಗೆ ತಹಸೀಲ್ದಾರರು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೆರೆಹಾನಿ ಅಂದಾಜು ಮಾಡುವ ಕೆಲಸವನ್ನೂ ಮಾಡಿಲ್ಲ. ನೆರೆಯಿಂದಾಗಿ ತಾಲೂಕಿನಲ್ಲಿ ರೈತರು ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ. ಆದರೆ ಅವರಿಗೆ ಎಕರೆಗೆ ಕೇವಲ 800 ರು. ಪರಿಹಾರ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ನೆರೆಪರಿಹಾರವನ್ನು ಎಕರೆಗೆ 3ರಿಂದ 5 ಸಾವಿರವಾದರೂ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಾಳಗುಪ್ಪ ಹೋಬಳಿಯಲ್ಲಿ ನೆರೆಯಿಂದ ಬಿತ್ತನೆ ಕಾರ್ಯ ಮುಗಿಸಿ ನಷ್ಟ ಅನುಭವಿಸಿದ ರೈತರಿಗೆ ಉಚಿತವಾಗಿ ಬಿತ್ತನೆಬೀಜ ನೀಡುವ ನಿರ್ಣಯ ಸಭೆಯಲ್ಲಿ ಕೈಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಈಗಾಗಲೆ ನೆರೆಯಿಂದ ರಸ್ತೆ, ಮೋರಿ ಸೇರಿದಂತೆ ಸುಮಾರು 3 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಹೇಳಿದರು.
 ಸದಸ್ಯೆ ಜ್ಯೋತಿ ಮುರಳಿಧರ್, ತಾಲ್ಲೂಕಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಕುರಿತು ತಹಸೀಲ್ದಾರ್ ಕಚೇರಿಯಲ್ಲಿ ಪಟ್ಟಿ ತಯಾರಿಸಲಾಗುತ್ತಿದೆ. ಈಗಾಗಲೆ ಬಗರ್ ಹುಕುಂ ಕಾಯ್ದೆ ತಿದ್ದುಪಡಿ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಸರ್ಕಾರದಿಂದ ಸೂಕ್ತ ನಿರ್ದೇಶನ ಬರುವವರೆಗೂ ಬಗರ್ ಹುಕುಂ ಸಾಗುವಳಿದಾರರ ತಂಟೆಗೆ ಹೋಗದಂತೆ ಸಭೆ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಉಪಾಧ್ಯಕ್ಷೆ ಗೌರಮ್ಮ, ಡಾ. ಸದಾಶಿವ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.