ಜಿಲ್ಲೆಯಾದ್ಯಂತ ಆವರಿಸಿದ ಅತಿವೃಷ್ಟಿ ಛಾಯೆ
ಕ.ಪ್ರ.ವಾರ್ತೆ,ಶಿವಮೊಗ್ಗ,ಜು.25
ಬರದಿಂದ ನಲುಗಿದ್ದ ಜಿಲ್ಲೆ ಈಗ ಸಂಪೂರ್ಣ ತೊಪ್ಪೆಯಾಗಿ ಹೋಗಿದೆ. ಮಳೆ ಅಬ್ಬರಕ್ಕೆ ಕೃಷಿ ಕ್ಷೇತ್ರ ಅವಕ್ಕಾಗಿ ಹೋಗಿದ್ದು, ಅತಿವೃಷ್ಟಿ ಛಾಯೆ ಸಂಪೂರ್ಣ ಆವರಿಸಿದೆ.
ಅಡಕೆಗೆ ಕೊಳೆ ಆವರಿಸೊಕಂಡರೆ, ಜೋಳ ನೆಲಕ್ಕಚ್ಚಿದೆ. ಬಹುತೇಕ ಕೃಷಿ ಭೂಮಿಗಳಲ್ಲೆಲ್ಲಾ ನೀರು ನಿಂತಿದ್ದು, ಮಳೆ ಮುಂದುವರಿದರಿದೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ಮಳೆಗೆ ರು. 9.84ಕೋಟಿ ನಷ್ಟ: ಶಿವಮೊಗ್ಗ ಜಿಲ್ಲಾದ್ಯಂತ ಸುರಿದ ಭಾರಿ ಮಳೆಗೆ ಸುಮಾರು ರು. 9.84ಕೋಟಿ ನಷ್ಟ ಸಂಭವಿಸಿರುವ ಬಗ್ಗೆ ಜಿಲ್ಲಾಡಳಿತ ವರದಿ ಮಾಡಿದ್ದು, ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅನುಷ್ಠಾನಾಧಿಕಾಗಳಿಗೆ ಸೂಚಿಸಲಾಗಿದೆ.
ಕಳೆದ ಬುಧವಾರದ ವರದಿಯಂತೆ ಜಿಲ್ಲೆಯಲ್ಲಿ ಸುಮಾರು 126.95ಕಿಲೋ ಮೀಟರ್ ರಸ್ತೆ ಹಾನಿಯಾಗಿದ್ದು, ಇದರಿಂದ ರು. 3.88ಕೋಟಿ ನಷ್ಟ ಸಂಭವಿಸಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಈ ಪೈಕಿ ಅತಿ ಹೆಚ್ಚು ಸೊರಬ ತಾಲೂಕಿನಲ್ಲಿ 59ಕಿ.ಮೀ ರಸ್ತೆ ಹಾನಿಯಾಗಿದ್ದು, ಸುಮಾರು ರು. 2ಕೋಟಿ ನಷ್ಟ ಸಂಭವಿಸಿದೆ.
ಶಿಕಾರಿಪುರ ತಾಲೂಕಿನಲ್ಲಿ 39ಕಿ.ಮೀ. ರಸ್ತೆ ಹಾನಿಯಾಗಿದೆ. ಈವರೆಗೆ ಸುರಿದ ಭಾರಿ ಮಳೆಯಿಂದ 26 ಸೇತುವೆ, 23 ಸರ್ಕಾರಿ ಕಟ್ಟಡಗಳಿಗೆ ಹಾನಿ ಸಂಭವಿಸಿದ್ದು, ಅಲ್ಲದೆ 68 ಕೆರೆ ಕಟ್ಟೆಗಳಿಗೆ ಹಾಗೂ 11 ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ಹಾನಿಗಳು ಸಂಭವಿಸಿದೆ.
93 ಮನೆ ಹಾನಿ: ಜಿಲ್ಲೆಯಾದ್ಯಂತ 93 ಮನೆಗಳಿಗೆ ಮಳೆಯಿಂದ ಹಾನಿಯಾಗಿದ್ದು, ಇದರಿಂದ ಸುಮಾರು ರು. 25 ಲಕ್ಷ ಹಾನಿಯಾಗಿದೆ. 166 ಪ್ರಕರಣಗಳಲ್ಲಿ ಬೆಳೆಹಾನಿ ಸಂಭವಿಸಿದ್ದು, ಈವರೆಗೆ 334.32ಎಕರೆ ಪ್ರದೇಶದಲ್ಲಿನ ಬೆಳೆ ಭಾರಿ ಮಳೆಗೆ ತುತ್ತಾಗಿದೆ. ಅಲ್ಲದೆ, 101.45ಎಕರೆ ತೋಟಗಾರಿಕಾ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ. 12 ಜಾನುವಾರುಗಳು ಮಳೆಯಿಂದ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.
ಈವರೆಗೆ ಯಾವುದೇ ಮಾನವ ಜೀವಹಾನಿ ಬಗ್ಗೆ ವರದಿಯಾಗಿಲ್ಲವಾದರೂ, ಪ್ರಕೃತಿ ವಿಕೋಪದಿಂದಾದ ಅನಾಹುತ ತಡೆಗಟ್ಟಲು ಹಾಗೂ ಮನ್ನೆಚ್ಚರಿಕೆ ಕ್ರಮ ವಹಿಸುವಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಎಂಜಿನಿಯರ್ಗಳು, ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಸೊರಬ ಮುಂದು: ಜಿಲ್ಲಾದ್ಯಂತ ಹಾನಿಗೊಳಗಾಗಿರುವ ತಾಲೂಕುಗಳ ಪೈಕಿ ಸೊರಬ ತಾಲೂಕಿನಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು, ಈವರೆಗೆ ಸುಮಾರು ರು. 6.71ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ ಜಲಾಶಯಗಳು ಭರ್ತಿಯಾಗಿವೆ.
ಜಿಲ್ಲೆಯ ವಿವಿಧ ಕೆರೆ ಕಟ್ಟೆಗಳು ತುಂಬಿದ್ದು, ಕೆಲವೆಡೆ ಪ್ರಕೃತಿ ವಿಕೋಪ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿ ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಡಳಿತ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಕೃತಿ ವಿಕೋಪದಿಂದಾದ ನಷ್ಟದ ಕುರಿತಂತೆ ಜಿಲ್ಲಾಡಳಿತಕ್ಕೆ ತಕ್ಷಣ ವರದಿ ಸಲ್ಲಿಸಬೇಕು ಹಾಗೂ ಹಾನಿ ಸಂಭವಿಸಿದ ಪ್ರಕರಣ ಕುರಿತಂತೆ ಪುನರ್ವಸತಿ ಕಾಮಗಾರಿ ಕೈಗೆತ್ತಿಕೊಳ್ಳಲು ತಕ್ಷಣ ನೀಲನಕ್ಷೆ ತಯಾರಿಸಿ, ಜಿಲ್ಲಾಡಳಿತದಿಂದ ಅನುಮೋದನೆ ಪಡೆದು, ತುರ್ತು ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಿದ್ದಾರೆ.
ತೀರ್ಥಹಳ್ಳಿ..
ತೀರ್ಥಹಳ್ಳಿ: ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಹಳ್ಳಕೊಳ್ಳಗಳೆಲ್ಲ ತಂಬಿ ಹರಿಯುತ್ತಿವೆ. ಕಳೆದೆರಡು ದಿನಗಳಿಂದ ಮಳೆ ಜೋರಾಗಿ ಬರುತ್ತಿದ್ದು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಆಗುಂಬೆಯಲ್ಲಿ 204 ಮಿಮೀ, ತೀರ್ಥಹಳ್ಳಿಯಲ್ಲಿ 89 ಮಿಮೀ ಮಳೆ ಪ್ರಮಾಣ ದಾಖಲಾಗಿದೆ. ತುಂಗಾನದಿಯಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರುತ್ತಿದ್ದು, ಕಳೆದ ಮೂರು ದಿನಗಳಿಂದಲೂ ಅಪಾಯದ ಕರೆಗಂಟೆ ಬಾರಿಸುತ್ತಲೇ ಇದೆ. ಹಾಗಾಗಿ ಗುರುವಾರ ತೀರ್ಥಹಳ್ಳಿ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ವಿದ್ಯುತ್ ವ್ಯತ್ಯಯ: ಇಡೀ ದಿನ ವಿದ್ಯುತ್ ಕಣ್ಣಾಮುಚ್ಚಾಲೆಯಾಡಿದ್ದು, ಕಚೇರಿ ಕೆಲಸಗಳು ತೊಂದರೆ ಅನುಭವಿಸುವಂತಾಯಿತು.
ಸಾಗರ...
ಸಾಗರ: ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಆನಂದಪುರಂ ಹೋಬಳಿಯ ಗೌತಮಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣ್ಣೂರು ಗ್ರಾಮದ ಸ.ನಂ. 1 ರಿಂದ 20ರವರೆಗೆ ಸುಮಾರು 25 ಎಕರೆ ಬಿತ್ತನೆ ಮಾಡಿದ ಜಮೀನು ಪೂರ್ಣ ಜಲಾವೃತಗೊಂಡಿದೆ.
ಆನಂದಪುರಂನ ಅರಕಟ್ಟಿನ ಹೊಳೆಯಿಂದ ಅಂಬ್ಲಿಗೊಳ ಜಲಾಶಯಕ್ಕೆ ಹರಿದು ಹೋಗುವ ಹೊಳೆ ಉಕ್ಕಿ ಹರಿದ ಪರಿಣಾಮವಾಗಿ ಜಮೀನಿಗೆ ನೀರು ನುಗ್ಗಿದ್ದು ಗುರುವಾರ ಸ್ಥಳಕ್ಕೆ ತಹಸೀಲ್ದಾರ್ ಆರ್. ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪರೀತ ಮಳೆಯಿಂದ ಈ ಭಾಗದಲ್ಲಿ ಸಾಕಷ್ಟು ಹಾನಿಯುಂಟಾಗಿದೆ. ಅರಕಟ್ಟಿನ ಹೊಳೆ ಪ್ರವಾಹದಿಂದ ಸುಮಾರು 25 ಎಕರೆಗೂ ಹೆಚ್ಚಿನ ಜಮೀನು ಜಲಾವಣತವಾಗಿದೆ. ಈ ಭಾಗದಲ್ಲಿ ರೈತರು ನಾಟಿಕಾರ್ಯವನ್ನು ಮುಗಿಸಿದ್ದರಿಂದ ಬಿತ್ತನೆ ಮಾಡಿದ ಬೀಜವೆಲ್ಲಾ ನೀರುಪಾಲಾಗಿದೆ. ಮಳೆ ಇದೇ ರೀತಿ ಮುಂದುವರೆದರೆ 150ಕ್ಕೂ ಹೆಚ್ಚು ಎಕರೆ ಜಮೀನು ಜಲಾವಣತವಾಗುವ ಆತಂಕವಿದೆ ಎಂದರು.
ಮಳೆನೀರು ಹರಿದು ಹೋಗಲು ಸರಿಯಾದ ಮಾರ್ಗ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಹೊಳೆಪಾತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾನಿಗೊಳಗಾದ ವರದಿಯನ್ನು ತಯಾರಿಸಿ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕಂದಾಯ ಇಲಾಖೆ ಅಧಿಕಾರಿಗಳು ರೈತರ ಸಂಪರ್ಕದಲ್ಲಿದ್ದು, ಹೆಚ್ಚಿನ ಅನಾಹುತ ಸಂಭವಿಸದಂತೆ ಮುಂಜಾಗಣತಾ ಕ್ರಮ ಕೈಗೊಂಡಿದ್ದಾರೆ ಎಂದರು.
ಕಂದಾಯ ಇಲಾಖೆಯ ನಂದ್ಯಪ್ಪ, ರವಿ, ಮಂಜುನಾಥ್, ಗ್ರಾಮಸ್ಥರಾದ ಬಿ.ಟಾಕಪ್ಪ, ಮಂಜಪ್ಪ, ಸುರೇಶ್ ಇನ್ನಿತರರು ಹಾಜರಿದ್ದರು.
ಜೋಗ್ ಫಾಲ್ಸ್
ಜೋಗ್ ಫಾಲ್ಸ್: ಜಲಾವೃತವಾಗಿರುವ ಬೀಸನಗದ್ದೆಗೆ ವೈದ್ಯಕೀಯ ತಪಾಸಣೆಗೆ ತೆರಳಿದ್ದ ತಾಳಗುಪ್ಪ ವೈದ್ಯಾಧಿಕಾರಿ ಡಾ. ಸುಚಿತ್ರಾ ಮತ್ತವರ ತಂಡದ ಸದಸ್ಯರು ವಾಪಸ್ ಬರುತ್ತಿದ್ದಾಗ ತೆಪ್ಪ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ತೆಪ್ಪ ಆಳವಿಲ್ಲದ ಕಡೆ ಮಗುಚಿದ್ದರಿಂದ ಅಪಾಯ ಸಂಭವಿಸಿಲ್ಲ. ಕೇವಲ 3 ಮೊಬೈಲ್ ನೀರಿನಲ್ಲಿ ಬಿದ್ದು ಹಾಳಾಗಿವೆ.
ಬೀಸನಗದ್ದೆಯಲ್ಲಿ ವರದಾ ನದಿ ಪ್ರವಾಹದಿಂದ ತತ್ತರಿಸಿರುವ ಜನ ದ್ವೀಪದ ಪ್ರದೇಶದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹ ಹೆಚ್ಚಿದ ದಿನಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಇಲ್ಲಿರುವ 25 ಕುಟುಂಬಗಳು ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಗೋಳು ಅನುಭವಿಸಬೇಕಾಗಿದ್ದು ಸರ್ಕಾರದಿಂದ ಶಾಶ್ವತ ಪರಿಹಾರ ದೊರೆತಿಲ್ಲ. ಮಳೆಗಾಲದಲ್ಲಿ ಬೋಟ್ವ್ಯವಸ್ಥೆ ಮಾಡುತ್ತದೆಯಾದರೂ ಪ್ರಯಾಣಿಕರಿಗೆ ಜಾಕೆಟ್ವ್ಯವಸ್ಥೆ ಮಾಡದಿರುವುದರಿಂದ ಜನ ಭಯದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನೆರೆ ಹೆಚ್ಚಿರುವ ದಿನಗಳಲ್ಲಿ ಸಮೀಪದ ಹೊನ್ನೇಮರಡುವಿನಿಂದ ಬೋಟ್ಗಳನ್ನು ತಂದು ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ಥಳೀಯರಾದ ಷಣ್ಮುಖ, ಅಣ್ಣಪ್ಪ ಬೆಳಗಿನ 9 ರಿಂದ ಸಂಜೆ 6 ರ ತನಕ ದೋಣಿ ನಡೆಸುತ್ತಾರೆ. ಆದರೂ ಪ್ರವಾಹ ಹೆಚ್ಚಿದಂತೆ ಎತ್ತಲೋ ತೆರಳುವ ತೆಪ್ಪದಲ್ಲಿ ಪ್ರಾಣ ಭಯದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಸಾಗರ ತಹಸೀಲ್ದಾರ್ ರಾಜಣ್ಣ ಜಲಾವೃತಗೊಂಡಿರುವ ಬೀಸನಗದ್ದೆ, ಸೈದೂರು, ತಡಗಳಲೆ ಭಾಗಗಳಿಗೆ ಬುಧವಾರ ಭೇಟಿ ನೀಡಿದ್ದು, ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

