ಪುತ್ರಿಯನ್ನೇ ಕೊಂದ ಧೂರ್ತ ತಂದೆ
ಬೆಂಗಳೂರು: ಹಣದಾಸೆಗಾಗಿ ವ್ಯಕ್ತಿಯೊಬ್ಬ ತನ್ನ ಎಂಟು ವರ್ಷದ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ನೇಹಾಸಿಂಗ್ (8) ಮೃತ ಬಾಲಕಿ. ಬೆತ್ತ ಹಾಗೂ ಲಟ್ಟಣಿಗೆಯಿಂದ ಹೊಡೆದು ತಂದೆಯೋ ಸ್ವಂತ ಮಗಳನ್ನು ಹತ್ಯೆ ಮಾಡಿದ್ದಾನೆ.
ಘಟನೆಗೆ ಕಾರಣರಾದ ನೇಹಾ ಸಿಂಗ್ ತಂದೆ ಸತ್ಯನಾರಾಯಣ ಸಿಂಗ್ ಹಾಗೂ ಆತನ ತಾಯಿ ಪದ್ಮಾಬಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲ ಪತ್ನಿಯ ಪುತ್ರಿ: ಸತ್ಯನಾರಾಯಣ್ ತನ್ನ ಮೊದಲ ಪತ್ನಿ ಆಶಾಸಿಂಗ್‌ಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ. ಆಗ ನೇಹಾಸಿಂಗ್ 10 ತಿಂಗಳ ಹಸುಗೂಸು.
ಆಶಾ ಸಾವಿನ ನಂತರ ನೇಹಾಳನ್ನು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಿ ಸಾಕುತ್ತಿದ್ದೆವು. ಈ ನಡುವೆ ಸತ್ಯನಾರಾಯಣ್ ಒಮ್ಮೆಯೂ ಮಗಳನ್ನು ನೋಡಲು ಬಂದಿರಲಿಲ್ಲ.
ಪ್ಲಾಸ್ಟಿಕ್ ಅಂಗಡಿ ಇಟ್ಟಿದ್ದ ಈತ ಮತ್ತೊಂದು ವಿವಾಹವಾಗಿ ತಾಯಿ, ಪತ್ನಿ ಹಾಗೂ ಎರಡೂವರೆ ವರ್ಷದ ಮಗನ ಜತೆ ವಾಸಿಸುತ್ತಿದ್ದ ಎಂದು ಮೊದಲ ಪತ್ನಿಯ ತಂದೆ ರಘುನಾಥಸಿಂಗ್ ತಿಳಿಸಿದ್ದಾರೆ. ಅವರು ನೀಡದ ದೂರಿನ ಆಧಾರದ ಮೇಲೆ ಈ ಸಂಬಂಧ ಹತ್ಯೆ ಪ್ರಕರಣ ದಾಖಲಾಗಿದೆ.
ಮೇ ನಲ್ಲಿ ಕರೆತಂದಿದ್ದ: ಈ ನಡುವೆ 2013ರ ಮೇ ತಿಂಗಳಲ್ಲಿ ಮನೆಗೆ ಬಂದ ಸತ್ಯನಾರಾಯಣ ತನ್ನ ಮಗಳನ್ನು ಕಳುಹಿಸಿಕೊಡಿ ಎಂದು ಕೇಳಿದ. ನಿರಾಕರಿಸಿದಾಗ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸುವುದಾಗಿ ಕಾಲಿಗೆ ಬಿದ್ದು ಕೇಳಿಕೊಂಡಿದ್ದ.
ಹೀಗಾಗಿ, ಮಗುವನ್ನು ಆತನ ಜೊತೆ ಕಳುಹಿಸಿದ್ದೆವು. ಮಗಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಆತ ಆವಲಹಳ್ಳಿಯಲ್ಲಿರುವ ಎಸ್‌ಜಿಎಂ ಶಾಲೆಗೆ ಸೇರಿಸಿದ್ದ. ನೇಹಾ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶಿವಮೊಗ್ಗದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ಆಕೆಯನ್ನು ಬೆಂಗಳೂರಿನಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಲಾಗಿತ್ತು.
ಹೆದರುತ್ತಿದ್ದ ಮಗು: ಹುಟ್ಟಿದಾಗಿನಿಂದ ನೋಡದ ಸತ್ಯನಾರಾಯಣ ಏಕಾಏಕಿ ಬೆಂಗಳೂರಿಗೆ ಕರೆತಂದಿದ್ದರಿಂದ ಮಗು ಮಂಕಾಗಿತ್ತು. ಒಂದೆರಡು ಬಾರಿ ಅಜ್ಜ ಕರೆ ಮಾಡಿದಾಗ, ನನ್ನನ್ನು ವಾಪಾಸ್ ಕರೆದುಕೊಂಡು ಹೋಗುವಂತೆ ಹಾಗೂ ಇಲ್ಲಿ ಅಜ್ಜಿ ಹಾಗೂ ತಂದೆ ಹಿಂಸೆ ಕೊಡುತ್ತಾರೆ ಎಂದು ತಿಳಿಸಿತ್ತು.
ಈ ಬಗ್ಗೆ ಕೇಳಿದಾಗ ಸತ್ಯನಾರಾಯಣ, ಮಗು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಕ್ರಮೇಣವಾಗಿ ಎಲ್ಲಾ ಸರಿಹೋಗುತ್ತದೆ ಎಂದು ಹೇಳಿದ್ದ.
ಆದರೆ, ಮೊದಲ ಪತ್ನಿ ಮೇಲಿನ ದ್ವೇಷದಿಂದ ಮತ್ತು ಮಗುವನ್ನು ಹಿಂಸಿಸಿದರೆ ಅಜ್ಜನಿಂದ ಮತ್ತೆ ಹಣ ಪಡೆಯಬಹುದು ಎಂಬ ಕಾರಣಕ್ಕೆ ಮಗು ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ರಘುನಾಥ್‌ಸಿಂಗ್ ತಿಳಿಸಿದರು.
ಆಸ್ಪತ್ರೆಗೆ ದಾಖಲು: ಮೊಮ್ಮಗಳು ಮೃತಪಟ್ಟ ಸುದ್ದಿ ಕೇಳಿ ಗುರುವಾರ ರಾತ್ರಿಯೇ ರಘುನಾಥ್ ಸಿಂಗ್ ಬೆಂಗಳೂರಿಗೆ ಬಂದರು. ಅವರ ಪತ್ನಿ ವಸಂತಾ ಸಿಂಗ್ ಹಾಗೂ ಕುಟುಂಬ ಸದಸ್ಯರು ಸಹ ಆಗಮಿಸಿದರು.
ದುಃಖ ತಾಳದೆ ನೇಹಾಳ ಅಜ್ಜಿ ಆಸ್ಪತ್ರೆ ಆವರಣದಲ್ಲೇ ಕುಸಿದು ಬಿದ್ದರು. ಕುಟುಂಬ ಸದಸ್ಯರು ಎಷ್ಟು ಸಾಂತ್ವನ ಹೇಳಿದರೂ ಸಮಾಧಾನಗೊಳ್ಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಇದರಿಂದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಹಣಕ್ಕಾಗಿಯೇ ಕೃತ್ಯ ಎಸಗಿದ್ದಾನೆ
ಇತ್ತೀಚೆಗಷ್ಟೇ ನೇಹಾಳನ್ನು ಕರೆದುಕೊಂಡು ಬಂದಿದ್ದ. ಹಣಕ್ಕಾಗಿಯೇ ಆತ ಈ ರೀತಿ ಮಾಡಿದ್ದಾನೆ. ಹಣದ ದಾಹದಿಂದ ನನ್ನ ತಂಗಿಯನ್ನು ಬಲಿ ತೆಗೆದುಕೊಂಡ. ಆತನ ದಾಹ ಇನ್ನೂ ತೀರಿಲ್ಲ. ಈಗ ಆ ಮುಗ್ಧ ಮಗುವನ್ನೂ ಬಲಿ ತೆಗೆದುಕೊಂಡಿದ್ದಾನೆ.
-ಶಿಲ್ಪಾ ನೇಹಾಳ ದೊಡ್ಡಮ್ಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

